ADVERTISEMENT

ಮೂರು ಧಾರಾವಾಹಿಗಳ ಪ್ರಸಾರದ ವಿರುದ್ಧ ನೋಟಿಸ್‌: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಬೆಂಗಳೂರು: ‘ಅಂಜಲಿ’, ‘ಗಂಗಾ’ ಮತ್ತು ‘ನೀಲಿ’ ಟಿ.ವಿ ಧಾರಾವಾಹಿಗಳ ಪ್ರಸಾರದ ವಿರುದ್ಧ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.
 
ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸಾರ್ವಜನಿಕರ  ವೈಯಕ್ತಿಕ ಬದುಕು ಮತ್ತು ಸಂಗತಿಗಳ ಬಗ್ಗೆ ಹೆಚ್ಚಾಗಿ ಪ್ರಸಾರ ಮಾಡಿ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರುವ ಬಗ್ಗೆ ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಗೆ ಅವರು ಉತ್ತರಿಸಿದರು.
 
ಝೀ ಕನ್ನಡ ವಾಹಿನಿ ಮತ್ತು ಸ್ಟಾರ್‌ ಸುವರ್ಣ ವಾಹಿನಿಗಳಲ್ಲಿ ಈ ಧಾರಾವಾಹಿಗಳು ಪ್ರಸಾರ ಆಗುತ್ತಿದ್ದು, ಮೂಢನಂಬಿಕೆ, ದೆವ್ವ ಮತ್ತು ವಿಧವೆ ವಿಷಯಗಳ ಕುರಿತು ಹೆಚ್ಚಾಗಿ ಬಿಂಬಿಸಲಾಗುತ್ತದೆ.

ನೋಟಿಸ್‌ ಜಾರಿ ಮಾಡಿದ್ದರೂ ಚಾನೆಲ್‌ಗಳಿಂದ ಉತ್ತರ ಬಂದಿಲ್ಲ. ಈಗ ಮತ್ತೊಮ್ಮೆ ನೋಟಿಸ್‌ ಜಾರಿ ಮಾಡಲಾಗಿದೆ. ಈಗಲೂ ಉತ್ತರ ಬಾರದಿದ್ದರೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದರು.
 
ಇತ್ತೀಚೆಗೆ ಸಚಿವರೊಬ್ಬರ ಪ್ರಕರಣವನ್ನು  ಮಸುಕು ಮಾಡದೆ ಪ್ರಸಾರ ಮಾಡಿರುವ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ಪತ್ರಕರ್ತೆ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಸುದ್ದಿ ವಾಹಿನಿಗಳಿಗೆ  ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹೇಳಿದರು.
 
ಟಿ.ವಿ. ವಾಹಿನಿಗಳಿಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಪರಿಶೀಲಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ ಎಂದು ಪರಮೇಶ್ವರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.