ADVERTISEMENT

ಮುಗಿಯಿತು ಮುಷ್ಕರ: ಸಹಜ ಸ್ಥಿತಿಯತ್ತ ಸಂಚಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:56 IST
Last Updated 27 ಜುಲೈ 2016, 19:56 IST
ಮುಷ್ಕರ ಅಂತ್ಯಗೊಂಡ ಬೆನ್ನಲ್ಲೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟದ ಸದಸ್ಯರು ಮೆಜೆಸ್ಟಿಕ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು
ಮುಷ್ಕರ ಅಂತ್ಯಗೊಂಡ ಬೆನ್ನಲ್ಲೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟದ ಸದಸ್ಯರು ಮೆಜೆಸ್ಟಿಕ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು   

ಬೆಂಗಳೂರು: ಸಾರಿಗೆ ಮುಷ್ಕರ ಬುಧವಾರ ಸಂಜೆ ಅಂತ್ಯ ಕಂಡ  ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳು ರಸ್ತೆಗೆ ಇಳಿದಿವೆ. ಹೀಗಾಗಿ ನಗರದ ಸಂಚಾರ ವ್ಯವಸ್ಥೆ  ಗುರುವಾರ ಸಹಜ ಸ್ಥಿತಿಗೆ ಮರಳಲಿದೆ.

ಸಂಜೆ 6ರ ವೇಳೆಗೆ ಸಿಬ್ಬಂದಿ ಮುಷ್ಕರ ಕೈಬಿಟ್ಟರು. ಸ್ವಲ್ಪ ಹೊತ್ತಿನಲ್ಲಿ ಬೆರಳೆಣಿಕೆಯ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗಿದವು. ಒಟ್ಟಾರೆ ಇಡೀ ದಿನ 78 ಬಸ್‌ಗಳು ಸಂಚಾರ ನಡೆಸಿದವು. ಇನ್ನೊಂದೆಡೆ ಬಸ್‌ ಸಂಚಾರ ಆರಂಭವಾಗಿದೆ ಎಂದು ಭಾವಿಸಿ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಅವರು ಖಾಸಗಿ ಬಸ್‌ಗಳು ಹಾಗೂ ಆಟೊಗಳ ಮೊರೆ ಹೋದರು.

‘ಮುಷ್ಕರ ಅಂತ್ಯಗೊಳ್ಳುವಾಗ ಸಂಜೆಯಾಗಿತ್ತು. ಹೀಗಾಗಿ ಹೆಚ್ಚಿನ ಸಿಬ್ಬಂದಿ ಸೇವೆಗೆ ಬಂದಿಲ್ಲ. ರಾತ್ರಿ ಪಾಳಿಯ ಬಸ್‌ಗಳನ್ನು ಮಾತ್ರ ಓಡಿಸಲಾಗಿದೆ. ಗುರುವಾರ ಬೆಳಿಗ್ಗೆ ಎಲ್ಲ ಬಸ್‌ಗಳು ಸಂಚಾರ ನಡೆಸಲಿವೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಸೇವೆಗೆ ಹಾಜರಾಗಲು ಡಿಪೊಗೆ ಬಂದಿದ್ದರು. ಆದರೆ, ಅಧಿಕಾರಿಗಳು ಅವರನ್ನು ವಾಪಸ್‌ ಕಳುಹಿಸಿದರು. ಪ್ರತಿ ಡಿಪೊದಿಂದ ತಲಾ 5 ಬಸ್‌ಗಳ ಸಂಚಾರ ನಡೆಸಲು ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದರು. ಸಿಬ್ಬಂದಿ ಬಂದಿಲ್ಲ ಎಂಬ ನೆಪ ಹೇಳುತ್ತಿದ್ದಾರೆ’ ಎಂದು ಹಲವು ಚಾಲಕರು ಆಕ್ರೋಶ  ವ್ಯಕ್ತಪಡಿಸಿದರು.

ಪೊಲೀಸ್‌ ಬಂದೋಬಸ್ತ್‌ನಲ್ಲಿ ಬುಧವಾರ ಬೆಳಿಗ್ಗೆ ಬೆರಳೆಣಿಕೆಯ ಬಸ್‌ಗಳು ಸಂಚಾರ ನಡೆಸಿದವು. ಮಧ್ಯಾಹ್ನದ ಹೊತ್ತಿಗೆ ಅವುಗಳ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಮಾತುಕತೆ ಫಲಪ್ರದವಾದ ಬಳಿಕ ಬಸ್‌ ಸಂಚಾರ ಪುನರಾರಂಭಗೊಂಡಿತು.

ಕುಟುಂಬ ಸದಸ್ಯರ ಪ್ರತಿಭಟನೆ: ನಿಗಮಗಳ ಸಿಬ್ಬಂದಿಯ ಕುಟುಂಬ ಸದಸ್ಯರು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಎದುರು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

‘ನೌಕರರು ಮೂರು ದಿನಗಳಿಂದ ಮನೆಯಲ್ಲೇ ಇದ್ದಾರೆ. ಸರ್ಕಾರ ಸಮಸ್ಯೆ ಬಗೆಹರಿಸಲು ಕಾಳಜಿ ವಹಿಸುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಸೇವೆಗೆ ಹಾಜರಾಗುವಂತೆ ಒತ್ತಡ ಹೇರಲಾಗುತ್ತಿದೆ. ಒಂದೋ ಕೆಲಸಕ್ಕೆ ಹಾಜರಾಗಿ, ಇಲ್ಲವೇ ಸಿಬ್ಬಂದಿಯ ವಸತಿಗೃಹ ಖಾಲಿ ಮಾಡಿ ಎಂಬ ಸಂದೇಶಗಳು ಬಂದಿವೆ. ದಾರಿ ಕಾಣದಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ಬಿಎಂಟಿಸಿಗೆ ₹15 ಕೋಟಿ ನಷ್ಟ: ಮುಷ್ಕರದಿಂದಾಗಿ ಬಿಎಂಟಿಸಿ ಮೂರು ದಿನಗಳಲ್ಲಿ ₹15 ಕೋಟಿ ನಷ್ಟ ಅನುಭವಿಸಿದೆ.
ಸಂಸ್ಥೆಯ ನಿತ್ಯದ ಸಾರಿಗೆ ಆದಾಯ ₹4.8 ಕೋಟಿ. ಜತೆಗೆ ಬಸ್‌ಗಳಿಗೆ ಕಲ್ಲು ತೂರಿದ್ದರಿಂದ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಈ ಹಿಂದೆ ಮುಷ್ಕರ ಒಂದೆರಡು ದಿನಕ್ಕೆ ಅಂತ್ಯವಾಗುತ್ತಿತ್ತು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಲ್ಕು ವರ್ಷಗಳ ಹಿಂದೆ ಸಿಬ್ಬಂದಿ ಎರಡು ದಿನಗಳ ಮುಷ್ಕರ ನಡೆಸಿದ್ದರು. ಇತ್ತೀಚಿನ ವರ್ಷಗಳಲ್ಲಿ ನಡೆದ ದೊಡ್ಡ ಮುಷ್ಕರ ಇದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶಾಲಾ–ಕಾಲೇಜುಗಳು ಗುರುವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ವಿ. ಶಂಕರ್‌ ಮಾಹಿತಿ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಬಾಕಿ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

‘ಸರಿಯಾಗಿ ಮಾತುಕತೆ ನಡೆಸಿಲ್ಲದಿರಬಹುದು’
ಇಷ್ಟೊಂದು ದೊಡ್ಡ ಮಟ್ಟದ ಮುಷ್ಕರ ಹಾಗೂ ಸಾರ್ವಜನಿಕರಿಗೆ ಆದ ತೊಂದರೆ ಪರಿಗಣಿಸಿದರೆ, ನಮಗೆ ಹೆಚ್ಚಿಸಿರುವ ವೇತನ ತೃಪ್ತಿ ನೀಡಿಲ್ಲ. ಅಭೂತಪೂರ್ವ ಬೆಂಬಲ ವ್ಯಕ್ತವಾದರೂ  ನಮ್ಮ ನಾಯಕರು ಸರ್ಕಾರದ ಜೊತೆಗೆ ಸರಿಯಾಗಿ ಮಾತುಕತೆ ನಡೆಸಿಲ್ಲ ಎನಿಸುತ್ತಿದೆ.
-ಮಲ್ಲೇಶ್, ಚಾಲಕ (ಡಿಪೋ–36)

ಶೇಕಡ 18ರಷ್ಟಾದರೂ ಕೊಟ್ಟಿದ್ದರೆ  ಒಳ್ಳೆಯದಿತ್ತು. ಆಗ ಒಂದಿಷ್ಟು ಜೀವನ ಸುಧಾರಿಸುತ್ತಿತ್ತು. ಇದರಿಂದ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ. 17 ವರ್ಷದಿಂದ ದುಡಿಯುತ್ತಿರುವ ನನಗೆ ₹22  ಸಾವಿರ ಸಿಗುತ್ತದೆ. ಈ ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವಿಸುವುದು ಕಷ್ಟ. ಹೊಸಬರಿಗಂತೂ ತೀರಾ ಕಷ್ಟ.
-ರೇಣುಕಾ, ನಿರ್ವಾಹಕಿ, (ಡಿಪೋ–8)

ಇದು ಸಮಾಧಾನಕರ ಹೆಚ್ಚಳ ಅಲ್ಲ.  ಕಳೆದ ಮೂರು ದಿನದಲ್ಲಿ ಸಾಕಷ್ಟು ಸಾರ್ವಜನಿಕರಿಗೆ ತೊಂದರೆ ಆಗಿದೆ. ಇನ್ನಷ್ಟು ಕಾಡಿಸುವುದು ಸರಿಯಲ್ಲ. ಇಂತಹ ಎಲ್ಲ ಕಾರಣಗಳಿಂದ ಅನಿವಾರ್ಯವಾಗಿ ಈ ವೇತನ ಹೆಚ್ಚಳಕ್ಕೆ ಒಪ್ಪಬೇಕಾಗಿದೆ.
-ನಂದಕುಮಾರ್‌, ನಿರ್ವಾಹಕ (ಡಿಪೋ–30)

ADVERTISEMENT

ಪ್ರಸಕ್ತ ಹೆಚ್ಚಳ ಸಮಾಧಾನಕರ ಎನ್ನಬಹುದು ಅಷ್ಟೇ. ಮೂಲ ವೇತನದಲ್ಲಿ ₹1,800ರಿಂದ ₹2,500 ದಷ್ಟು ಹೆಚ್ಚು ವ್ಯತ್ಯಾಸ ಆಗುತ್ತದೆ.  ಇನ್ನಷ್ಟು ಹೆಚ್ಚಿಸಲು ನಷ್ಟ–ನಷ್ಟ ಎನ್ನುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಮತ್ತೆ ಹೆಚ್ಚಾಗಬಹುದು ಎಂಬುದು ನನ್ನ ಆಶಾಭಾವ.
-ಅರವಿಂದ್, ನಿರ್ವಾಹಕ (ಡಿಪೋ–27)

ಆಂಧ್ರದಲ್ಲಿ ಸಾಕಷ್ಟು ವೇತನ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅಷ್ಟು ನೀಡದಿದ್ದರೂ ಪರವಾಗಿಲ್ಲ. ನಾವು ಕೇಳಿದ್ದು 35ರಷ್ಟು ಹೆಚ್ಚಳ. ಅದರ ಅರ್ಧದಷ್ಟಾದರೂ ಕೊಡಬೇಕಿತ್ತು.
-ಟಿ.ಮುನಿರಾಜ, ಚಾಲಕ (ಡಿಪೋ–8)

ಚಾಲಕರು, ನಿರ್ವಾಹಕರು ಏನಂತಾರೆ?
ಈ ಹೆಚ್ಚಳ ತುಂಬಾ ಕಡಿಮೆ. ವೈಯಕ್ತಿಕವಾಗಿ ನನಗೆ ಒಪ್ಪಿಗೆ ಆಗಿಲ್ಲ. ಇಷ್ಟು  ಹೆಚ್ಚಳಕ್ಕಾಗಿ ನಾವು ಮೂರು ದಿನಗಳ ಕಾಲ ಮುಷ್ಕರ ಮಾಡುವ ಅಗತ್ಯ ಇರಲಿಲ್ಲ ಅನಿಸುತ್ತಿದೆ. ಕನಿಷ್ಠ ಶೇ 23ರಿಂದ ಶೇ 25ರಷ್ಟು ಹೆಚ್ಚಳವಾಗಬೇಕಿತ್ತು
-ಸಿದ್ರಾಮ್‌ ತಿಲ್ಲಿಹಾಳ್‌, ಚಾಲಕ (21ನೇ ಡಿಪೋ)

ಸಮಾಧಾನ ಇಲ್ಲ.  ಮೂರು ದಿನದ ಮುಷ್ಕರಕ್ಕೆ ಇದು ಯೋಗ್ಯ ಸ್ಪಂದನೆ ಅಲ್ಲ. ಮುಷ್ಕರಕ್ಕೆ ಮುಂದಾಗುವ ಮುನ್ನವೇ ಸಾರಿಗೆ ಸಂಸ್ಥೆಗಳ ನೌಕರರನ್ನು ಕರೆದು ಸರ್ಕಾರ ಮಾತನಾಡಿಸಬಹುದಿತ್ತು.
- ಎಚ್‌.ಎಲ್‌.ಕೃಷ್ಣ, ಚಾಲಕ (ಡಿಪೋ–8)

ಇದು ತೃಪ್ತಿದಾಯಕ ಅಲ್ಲ. ಕನಿಷ್ಠ ಶೇ 20ರಷ್ಟು ಹೆಚ್ಚಾಗಿದ್ದರೆ ಚೆನ್ನಾಗಿತ್ತು. 18 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈಗ ನನಗೆ ₹22 ಸಾವಿರ ವೇತನ ಸಿಗುತ್ತಿದೆ. ಎಲ್ಲವೂ ದುಬಾರಿ ಆಗಿರುವ ಈ ದಿನಗಳಲ್ಲಿ ಇಷ್ಟು ಸಾಕೇ? ಅದಕ್ಕಿಂತಲೂ ಹೆಚ್ಚಾಗಿ ಕಿರುಕುಳ, ಅನಗತ್ಯವಾಗಿ ಮೆಮೋ ಕೊಡುವುದು ಸೇರಿದಂತೆ ಇತರ ಬೇಡಿಕೆಗಳು ಈಡೇರಿದರೆ ನೌಕರರಿಗೆ ಹೆಚ್ಚು ಸಮಾಧಾನ ಆಗುತ್ತದೆ.
-ಮಾಲತಿ, ನಿರ್ವಾಹಕಿ (ಡಿಪೋ–8)

ಇಷ್ಟು ಚಿಕ್ಕ ಮೊತ್ತಕ್ಕಾಗಿ ಇಷ್ಟೊಂದು ದೊಡ್ಡ ಹೋರಾಟದ ಅಗತ್ಯವೇ ಇರಲಿಲ್ಲ.  ವೇತನ ಹೆಚ್ಚಿಸಿ ಎಂದಾಗೆಲ್ಲ ನಷ್ಟದ ಲೆಕ್ಕ ಕೊಡ್ತಾರೆ. ಬಿಎಂಟಿಸಿ ತೂತು ಮಡಿಕೆಯಂತಾಗಿದೆ. ಅದನ್ನು ಸರಿಪಡಿಸುವುದು ಬಿಟ್ಟು, ಟಿಕೆಟ್‌ ದರ ಹೆಚ್ಚಿಸುವುದು, ಸಿಬ್ಬಂದಿ ವೇತನ ತಗ್ಗಿಸುವುದು ಪರಿಹಾರ ಅಲ್ಲ.  ನನಗಂತೂ ಸಂಸ್ಥೆಯಲ್ಲಿ ಮುಂದುವರೆಯಲು ಮನಸ್ಸೇ ಆಗುತ್ತಿಲ್ಲ
-ವೈ.ಎಸ್‌.ಪ್ರದೀಪ್‌ ಕುಮಾರ್‌, ಚಾಲಕ/ನಿರ್ವಾಹಕ (ಡಿ-17)

ಈ ಹೆಚ್ಚಳ ತೃಪ್ತಿ ತಂದಿಲ್ಲ. ಇನ್ನೂ ನಾಲ್ಕೈದು ದಿನ ಉಪವಾಸ ಕುಳಿತಿದ್ದರೂ ಚಿಂತೆ ಇಲ್ಲ. ಕನಿಷ್ಠ ಶೇ 15ರಷ್ಟಾದರೂ ಹೆಚ್ಚಾಗಬೇಕಿತ್ತು. ಆದರೆ, ನಮ್ಮ ಯೂನಿಯನ್‌ನವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಒಪ್ಪಿಕೊಳ್ಳಬೇಕು ಅಷ್ಟೇ.
-ಪ್ರೇಮಾ ರಾಮಪ್ಪ, ಚಾಲಕಿ , (ಡಿಪೋ–03)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.