ADVERTISEMENT

ಮೂಲ ಸ್ವರೂಪ ಕಳೆದುಕೊಂಡ ರಾಜಕಾಲುವೆ

ಮಡಿವಾಳ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳು ಮಾಯ * ಕೆರೆ ಅಂಗಳದಲ್ಲಿ ಮಲ, ಮೂತ್ರ ವಿಸರ್ಜನೆ * ಹಂದಿಗಳ ಬೀಡು

ಎನ್.ನವೀನ್ ಕುಮಾರ್
Published 25 ಮೇ 2016, 19:32 IST
Last Updated 25 ಮೇ 2016, 19:32 IST
ಮೂಲ ಸ್ವರೂಪ ಕಳೆದುಕೊಂಡ ರಾಜಕಾಲುವೆ
ಮೂಲ ಸ್ವರೂಪ ಕಳೆದುಕೊಂಡ ರಾಜಕಾಲುವೆ   

ಬೆಂಗಳೂರು: ನಗರೀಕರಣದ ಪರಿಣಾಮ ಬಿಟಿಎಂ ಲೇಔಟ್ 2ನೇ ಹಂತದಲ್ಲಿರುವ ಮಡಿವಾಳ ಕೆರೆಯ ರಾಜಕಾಲುವೆಗಳು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದರ ಪರಿಣಾಮ ಹತ್ತಾರು ಅಡಿ ಅಗಲದ ಕಾಲುವೆಗಳು ಈಗ 2–3 ಅಡಿಗೆ ಕುಗ್ಗಿವೆ.

ಈ ಕೆರೆ 285 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಕೆರೆಯಲ್ಲಿ ನಡುಗಡ್ಡೆಯನ್ನು ನಿರ್ಮಿಸಲಾಗಿದ್ದು, ಹಕ್ಕಿಗಳ ವಂಶಾಭಿವೃದ್ಧಿ ತಾಣವಾಗಿದೆ. ಆದರೆ, ಕೆರೆ ದಿನೇ ದಿನೇ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ.

ಚರಂಡಿಯಾದ ರಾಜಕಾಲುವೆ: ಗುರಪ್ಪನಪಾಳ್ಯ ಭಾಗದ ಮಳೆಯ ನೀರು ಹರಿದು ಕೆರೆ ಸೇರಲು ರಾಜಕಾಲುವೆ ಇತ್ತು. ಆ ಕಾಲುವೆ ಬಿಟಿಎಂ ಬಡಾವಣೆ 2ನೇ ಹಂತದ 7ನೇ ಮುಖ್ಯರಸ್ತೆಯ 19 ‘ಸಿ’ ಅಡ್ಡರಸ್ತೆಯಲ್ಲಿ ಹಾದು ಮಡಿವಾಳ ಕೆರೆ ಸೇರುತ್ತದೆ. ಈ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ.

ಇದರಿಂದ 15 ಅಡಿ ಅಗಲದ ಕಾಲುವೆ ಎರಡು ಅಡಿಗೆ ಕುಸಿದಿದೆ.  19 ‘ಸಿ’ ಅಡ್ಡರಸ್ತೆಯಲ್ಲಿ ಕಾಲುವೆಯ ಮೇಲೆ ಮನೆ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ಒಂದು ಕಟ್ಟಡಕ್ಕೂ ಇನ್ನೊಂದು ಕಟ್ಟಡಕ್ಕೂ ಅಂತರವಾಗಿ ಕಾಲುವೆ ಹಾದು ಹೋಗಿದೆ.

‘ಮಳೆಗಾಲ ಬಂದರೆ ಬಡಾವಣೆಯಲ್ಲಿ ನೀರು ಸಂಗ್ರಹವಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸ್ಥಳೀಯರು ತೊಂದರೆ ಅನುಭವಿಸುವುದು ಸಾಮಾನ್ಯ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದೇ ಇದಕ್ಕೆ ಕಾರಣ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.
ಬಿಟಿಎಂ ಬಡಾವಣೆ, ಜೆ.ಪಿ.ನಗರ, ಪುಟ್ಟೇನಹಳ್ಳಿ ಭಾಗದಿಂದ ಮಡಿವಾಳ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳಿದ್ದವು.

ಈಗ ಈ ಕಾಲುವೆಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ಮುಖ್ಯ ರಾಜಕಾಲುವೆಯನ್ನೂ ಅಲ್ಲಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದ ಕಾಲುವೆಯು ಕುಗ್ಗಿದೆ.

ಮುಖ್ಯ ರಾಜಕಾಲುವೆಯು  ಮುನಿವೆಂಕಟಪ್ಪ ಬಡಾವಣೆ ಬಳಿ ಮಡಿವಾಳ ಕೆರೆಯನ್ನು ಸೇರುತ್ತದೆ. 29ನೇ ಮುಖ್ಯರಸ್ತೆಯಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆಗೆ ತಿರುವು ಪಡೆದುಕೊಂಡು ಮುಂದೆ ಸಾಗಿದರೆ ಅಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಕಸವನ್ನು ಹಾಕುತ್ತಿದ್ದಾರೆ.

ಅಲ್ಲದೆ, ಕಟ್ಟಡದ ಅವಶೇಷ, ಕೋಳಿ ಮಾಂಸದ ತ್ಯಾಜ್ಯ, ಸತ್ತ ಪ್ರಾಣಿಗಳನ್ನು ಎಸೆಯಲಾಗುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಜತೆಗೆ, ಈ ಸ್ಥಳ ಹಂದಿಗಳ ಆವಾಸ ಸ್ಥಾನವಾಗಿದೆ.

ಕೆರೆಯ ಸುತ್ತಲೂ ಬೇಲಿ ಅಳವಡಿಸಲಾಗಿದೆ. ಆದರೆ, ಅಂಬೇಡ್ಕರ್‌ ರಸ್ತೆಯಲ್ಲಿ ಅಳವಡಿಸಿರುವ ಗೇಟ್‌ ತೆರೆದಿರುತ್ತದೆ. ಇದರಿಂದ ಕೆಲವರು ಕೆರೆಯ ಆವರಣ ಪ್ರವೇಶಿಸಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕೆರೆಯ ಒಂದು ಬದಿಯಲ್ಲಿ ಕಳೆ ಬೆಳೆದಿದೆ. ಈ ಭಾಗದಲ್ಲಿ ಹೂಳು ತುಂಬಿರುವುದೇ ಕಳೆ ಬೆಳೆಯಲು ಕಾರಣವಾಗಿದೆ.

‘ಅಪರೂಪದ ಪಕ್ಷಿ ಸಂಕುಲಕ್ಕೆ ಆಶ್ರಯವಾದ ಕೆರೆಯನ್ನು ಕಾಪಾಡಿಕೊಳ್ಳಬೇಕು. ಕೆರೆಯಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಬೇಕು. ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು’ ಎಂದು ವಾಯುವಿಹಾರಿ ಮಹೇಶ್‌ ಹೇಳಿದರು.

‘ಬಿಟಿಎಂ ಬಡಾವಣೆ ನಿರ್ಮಾಣಗೊಂಡ ಸಂದರ್ಭದಲ್ಲಿ ಜನರು ರಾಜಕಾಲುವೆಗೆ ಹೊಂದಿಕೊಂಡಂತೆ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ, ಹೊಸದಾಗಿ ಮನೆ ನಿರ್ಮಿಸಲು ಮುಂದಾದವರಿಗೆ, ಹತ್ತು ಅಡಿ ಬಿಟ್ಟು ಮನೆ ನಿರ್ಮಿಸುವಂತೆ ಸೂಚನೆ ನೀಡಿದ್ದೇನೆ’ ಎಂದು ಬಿಬಿಎಂಪಿ ಸದಸ್ಯ ಕೆ.ದೇವರಾಜ್‌ ತಿಳಿಸಿದರು.

‘ಮಡಿವಾಳ ಕೆರೆ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು, ಕಳೆ ತೆರವುಗೊಳಿಸಬೇಕು’ ಎಂದು  ದೇವರಾಜ್‌ ಅವರು ಆಗ್ರಹಿಸಿದರು.

ವಲಸೆ ಪಕ್ಷಿಗಳ ಸಂಖ್ಯೆಯಲ್ಲಿ ಇಳಿಕೆ
ಈ ಕೆರೆ ಎರಡು ದಶಕಗಳ ಹಿಂದೆ ವಲಸೆ ಹಕ್ಕಿಗಳ ತಾಣವಾಗಿತ್ತು. ಈಗ ಹಕ್ಕಿಗಳ ಕಲರವ ಮಾಯವಾಗಿದೆ. ನವೆಂಬರ್‌ನಿಂದ ಫೆಬ್ರುವರಿವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದ ಹಕ್ಕಿಗಳ ಸಂಖ್ಯೆ ಈ ಬಾರಿ ಕಡಿಮೆಯಾಗಿದೆ.

ಪಕ್ಷಿ ತಜ್ಞರಾದ ಯು.ಹರೀಶ್‌ ಕುಮಾರ್ ಮತ್ತು ಅರುಣ್ ಚಿಕ್ಕ ರಾಮಪ್ಪ ಅವರು ಇತ್ತೀಚೆಗೆ ನಡೆಸಿದ ಅಧ್ಯಯನ ಪ್ರಕಾರ ಈ ವರ್ಷ ಮಡಿವಾಳ ಕೆರೆಗೆ 31 ಪ್ರಭೇದದ ಪಕ್ಷಿಗಳು ಮಾತ್ರ  ವಲಸೆ ಬಂದು ಹೋಗಿವೆ.

ಸದ್ಯ ಪೆಲಿಕಾನ್ ಪಕ್ಷಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿವೆ. ‘ಮಡಿವಾಳ ಕೆರೆ ದಿನೇದಿನೇ ಕಲುಷಿತಗೊಳ್ಳುತ್ತಿದೆ. ಇದರಿಂದ ಹಕ್ಕಿಗಳು ವಲಸೆ ಬರುತ್ತಿರುವುದು ಕಡಿಮೆಯಾಗಿದೆ’ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

ADVERTISEMENT

ಕೆರೆಯಂಗಳದಿಂದ... ನೀವೂ ಮಾಹಿತಿ ನೀಡಿ - 21
ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ.

ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ. ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು.

ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.