ADVERTISEMENT

ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಮಂಡಳಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಪ್ರಯುಕ್ತ ಉಂಟಾಗುವ ವಾಯು ಮಾಲಿನ್ಯ ಮತ್ತು ಶಬ್ದಮಾಲಿನ್ಯವನ್ನು ನಿಯಂತ್ರಿಸಲು ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇರುವ  ಅಂಶ ಬೆಳಕಿಗೆ ಬಂದಿದೆ.

ಕರ್ನಾಟಕ ಹೈಕೋರ್ಟ್‌ ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಗರದ ವಾಯು ಮಾಲಿನ್ಯ ಹಾಗೂ ಶಬ್ದಮಾಲಿನ್ಯವನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

‘ದೀಪಾವಳಿ ಪ್ರಯುಕ್ತ ಈ ವರ್ಷ  ಮಂಡಳಿಯಿಂದ ಯಾವುದೇ ಕಠಿಣ ಕ್ರಮಗಳನ್ನು  ಕೈಗೊಂಡಿಲ್ಲ. ಪೊಲೀಸ್‌ ಇಲಾಖೆ ಹಾಗೂ ಮಾರಾಟ ತೆರಿಗೆ ಇಲಾಖೆಗೆ ಅಗ್ನಿಶಾಮಕ ಹಾಗೂ ಸ್ಫೋಟಕ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಮನವಿ ಮಾಡಲಾಗಿದೆ. ಈ ಕಾಯ್ದೆಯು ವಸತಿ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸುತ್ತದೆ’ ಎಂದು ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.

‘ಶಿಕ್ಷಣ ಕೇಂದ್ರಗಳು, ಆಸ್ಪತ್ರೆ ಹಾಗೂ ಸರ್ಕಾರಿ ಮತ್ತು ನ್ಯಾಯಾಲಯದ ಆಸುಪಾಸಿನ ನಿಶ್ಯಬ್ದ ವಲಯಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಬೇರೆ ಸ್ಥಳಗಳಲ್ಲಿ ಸರಾಸರಿ ಶಬ್ದದ ಪ್ರಮಾಣವು 125 ಡೆಸಿಬಲ್‌ ಇರಬಹುದು’ ಎಂದು ಹೇಳಿದರು.

‘ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ವತಃ ತಾನೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಸತಿ ಪ್ರದೇಶದಲ್ಲಿಯೇ ವಾಣಿಜ್ಯ ಪ್ರದೇಶಕ್ಕಿಂತ ಹೆಚ್ಚಿನ ಮಾಲಿನ್ಯವಾಗುತ್ತಿದೆ. ಅಲ್ಲದೇ, ವಸತಿ ಪ್ರದೇಶದಲ್ಲಿಯೇ ಹೆಚ್ಚಿನ ಪಟಾಕಿಗಳನ್ನು ಸಿಡಿಸಲಾಗುತ್ತದೆ’ ಎಂದು ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಎನ್‌.ನಂದಿನಿ ಅಭಿಪ್ರಾಯಪಟ್ಟರು.

‘ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಗಳಿಂದ ವಾಯು ಮತ್ತು ಶಬ್ದಮಾಲಿನ್ಯ ಉಂಟಾಗುತ್ತದೆ. ಪಟಾಕಿಗಳನ್ನು ಪೊಟಾಶಿಯಂ ನೈಟ್ರೇಟ್‌, ಸಲ್ಫರ್‌, ಇದ್ದಿಲು ಪುಡಿ ಹಾಗೂ ಇನ್ನಿತರೆ ರಾಸಾಯನಿಕ ವಸ್ತುಗಳಾದ ಬೇರಿಯಂ ಪುಡಿ, ಮ್ಯಾಗ್ನೇಶಿಯಂ ಮತ್ತು ಕಬ್ಬಿಣದ ಪುಡಿಯಿಂದ ಮಾಡಲಾಗುತ್ತದೆ. ಇವುಗಳು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ’ ಎಂದು ವಿವರಿಸಿದರು.

‘ಕಳೆದ ಬಾರಿ ನಮ್ಮ ವಿಭಾಗವು ಪಟಾಕಿಯಿಂದ ನಗರದಲ್ಲಿ ಉಂಟಾದ ಪರಿಸರ ಮಾಲಿನ್ಯದ ಕುರಿತು ಅಧ್ಯಯನವನ್ನು ಕೈಗೊಂಡಿತ್ತು. ಅದರಲ್ಲಿ ಪಟಾಕಿಯಿಂದಾಗಿ ಗಾಳಿಯಲ್ಲಿ ಅತಿ ಭಾರದ ಲೋಹಗಳು ಪತ್ತೆಯಾಗಿದ್ದವು’ ಎಂದು ಅವರು ಹೇಳಿದರು.

ಪರಿಸರ ಸ್ನೇಹಿ ದೀಪಾವಳಿ
ಬೆಂಗಳೂರು ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ 60  ಮಂದಿ ಈ ಬಾರಿ ಪರಿಸರ ಸ್ನೇಹಿ ದೀಪಾವಳಿಯನ್ನು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಆಚರಿಸಲು ತೀರ್ಮಾನಿಸಿದ್ದೇವೆ. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿ ಸಿಡಿಸುವ ಹಬ್ಬವಲ್ಲ.
– ಎನ್‌. ನಂದಿನಿ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥೆ, ಬೆಂಗಳೂರು ವಿವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.