ADVERTISEMENT

ಮುಂದೆ ಟಾರ್‌ ಹಾಕಿ, ಹಿಂದಿನಿಂದ ಅಗೆದರು!

ಬೀದಿ–ಬೀದಿಯಲ್ಲೂ ಜಲಮಂಡಳಿ ಕಾಮಗಾರಿ, ಬಿಬಿಎಂಪಿಯ ಸಮನ್ವಯ ಸಮಿತಿ ಕೇಳೊರಿಲ್ಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಂಗಳೂರು:  ಒಂದು ಕಡೆಯಲ್ಲಿ ನಗರದ ರಸ್ತೆಗಳಿಗೆ ಬಿಬಿಎಂಪಿ ಟಾರ್ ಹಾಕುತ್ತಿದೆ. ಇನ್ನೊಂದು ಕಡೆಯಲ್ಲಿ ಆ ರಸ್ತೆಗಳನ್ನು ಮನ ಬಂದಂತೆ ಜಲಮಂಡಳಿ ಅಗೆದು ಹಾಕುತ್ತಿದೆ. ಕಳೆದೆರಡು ತಿಂಗಳಿನಿಂದ ಬಿಬಿಎಂಪಿ ಹದಗೆಟ್ಟ ರಸ್ತೆಗಳ ದುರಸ್ತಿ ಕಾಮಗಾರಿ ನಡೆಸುತ್ತಿದೆ. ಹಲವು ರಸ್ತೆಗಳಿಗೆ ಟಾರ್‌ ಹಾಕಲಾಗಿದೆ. ಟಾರ್‌ ಹಾಕಿದ ವಾರದಲ್ಲೇ ಹಲವು ರಸ್ತೆಗಳನ್ನು ಅಗೆಯಲಾಗಿದೆ.

ಪದ್ಮನಾಭನಗರ ಮುಖ್ಯ ರಸ್ತೆ, ವೈಟ್‌ಫೀಲ್ಡ್‌, ಮಲ್ಲೇಶ್ವರ, ಮಹಾಲಕ್ಷ್ಮಿ ಬಡಾವಣೆ, ಶಂಕರಮಠ ಮತ್ತಿತರ ಕಡೆಗಳಲ್ಲಿ ಕಳೆದೊಂದು ವಾರದಲ್ಲಿ ರಸ್ತೆಗಳನ್ನು ಅಗೆದು ಹಾಳುಗೆಡವಲಾಗಿದೆ. ಈ ರೀತಿಯ ಕೆಲಸಕ್ಕೆ ತಡೆಹಾಕಿ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲೇ  ಬಿಬಿಎಂಪಿ ತಿಂಗಳ ಹಿಂದೆ ಸಮನ್ವಯ ಸಮಿತಿ ರಚಿಸಿದೆ. ಆದರೂ ಹೊಸ ರಸ್ತೆಗಳನ್ನು ಅಗೆಯುವುದು ಇನ್ನೂ ನಿಂತಿಲ್ಲ. ರಸ್ತೆ ಅಗೆಯುವ ಮುನ್ನ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಈ ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ಕುಡಿಯುವ ನೀರು ಪೂರೈಕೆ ಹಾಗೂ ಒಳ ಚರಂಡಿ ಕೊಳವೆ ತುರ್ತು ದುರಸ್ತಿ ನೆಪದಲ್ಲಿ ಜಲಮಂಡಳಿ ಸಿಬ್ಬಂದಿ ರಸ್ತೆಯನ್ನು ಅಗೆಯುತ್ತಾರೆ. ಅಲ್ಲದೇ ಹೊಸದಾಗಿ ಕೊಳವೆ ಅಳವಡಿಸುವ ಉದ್ದೇಶಕ್ಕೂ ರಸ್ತೆ ಅಗೆಯಲಾಗುತ್ತದೆ. ಆದರೆ, ಬಹುಪಾಲು ಸಂದರ್ಭ ಜಲಮಂಡಳಿಯು ರಸ್ತೆ ಅಗೆಯುವುದಕ್ಕೆ ಪಾಲಿಕೆಯಿಂದ ಅನುಮತಿ ಪಡೆಯುವುದಿಲ್ಲ.

ರಸ್ತೆಗಳನ್ನು ಮನಸ್ಸಿಗೆ ಬಂದಂತೆ  ಅಗೆಯಲಾಗುತ್ತಿದೆ. ಆದರೆ, ಅದೇ ಆಸಕ್ತಿ ದುರಸ್ತಿ ಕಾರ್ಯದಲ್ಲಿ ತೋರುವುದಿಲ್ಲ.  ಅಗೆದ ಭಾಗವನ್ನು ಸರಿಯಾಗಿ ಮುಚ್ಚದ ಕಾರಣ ಮಳೆ ನೀರು ನಿಂತು ಗುಂಡಿ ನಿರ್ಮಾಣವಾಗುತ್ತಿದೆ. ಇದರಿಂದ ಇಡೀ ರಸ್ತೆ ಹದಗೆಡುತ್ತಿದೆ. ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

‘ರಸ್ತೆಗಳು ಹಾಳಾಗಿವೆ’: ‘ಐಟಿಪಿಎಲ್‌, ವೈಟ್‌ಫೀಲ್ಡ್‌, ನಲ್ಲೂರಹಳ್ಳಿ ಮತ್ತಿತರ ಕಡೆಗಳಲ್ಲಿ 5 ಮೀಟರ್‌ ಅಗಲ ರಸ್ತೆ ಅಗೆದಿದ್ದಾರೆ. 15 ಅಡಿ ಆಳ ಅಗೆದರೆ ರಸ್ತೆ ಉಳಿಯಲು ಸಾಧ್ಯವೇ’ ಎಂದು ಬಿಬಿಎಂಪಿ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಕೆ.ಟಿ. ನಾಗರಾಜ್‌ ಪ್ರಶ್ನಿಸಿದರು.
‘ಟಾರ್ ಹಾಕಿದ ಮರುದಿನವೇ ಕನ್ನಿಂಗ್‌ಹ್ಯಾಂ ರಸ್ತೆಯನ್ನು ಜಲಮಂಡಳಿ ಅಗೆದಿದೆ. ಜೆ.ಸಿ. ರಸ್ತೆಯ ಶಿವಾಜಿ ಥಿಯೇಟರ್‌ ಬಳಿಯಲ್ಲೂ ಅತ್ತಿಮಬ್ಬೆ ರಸ್ತೆಯಲ್ಲೂ ಇದೇ ರೀತಿ ಮಾಡಲಾಗಿದೆ. ಈಗ ಪದ್ಮನಾಭನಗರ ಮುಖ್ಯ ರಸ್ತೆಯನ್ನು ಅಗೆಯುತ್ತಿದ್ದಾರೆ. ಡಾಂಬರೀಕರಣ ಮಾಡುವ ವರೆಗೆ ಸುಮ್ಮನಿರುತ್ತಾರೆ. ಡಾಂಬರೀಕರಣವಾದ ಮರುದಿನ ಗುದ್ದಲಿ ಹಿಡಿದುಕೊಂಡು ಬರುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನೀರಿನ ಸಂಪರ್ಕ ಒದಗಿಸಲು, ಪೈಪ್‌ಲೈನ್‌ ದುರಸ್ತಿ, ನೀರಿನ ಸೋರಿಕೆ ತಡೆಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ಕಾರಣ ನೀಡುತ್ತಾರೆ. ಹೀಗಾಗಿ ಅನುಮತಿ ನೀಡಲಾಗುತ್ತಿದೆ. ಅಲ್ಲದೆ ಕೊನೆಯ ಕ್ಷಣದಲ್ಲಿ ಅನುಮತಿ ಕೇಳುತ್ತಾರೆ. ಅನುಮತಿ ನೀಡದೆ ಇರಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

‘ನಗರದ ರಸ್ತೆಗಳ ನಿರ್ವಹಣೆ ಪಾಲಿಕೆ ಜವಾಬ್ದಾರಿ. ರಸ್ತೆ ಹದಗೆಟ್ಟರೆ ಜನರಿಗೆ ನಾವೇ ಉತ್ತರಿಸಬೇಕು. ಹೀಗಾಗಿ ಎಲ್ಲ ಇಲಾಖೆಗಳು ರಸ್ತೆ ಅಗೆಯುವ ಮುನ್ನ ಸಮನ್ವಯ ಸಮಿತಿಯ ಅನುಮತಿ ಪಡೆಯಬೇಕಿದೆ’ ಎಂದು ಅವರು ತಿಳಿಸಿದರು.

‘ಸೋರಿಕೆ ತಡೆಗೆ ಅಗೆತ ಅನಿವಾರ್ಯ’: ‘ನೀರಿನ ಸೋರಿಕೆ ತಡೆಗಟ್ಟಲು ರಸ್ತೆ ಅಗೆತ ಅನಿವಾರ್ಯ. ಇಲ್ಲದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಸಣ್ಣ ಪುಟ್ಟ ಕಾಮಗಾರಿಗಳಿಗೆ ವಲಯ ಮಟ್ಟದಲ್ಲೇ ಎಂಜಿನಿಯರ್‌ಗಳು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆದು ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಾರೆ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 48ರಷ್ಟು ಇದೆ. ಇದನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ದಕ್ಷಿಣ ವಿಭಾಗ,  ಕೇಂದ್ರ ವಿಭಾಗ ಹಾಗೂ ಪಶ್ಚಿಮ ವಲಯದಲ್ಲಿ ನೀರಿನ ಸೋರಿಕೆ ತಡೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನೀರಿನ ಸೋರಿಕೆ ಪತ್ತೆ ಹಚ್ಚಲು ರಸ್ತೆ ಅಗೆತ ಅನಿವಾರ್ಯ. ಭವಿಷ್ಯದಲ್ಲಿ ಮತ್ತೆ ರಸ್ತೆ ಅಗೆಯುವ ಪ್ರಮೇಯ ಎದುರಾಗುವುದಿಲ್ಲ. ಈಗ ಇದನ್ನು ಸಹಿಸಿಕೊಳ್ಳಬೇಕಿದೆ’ ಎಂದು ಅವರು ತಿಳಿಸಿದರು.

‘ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೊಂದಾಣಿಕೆ ಕೊರತೆಯಿಂದ ತೆರಿಗೆ ಹಣ ಪೋಲಾಗುತ್ತಿದೆ. ಅನುಮತಿ ಪಡೆಯದೆ ರಸ್ತೆ ಅಗೆದರೆ ದೊಡ್ಡ ಮಟ್ಟದ ದಂಡ ವಿಧಿಸಬೇಕು. ದಂಡ ಮೊತ್ತವನ್ನು ಅಧಿಕಾರಿಗಳ ಸಂಬಳದಿಂದಲೇ ಕಡಿತ ಮಾಡಬೇಕು’ ಎಂದು ಬಸ್‌ ಪ್ರಯಾಣಿಕರ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ್‌   ಸಲಹೆ ನೀಡಿದರು.

ಜಲಮಂಡಳಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು
ಪೊಲೀಸರ ಅನುಮತಿ ಪಡೆಯದೆ ರಸ್ತೆ ಅಗೆದು ಸಂಚಾರ ದಟ್ಟಣೆಗೆ ಕಾರಣವಾದ ಆರೋಪದಲ್ಲಿ ಜಲಮಂಡಳಿ ಅಧಿಕಾರಿಗಳ ವಿರುದ್ಧ ಕೆ.ಆರ್.ಪುರ ಸಂಚಾರ ಪೊಲೀಸರು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ.

ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಮೌಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಮೇಶ್‌, ಸಹಾಯಕ ಎಂಜಿನಿಯರ್‌ ಹನುಮಂತ ಘಂಟಿ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಡಳಿಯು ವೈಟ್‌ಫೀಲ್ಡ್‌ ಐಟಿಪಿಎಲ್‌ ಮುಖ್ಯ ರಸ್ತೆಯ ಇಎಸ್‌ಐ ಸರ್ಕಲ್‌ ಬಳಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಪೈಪ್‌ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಅಗತ್ಯ ಪೂರ್ವಸಿದ್ಧತೆ ಮಾಡಿರಲಿಲ್ಲ. ಅಲ್ಲದೆ ಇದಕ್ಕೆ ಪೊಲೀಸರ ಅನುಮತಿ ಪಡೆದಿರಲಿಲ್ಲ. ಕಾಮಗಾರಿಯಿಂದ ಕಳೆದ ಒಂದು ವಾರದಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿತ್ತು.

‘ಐಟಿಪಿಎಲ್‌ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಸಾಫ್ಟ್‌ವೇರ್‌ ಉದ್ಯೋಗಿಗಳು ಸಂಚಾರ ನಡೆಸುತ್ತಾರೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿರುತ್ತದೆ. ಜಲಮಂಡಳಿಯ ಕಾಮಗಾರಿಯಿಂದಾಗಿ ದಟ್ಟಣೆ ದುಪ್ಪಟ್ಟಾಗಿದೆ. ಜಲಮಂಡಳಿ ಪೂರ್ವಸಿದ್ಧತೆ ಮಾಡದೆ ಈ ರಸ್ತೆಗಳನ್ನು ಅಗೆದಿದೆ. ಇದರಿಂದಾಗಿ ಕೆಲಸ ಪೂರ್ಣಗೊಳ್ಳುವುದು ವಿಳಂಬವಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ವಾರದ ಹಿಂದೆ ಜಲಮಂಡಳಿ ಕಾಮಗಾರಿ ಆರಂಭಿಸಿತ್ತು. ಕೆಲವೇ ಗಂಟೆಗಳಲ್ಲಿ ಈ ಕೆಲಸ ಪೂರ್ಣಗೊಳಿಸಬಹುದಿತ್ತು. ಬಿಬಿಎಂಪಿ ಅಥವಾ ಪೊಲೀಸರಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಮಂಡಳಿಯ ಧೋರಣೆ ಯಿಂದಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಪ್ರಕರಣ ದಾಖಲಿಸಿ ನೋಟಿಸ್‌ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ಪಾಲಿಸಬೇಕಾದ ಮಾರ್ಗಸೂಚಿಗಳು...
ರಸ್ತೆ ಅಗೆಯುವ ಮುನ್ನ ಜಲಮಂಡಳಿ, ಬೆಸ್ಕಾಂ, ಬಿಎಸ್ಸೆನ್ನೆಲ್‌ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಬಿಬಿಎಂಪಿ ಇತ್ತೀಚೆಗೆ ಆದೇಶ ಹೊರಡಿಸಿದೆ.

* ಕಾಮಗಾರಿ ಆರಂಭಿಸುವ ಮುನ್ನ ಸಮನ್ವಯ ಸಮಿತಿಗೆ ಮನವಿ ಸಲ್ಲಿಸಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
*ವಾರ್ಡ್‌ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಬೇಕು.
*ರಸ್ತೆ ಅಗೆಯುವ ಮುನ್ನ ಬೃಹತ್‌ ರಸ್ತೆಗಳು ಮತ್ತು ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕು.
*ರಸ್ತೆ ಅಗೆಯುವ ಸಂಸ್ಥೆಗಳು  ಕನಿಷ್ಠ ಎರಡು ವರ್ಷ ಆ ರಸ್ತೆಯನ್ನು ನಿರ್ವಹಣೆ ಮಾಡಬೇಕು.
*ಸಮನ್ವಯ ಸಮಿತಿ ನೀಡಿದ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು.
*ಹೆಚ್ಚಿನ ಕಾಲಾವಕಾಶಕ್ಕಾಗಿ 15 ದಿನ ಮುಂಚಿತವಾಗಿ ಮನವಿ ಸಲ್ಲಿಸಬೇಕು.
*ರಸ್ತೆ ಅಗೆಯುವಾಗ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾಮಗಾರಿ ನಡೆಯುತ್ತಿದೆ ಎಂದು ಫಲಕ ಅಳವಡಿಸಬೇಕು.  ಈ ಬಗ್ಗೆ ಜಾಗೃತಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.