ADVERTISEMENT

ಮುಗಿದರೂ ಮುಗಿಯದ ಸ್ಥಿತಿಯಲ್ಲಿ...

‘ನಮ್ಮ ಮೆಟ್ರೊ’ದ ನ್ಯಾಷನಲ್‌ ಕಾಲೇಜು– ಪುಟ್ಟೇನಹಳ್ಳಿ ಮಾರ್ಗ

ಎನ್.ಸಿದ್ದೇಗೌಡ
Published 27 ಫೆಬ್ರುವರಿ 2015, 19:46 IST
Last Updated 27 ಫೆಬ್ರುವರಿ 2015, 19:46 IST

ಬೆಂಗಳೂರು: ‘ನಮ್ಮ ಮೆಟ್ರೊ’ದ ನ್ಯಾಷನಲ್‌ ಕಾಲೇಜಿನಿಂದ ಪುಟ್ಟೇನಹಳ್ಳಿ­ವರೆಗಿನ 8 ಕಿ.ಮೀ ಉದ್ದದ ಮಾರ್ಗದಲ್ಲಿ ಹಳಿ ಅಳವಡಿಕೆ ಕಾರ್ಯ ಪೂರ್ಣ­ಗೊಂಡಿದೆ. ಮಾರ್ಗದ ಎಲ್ಲ ಎಂಟು ನಿಲ್ದಾಣಗಳ ನಿರ್ಮಾಣ ಕಾಮ­ಗಾರಿಯೂ ಬಹುತೇಕ ಮುಕ್ತಾಯ­ಗೊಂಡಿದೆ. ಆದರೆ, ಡಿಪೋ ಇಲ್ಲದ ಒಂದೇ ಕಾರಣಕ್ಕಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಿಲ್ಲ.

ಮಾರ್ಗದ ಉದ್ದಕ್ಕೂ ವಿದ್ಯುತ್‌ ಪೂರೈ­ಸುವ ‘ಥರ್ಡ್‌ ರೈಲ್‌’, ನಿಲ್ದಾಣ­ಗಳಲ್ಲಿ ಸಿಗ್ನಲಿಂಗ್‌, ಎಸ್ಕಲೇಟರ್‌, ಲಿಫ್ಟ್‌– ಇವೇ ಮೊದಲಾದ ವಿದ್ಯುತ್‌ ಮತ್ತು ಮೆಕ್ಯಾನಿಕಲ್‌ ಕಾರ್ಯಗಳನ್ನು (ಇ ಅಂಡ್‌ ಎಂ) ಬಾಕಿ ಉಳಿಸಿಕೊಳ್ಳ­ಲಾಗಿದೆ. ಈ ‘ಇ ಅಂಡ್‌ ಎಂ’ ಕೆಲಸಗಳು ಮುಗಿದ ಬಳಿಕವಷ್ಟೇ ಕೈಗೊಳ್ಳಬೇಕಾದ ಸಣ್ಣ ಪುಟ್ಟ ಸಿವಿಲ್‌ ಕಾಮಗಾರಿಯೂ ಬಾಕಿ ಇದೆ.

ಇದರಿಂದಾಗಿ ಈ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣ ಕಾರ್ಯ ಮುಗಿದರೂ ಮುಗಿಯದ ಸ್ಥಿತಿಯಲ್ಲಿ­ದ್ದಂತೆ ಭಾಸವಾಗುತ್ತಿದೆ. ನಿಲ್ದಾಣಗಳ ನಿರ್ಮಾಣ ಪೂರ್ಣಗೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕೇನೋ ಎಂಬ ಭಾವನೆ ಸಾರ್ವಜನಿಕರ ಮನದಲ್ಲಿ ಮೂಡಿದೆ. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮದ ಲೆಕ್ಕಾಚಾರವೇ ಬೇರೆ.

‘ಇ ಅಂಡ್‌ ಎಂ’ ಕೆಲಸಗಳನ್ನು ಕೈಗೊ­ಳ್ಳಲು ವಿದ್ಯುತ್‌ ಸಂಪರ್ಕ ಬೇಕು. ರೈಲು ಸಂಚಾರ ಆರಂಭವಾಗುವುದಕ್ಕೆ ಸಾಕಷ್ಟು ಮುಂಚೆಯೇ ವಿದ್ಯುತ್‌ ಸಂಪರ್ಕ ಪಡೆ­ದು­ಕೊಂಡರೆ ಅನಗತ್ಯ­ವಾಗಿ ಭಾರಿ ಪ್ರಮಾ­ಣದ ಶುಲ್ಕವನ್ನು ಪಾವತಿಸ­ಬೇಕಾ­ಗುತ್ತದೆ. ಇದಲ್ಲದೇ ಪ್ರತಿ ನಿಲ್ದಾಣ­ಗ­ಳಲ್ಲೂ ಸ್ವಚ್ಛತೆ ಮತ್ತು ಭದ್ರತಾ ಕಾರ್ಯ­ಗಳಿಗೆ ಸಿಬ್ಬಂದಿಯನ್ನೂ ನಿಯೋ­ಜಿಸ­ಬೇಕಾಗುತ್ತದೆ. ಇದೆಲ್ಲ ಅನಗತ್ಯ ವೆಚ್ಚ.

ರೈಲು ಸಂಚಾರ ಆರಂಭವಾಗುವು­ದಕ್ಕೆ ಮೂರು ತಿಂಗಳ ಮೊದಲು ‘ಇ ಅಂಡ್‌ ಎಂ’ ಕೆಲಸಗಳನ್ನು ಕೈಗೊಳ್ಳಲು ನಿಗಮವು ಉದ್ದೇಶಿಸಿದೆ. ಈ ಮಾರ್ಗಕ್ಕೆ ಪೀಣ್ಯದ ಡಿಪೋ ಸಂಪರ್ಕ ಸಿಗಲು ನ್ಯಾಷನಲ್‌ ಕಾಲೇಜಿನಿಂದ ಉತ್ತರ ದಿಕ್ಕಿಗೆ ಮೆಜೆಸ್ಟಿಕ್‌­ನಿಂದಾಚೆಗೆ ಪ್ಲಾಟ್‌­ಫಾರಂ ರಸ್ತೆವರೆಗೆ ಪ್ರಗತಿಯಲ್ಲಿರುವ ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲೇಬೇಕು.

‘ಸದ್ಯದ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್‌ ವೇಳೆಗೆ ಸುರಂಗ ಮಾರ್ಗ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಒಮ್ಮೆ ಸುರಂಗ ಮಾರ್ಗ ಪೂರ್ಣ­ಗೊಂಡರೆ ಈಗಾಗಲೇ ಪೀಣ್ಯದಿಂದ ಸಂಪಿಗೆ ರಸ್ತೆವರೆಗೆ ಸಂಚರಿಸುತ್ತಿರುವ ರೈಲುಗಳನ್ನು ದಕ್ಷಿಣ ಕಾರಿಡಾರ್‌ ಕಡೆಗೆ ಓಡಿಸಬಹುದು. ಜೂನ್‌– ಜುಲೈ ವೇಳೆಗೆ ವಿದ್ಯುತ್‌ ಸಂಪರ್ಕ ಪಡೆದು­ಕೊಂಡು ‘ಇ ಅಂಡ್‌ ಎಂ’ ಕೆಲಸಗಳನ್ನು ಪ್ರಾರಂಭಿಸಲು ನಿಗಮವು ಇಚ್ಛಿಸಿದೆ’ ಎಂದು ಮಾರ್ಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಹಾ­ಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಲ್ದಾಣಗಳ ಸ್ಥಿತಿಗತಿ: 2009ರ ಜೂನ್‌ನಲ್ಲಿ ಎಲ್‌ ಅಂಡ್‌ ಟಿ ಕಂಪೆನಿ­ಯವರು ನ್ಯಾಷನಲ್‌ ಕಾಲೇಜು, ಲಾಲ್‌­ಬಾಗ್‌ ಮತ್ತು ಸೌತ್‌ ಎಂಡ್‌ ವೃತ್ತದ ನಿಲ್ದಾಣಗಳ ನಿರ್ಮಾಣ ಕಾಮಗಾರಿ­ಯನ್ನು ಆರಂಭಿಸಿದರು. 2013ರ ಮಾರ್ಚ್‌ ಹೊತ್ತಿಗೆ ನಿರ್ಮಾಣ ಕಾರ್ಯ­ವನ್ನು ಶೇ 95ಕ್ಕಿಂತ ಹೆಚ್ಚು ಪೂರ್ಣಗೊಳಿಸಿದರು. ಕೆಲಸ ಬೇಗ ಮಾಡಿದರೂ ಗುತ್ತಿಗೆದಾರ ಸಂಸ್ಥೆಯಿಂದ ನಿಲ್ದಾಣವನ್ನು ನಿಗಮವು ತನ್ನ ವಶಕ್ಕೆ ಪಡೆದುಕೊಂಡಿಲ್ಲ.

ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳ ನಿರ್ಮಾಣ ಕಾಮಗಾರಿ­ಯನ್ನು ಐವಿಆರ್‌ಸಿಎಲ್‌ ಕಂಪನಿಯು ಆರಂಭಿಸಿತು. ಈ ಎರಡೂ ನಿಲ್ದಾಣ­ಗಳಲ್ಲಿ ‘ಫಾಲ್ಸ್‌ ಸೀಲಿಂಗ್‌’, ಗೋಡೆಗಳ ಹೊರ ಭಾಗಕ್ಕೆ ಅಲ್ಯೂಮಿನಿಯಂ ಕ್ಲಾಡಿಂಗ್‌ ಹಾಗೂ ಗೋಡೆಗಳ ಒಳಭಾಗ ಮತ್ತು ಪ್ಲಾಟ್‌ಫಾರಂಗೆ ಟೈಲ್ಸ್‌ ಅಳವಡಿಸುವ ಕಾರ್ಯ ಈಗ ನಡೆದಿದೆ. ತ್ವರಿತವಾಗಿ ಪೂರ್ಣ­ಗೊಳಿಸುವಂತೆ ಗುತ್ತಿಗೆದಾರರಿಗೆ ನಿಗಮವು ತಾಕೀತು ಮಾಡಿದೆ.

2010ರ ಮೇ ತಿಂಗಳಲ್ಲಿ ಬನಶಂಕರಿ, ಜೆ.ಪಿ.ನಗರ ಮತ್ತು ಪುಟ್ಟೇನಹಳ್ಳಿ ನಿಲ್ದಾಣ­­ಗಳ ಕಾಮಗಾರಿಯನ್ನು ‘ಜೋಶಿ ಮೋದಿ ಕನ್ಸಟ್ರಕ್ಷನ್‌’ (ಜೆಎಂಸಿ) ಕಂಪೆ­ನಿಯು ಕೈಗೆತ್ತಿಕೊಂಡಿತು. ಬನಶಂಕರಿ ನಿಲ್ದಾಣದಲ್ಲಿ ಮಾತ್ರ ಶೇ 88ರಷ್ಟು ಕಾಮಗಾರಿ ಪೂರ್ಣ­ಗೊಂಡಿದೆ. ಉಳಿದೆ­ರಡು ನಿಲ್ದಾಣಗಳಲ್ಲಿ ಶೇ 94ರಷ್ಟು ಕಾಮಗಾರಿ ಮುಗಿದಿದೆ.

ಶೀಘ್ರ ರೈಲು ಸಂಚಾರಕ್ಕೆ ಚಿಂತನ– ಮಂಥನ
ಈ ಮಾರ್ಗದಲ್ಲಿ ಆದಷ್ಟು ಬೇಗ ರೈಲು ಸಂಚಾರ ಪ್ರಾರಂಭಿಸಲು ಕನಕಪುರ ರಸ್ತೆಯ ಯಲಚೇನಹಳ್ಳಿಯಲ್ಲಿ ತಾತ್ಕಾಲಿಕ ಡಿಪೋ ನಿರ್ಮಿಸಿದರೆ ಹೇಗೆ ಎಂಬ ಚಿಂತನೆಯೂ ನಡೆದಿತ್ತು. ‌ಕಾಯಂ ಡಿಪೋ ನಿರ್ಮಾಣಕ್ಕೆ ₹ 150 ಕೋಟಿ ವೆಚ್ಚವಾದರೆ, ತಾತ್ಕಾಲಿಕ ಡಿಪೋ ನಿರ್ಮಾಣಕ್ಕೆ ಅದರ ಅರ್ಧದಷ್ಟು ವೆಚ್ಚವಾಗುತ್ತದೆ. ಹೇಗಿದ್ದರೂ ಎರಡನೇ ಹಂತದ ಯೋಜನೆಯಲ್ಲಿ ಪುಟ್ಟೇನಹಳ್ಳಿಯಿಂದ ಅಂಜನಾಪುರದವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾಗಲಿದೆ. ಅಂಜನಾಪುರದಲ್ಲಿ ಕಾಯಂ ಡಿಪೋ ಕೂಡ ನಿರ್ಮಾಣಗೊಳ್ಳಲಿದೆ. ಹೀಗಾಗಿ ತಾತ್ಕಾಲಿಕ ಡಿಪೋ ನಿರ್ಮಾಣ ಕಾರ್ಯಸಾಧುವಲ್ಲ ಎಂದು ಆ ಚಿಂತನೆಯನ್ನು ಕೈ ಬಿಡಲಾಯಿತು.

ಕ್ರೇನ್‌ನಿಂದ ರೈಲು ಎತ್ತಿಟ್ಟರೆ ಹೇಗೆ?
ನ್ಯಾಷನಲ್‌ ಕಾಲೇಜಿನಿಂದ ಸಂಪಿಗೆ ರಸ್ತೆವರೆಗೆ ಸುರಂಗ ಸಿದ್ಧವಾಗುವುದರೊಳಗೆ ಈ ಮಾರ್ಗದಲ್ಲಿ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಲು ನಿಗಮವು ಮತ್ತೊಂದು ಚಿಂತನೆ ನಡೆಸಿದೆ. ರೈಲು ಗಾಡಿಯನ್ನು ಕ್ರೇನ್‌ ಸಹಾಯದಿಂದ ಈ ಮಾರ್ಗದ ಹಳಿಗಳ ಮೇಲೆ ಇರಿಸಿ, ಪರೀಕ್ಷಾರ್ಥ ಸಂಚಾರ ನಡೆಸಬಾರದೇಕೆ ಎಂಬ ಬಗ್ಗೆ ನಿಗಮವು ಯೋಚಿಸುತ್ತಿದೆ. ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.

ಭೂ ಸ್ವಾಧೀನ ತಕರಾರಿನಿಂದಲೂ ವಿಳಂಬ
ಬನಶಂಕರಿ, ಸೌತ್‌ಎಂಡ್‌ ಮತ್ತು ಲಾಲ್‌ಬಾಗ್‌ ನಿಲ್ದಾಣಗಳ ನಿರ್ಮಾಣ ಕಾರ್ಯ ವಿಳಂಬವಾಗಲು ಭೂ ಸ್ವಾಧೀನಕ್ಕೆ ಎದುರಾದ ತಕರಾರು ಸಹ ಕಾರಣ ಎಂದು ನಿಗಮದ ಮೂಲಗಳು ತಿಳಿಸಿವೆ.

3 ತಿಂಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ ಪುನರ್‌ ನಿರ್ಮಾಣ
ಮಾರ್ಗದ ಉದ್ದಕ್ಕೂ ರಸ್ತೆಯ ಪುನರ್‌ ನಿರ್ಮಾಣ ಕಾರ್ಯ ಆರಂಭವಾಗಿದೆ. ನಿಲ್ದಾಣಗಳ ಬಳಿ ಚರಂಡಿ ಮತ್ತು ಪಾದಚಾರಿ ಮಾರ್ಗದ ಪುನರ್‌ ನಿರ್ಮಾಣ ಕಾಮಗಾರಿಯೂ ಪ್ರಾರಂಭವಾಗಿದೆ. ಈ ಎಲ್ಲ ಕೆಲಸಗಳು ಮೂರು ತಿಂಗಳಲ್ಲಿ ಮುಗಿಯಲಿವೆ. ರಸ್ತೆಯ ಭಾಗದಲ್ಲಿ ನಿಲ್ದಾಣಗಳ ಸಿವಿಲ್‌ ಕಾಮಗಾರಿ ಮುಗಿದ ಕೂಡಲೇ ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗದ ಕಾಮಗಾರಿ ಕೈಗೊಳ್ಳಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ ನಿಗಮದ ಅಧಿಕಾರಿಯೊಬ್ಬರು, ‘ಗುತ್ತಿಗೆದಾರ ಕಂಪೆನಿಗಳು ನಿಲ್ದಾಣಗಳ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ರಸ್ತೆಯ ಕೆಲಸಗಳನ್ನು ಕೈಗೊಳ್ಳುತ್ತಿವೆ’ ಎಂದರು.

ಶೀಘ್ರ ಬ್ಯಾರಿಕೇಡ್ ಮುಕ್ತ
ಬನಶಂಕರಿ ನಿಲ್ದಾಣದ ಕೆಳಭಾಗದ ರಸ್ತೆಯಲ್ಲಿ ಮಾತ್ರ ಬ್ಯಾರಿಕೇಡ್‌ಗಳು (ಕಾಮಗಾರಿ ಸ್ಥಳಗಳಲ್ಲಿ ಹಾಕಿರುವ ತಾತ್ಕಾಲಿಕ ತಡೆಗೋಡೆಗಳು) ಇವೆ. ಎರಡು ಅಥವಾ ಮೂರು ತಿಂಗಳಲ್ಲಿ ಈ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT