ADVERTISEMENT

ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿಕುಸಿತ

ಫೀಡರ್‌ ಬಸ್‌, ನಿಲ್ದಾಣಗಳಲ್ಲಿ ಪಾರ್ಕಿಂಗ್‌ ಕೊರತೆಯಿಂದಾಗಿ ನಿತ್ಯ ಸರಾಸರಿ 11 ಸಾವಿರ ಇಳಿಮುಖ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:39 IST
Last Updated 4 ಅಕ್ಟೋಬರ್ 2015, 19:39 IST

ಬೆಂಗಳೂರು: ‘ನಮ್ಮ ಮೆಟ್ರೊ’ದ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು ಹಾಗೂ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸಲು ವಿಳಂಬ ಮಾಡುತ್ತಿರುವುದರಿಂದ ಸದ್ಯ ಮೆಟ್ರೊ ರೈಲು ಸಂಚರಿಸುತ್ತಿರುವ  ಎರಡೂ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಲೆಕ್ಕಪತ್ರ ವರದಿ ತಿಳಿಸಿದೆ.

ಬೈಯಪ್ಪನಹಳ್ಳಿಯಿಂದ ಎಂ.ಜಿ ರಸ್ತೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಿಂದ ಸ್ವಸ್ತಿಕ್‌ ಸಂಪಿಗೆ ರಸ್ತೆವರೆಗಿನ ಎರಡೂ ರೀಚ್‌ಗಳಲ್ಲಿ ಪ್ರತಿದಿನ ಸರಾಸರಿ 11 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿದಿದೆ.

2014–15ನೇ ಸಾಲಿನಲ್ಲಿ ನಿಗಮಕ್ಕೆ ₹33.12 ಕೋಟಿ ನಷ್ಟ ಉಂಟಾಗಿದ್ದು, ಇದು ಶೇ 26.75 ರಷ್ಟಾಗಿದೆ. ದೀರ್ಘ ಕಾಲದಿಂದ ಜನ ನಿರೀಕ್ಷಿಸುತ್ತಿರುವಂತೆ ಮೆಜೆಸ್ಟಿಕ್‌ ಸೇರಿದಂತೆ ಇತರ ಕಡೆ ಸಂಪರ್ಕ ಕಲ್ಪಿಸಲು ವಿಫಲ ಆಗಿರುವುದೆ ಆದಾಯ ಕುಸಿಯಲು ಪ್ರಮುಖ ಕಾರಣವಾಗಿದೆ. ಈ ಸಂಬಂಧ ನಿಗಮವು ಹಲವು ಸಲ ಭರವಸೆ ನೀಡಿತ್ತು. ಅದು ಅನೇಕ ಬಾರಿ ನೀಡಿದ್ದ ಗಡುವು ಕೊನೆಗೊಂಡಿದೆ. ಈಗ  ಆ ಅವಧಿಯನ್ನು 2016ರ ಮಾರ್ಚ್‌ ವರೆಗೆ ವಿಸ್ತರಿಸಿದೆ.

ಇದಲ್ಲದೇ ಮೆಟ್ರೊ ನಿಲ್ದಾಣಗಳಿಗೆ ಬಿಎಂಟಿಸಿ ಫೀಡರ್‌ ಬಸ್‌ ಸೇವೆ ಕಲ್ಪಿಸದಿರುವುದೂ ಒಂದು ಕಾರಣವಾಗಿದೆ. ಹೆಚ್ಚುವರಿ ಹಣಕಾಸಿನ  ಹೊರೆಯಿಂದ ಬಿಎಂಟಿಸಿ ಸೇವೆ ನಿಲ್ಲಿಸಿತು. ಜೊತೆಗೆ ಮೆಟ್ರೊ ನಿಲ್ದಾಣ ಸೇರಿದಂತೆ ಅದರ ಸುತ್ತಮುತ್ತ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇರದಿರುವುದು ಪ್ರಯಾಣಿಕರ ಸಂಖ್ಯೆ ಕುಸಿಯಲು ಕಾರಣ ಎಂದು ಗುರುತಿಸಲಾಗಿದೆ.

ನಿಗಮದ ಲೆಕ್ಕಪತ್ರ ವರದಿ ಪ್ರಕಾರ, 2014–15ನೇ ಸಾಲಿನ್ಲಲಿ ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ ಪ್ರತಿದಿನ ಸರಾಸರಿ ಪ್ರಯಾಣಿಕರ ಸಂಖ್ಯೆ16,336 ಇದೆ. ಶೇ 8.39ರಷ್ಟು. 2013–14ನೇ ಸಾಲಿನಲ್ಲಿ ಪ್ರತಿದಿನ ಸರಾಸರಿ ಪ್ರಮಾಣ 17,833 ಇತ್ತು. ರೀಚ್‌ 3ಎ ನಲ್ಲಿ (ಪೀಣ್ಯ ಕೈಗಾರಿಕಾ ಪ್ರದೇಶದಿಂದ ಸ್ವಸ್ತಿಕ್‌ ಸಂಪಿಗೆ ರಸ್ತೆ) ಪ್ರತಿದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 15,153 ಇತ್ತು, ಅದು ಶೇ 38.42ರಷ್ಟು ಇಳಿದಿದೆ. 2013–14ನೇ ಸಾಲಿನಲ್ಲಿ (2014ರ ಮಾರ್ಚ್‌ ವರೆಗೆ) ಸರಾಸರಿ ಪ್ರಮಾಣ 24,606 ಇತ್ತು.
ರೀಚ್‌ 1ರಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆ 25,949 ಇದ್ದರೆ, ಕನಿಷ್ಠ 11,172 ಇದೆ. ಅದೇ ರೀತಿ 3ಎ ರೀಚ್‌ನಲ್ಲಿ ಗರಿಷ್ಠ 33,416 ಮತ್ತು 7,368 ಕನಿಷ್ಠ ಪ್ರಯಾಣಿಕರ ಸಂಖ್ಯೆ ದಾಖಲಾಗಿತ್ತು.

ವರದಿ ಪ್ರಕಾರ, 2014–15ನೇ ಸಾಲಿನಲ್ಲಿ ಇನ್ನೊಂದು ಮಾರ್ಗದಲ್ಲಿ ಹೆಚ್ಚುವರಿಯಾಗಿ ರೈಲುಗಳ ಓಡಾಟ ಪ್ರಾರಂಭವಾದ ಮೇಲೆ ನಿಗಮಕ್ಕೆ ರೈಲುಗಳ ಓಡಾಟದಿಂದಲೇ ₹33.12 ಕೋಟಿ ನಷ್ಟ ಆಗಿದೆ. ಇದೇ ವೇಳೆ ಇತರ ಮೂಲಗಳಿಂದ ಬರುವ ಆದಾಯದಲ್ಲಿ ಏರಿಕೆಯಾಗಿದೆ. 2013–14ನೇ ಸಾಲಿನಲ್ಲಿ ₹13.14 ಕೋಟಿ ಇದ್ದ ಆದಾಯ, 2014–15ನೇ ಸಾಲಿನಲ್ಲಿ ₹18.70 ಕೋಟಿಗೆ ಏರಿಕೆಯಾಗಿದೆ.

ಆಸ್ತಿ ಅಭಿವೃದ್ಧಿ (₹11.06 ಕೋಟಿ), ಕಾಂಬೊ ಕಾರ್ಡ್‌ನಿಂದ (₹5.36 ಕೋಟಿ), ಎಟಿಎಂ ಪರವಾನಗಿ (₹2.10 ಕೋಟಿ) ಮತ್ತು ಸ್ಮಾರ್ಟ್‌ ಕಾರ್ಡ್‌ಗಳಿಂದ  (₹12.50 ಲಕ್ಷ) ಬಂದ ಆದಾಯವು  ಇತರ ಮೂಲಗಳ ಆದಾಯವಾಗಿದೆ. ರೀಚ್‌ 1ರಲ್ಲಿ ಪ್ರಯಾಣ ದರದ ಆದಾಯದಲ್ಲಿ ಶೇ 0.43ರಷ್ಟು ಸ್ವಲ್ಪ ಹೆಚ್ಚಳವಾಗಿದೆ. ಪ್ರತಿ ದಿನ ಸರಾಸರಿ ಆದಾಯ ₹2.31 ಲಕ್ಷದಿಂದ ₹2.32 ಲಕ್ಷಕ್ಕೆ ಏರಿಕೆಯಾಗಿದೆ.
2014–15ನೇ ಸಾಲಿನಲ್ಲಿ ರೀಚ್‌ 3ಎ ರಲ್ಲಿ ಪ್ರತಿದಿನ ಸರಾಸರಿ ಆದಾಯ ₹2.57 ಲಕ್ಷಕ್ಕೆ ಇಳಿದಿದೆ. 2013–14ರಲ್ಲಿ ಇದು ₹2.84 ಲಕ್ಷ ಇತ್ತು. ₹6.23 ಲಕ್ಷ ಗರಿಷ್ಠ ಮತ್ತು ₹0.11 ಲಕ್ಷ ಕಡಿಮೆ ಆದಾಯವಾಗಿತ್ತು.

ಬೆಂಗಳೂರು ನಿವಾಸಿಗಳ ಅನುಕೂಲಕ್ಕಾಗಿ, ಐಪಿಎಲ್‌, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಪಂದ್ಯಗಳು ನಡೆದಾಗ, ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ತಡರಾತ್ರಿವರೆಗೂ ಮೆಟ್ರೊ ಸೇವೆ ಕಲ್ಪಿಸಲಾಗಿತ್ತು ಎಂದೂ ವರದಿ ತಿಳಿಸಿದೆ. 

ಪ್ರಯಾಣಿಕರ ಸಂಖ್ಯೆ ಕುಸಿಯಲು ಪ್ರಮುಖ ಕಾರಣ: ನಗರದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಸಿಟಿ ರೈಲು ನಿಲ್ದಾಣ ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿರುವ ಮೆಜೆಸ್ಟಿಕ್‌ಗೆ ಮೆಟ್ರೊ ಸಂಪರ್ಕ ಕಲ್ಪಿಸಲಾಗುವುದು ಎಂದು ನಿಗಮ ಹಲವು ವರ್ಷಗಳಿಂದ ಹೇಳಿಕೊಳ್ಳುತ್ತಾ ಬಂದಿದೆ. ಆದರೆ ಅದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಸುರಂಗ ಕೊರೆಯುವ ಯಂತ್ರ ಕೈಕೊಟ್ಟಿದ್ದು ಕೆಲಸ ವಿಳಂಬವಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

2011ರಲ್ಲಿ ರೀಚ್‌ 1ಕ್ಕೆ ಬಿಎಂಟಿಸಿ ಸೇವೆ ಕಲ್ಪಿಸಲಾಗಿತ್ತು. ಆದರೆ ಉತ್ತಮ ಪ್ರತಿಕ್ರಿಯೆ ಬರದ ಕಾರಣ ಅದನ್ನು ನಿಲ್ಲಿಸಿತ್ತು. ಜೊತೆಗೆ ನಿಲ್ದಾಣಗಳ ಸಮೀಪ ಸೂಕ್ತ ಪಾರ್ಕಿಂಗ್‌ ಇಲ್ಲದ ಕಾರಣ ಪ್ರಯಾಣಿಕರು ಮೆಟ್ರೊದಿಂದ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.