ADVERTISEMENT

ಮೆಟ್ರೊ ವಿಳಂಬಕ್ಕೆ ಹಲವು ಕಾರಣ: ದೋಕೆ

ಸಂಕೀರ್ಣ ಬಂಡೆ, ಗುತ್ತಿಗೆದಾರರ ಸಮನ್ವಯ ಕೊರತೆ

​ಪ್ರಜಾವಾಣಿ ವಾರ್ತೆ
Published 4 ಮೇ 2016, 20:01 IST
Last Updated 4 ಮೇ 2016, 20:01 IST
ಗುತ್ತಿಗೆದಾರ ‘ಸೋಮ’  ಕಂಪೆನಿಯ ಯೋಜನಾ ಮುಖ್ಯಸ್ಥ  ಕ್ರೈಸ್‌ ರೀವ್ಸ್‌ ಅವರು ಮಾತನಾಡಿದರು.  ಬಿಎಂಆರ್‌ಸಿಎಲ್‌ನ ಸಿಸ್ಟಮ್ಸ್‌ ವಿಭಾಗದ ನಿರ್ದೇಶಕ  ಎನ್‌.ಎಂ. ದೋಕೆ, ನಿರ್ದೇಶಕ (ಯೋಜನೆ) ವಿಜಯ್‌ ಕುಮಾರ್‌ ಧೈರ್‌, ಸೋಮ ಕಂಪೆನಿಯ ಜಂಟಿ ಯೋಜನಾ ಮುಖ್ಯಸ್ಥ ರಾಜೀವ್‌ ಚಿತ್ರದಲ್ಲಿದ್ದಾರೆ
ಗುತ್ತಿಗೆದಾರ ‘ಸೋಮ’ ಕಂಪೆನಿಯ ಯೋಜನಾ ಮುಖ್ಯಸ್ಥ ಕ್ರೈಸ್‌ ರೀವ್ಸ್‌ ಅವರು ಮಾತನಾಡಿದರು. ಬಿಎಂಆರ್‌ಸಿಎಲ್‌ನ ಸಿಸ್ಟಮ್ಸ್‌ ವಿಭಾಗದ ನಿರ್ದೇಶಕ ಎನ್‌.ಎಂ. ದೋಕೆ, ನಿರ್ದೇಶಕ (ಯೋಜನೆ) ವಿಜಯ್‌ ಕುಮಾರ್‌ ಧೈರ್‌, ಸೋಮ ಕಂಪೆನಿಯ ಜಂಟಿ ಯೋಜನಾ ಮುಖ್ಯಸ್ಥ ರಾಜೀವ್‌ ಚಿತ್ರದಲ್ಲಿದ್ದಾರೆ   

ಬೆಂಗಳೂರು: ಸುರಂಗ ಮಾರ್ಗದ ಕಾಮಗಾರಿಯಲ್ಲಿ ಎದುರಾದ ಹಲವು ಸಮಸ್ಯೆಗಳು, ರಾತ್ರಿ ಹೊತ್ತಿನಲ್ಲಿಯೇ ಕಾಮಗಾರಿ ನಡೆಸಬೇಕು ಎಂಬ ಷರತ್ತು, ಭಾರಿ ಗಾತ್ರದ ಸಲಕರಣೆಗಳನ್ನು ರಾತ್ರಿ ವೇಳೆಯಲ್ಲಿಯೇ ಸಾಗಿಸಬೇಕಿದ್ದ ಅನಿವಾರ್ಯತೆ, ಗುತ್ತಿಗೆದಾರರ ನಡುವಿನ ಸಮನ್ವಯದ ಕೊರತೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿ ನಮ್ಮ ಮೆಟ್ರೊದ ಪೂರ್ವ– ಪಶ್ಚಿಮ ಕಾರಿಡಾರ್‌  ಮಾರ್ಗವನ್ನು  ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು  ಬಿಎಂಆರ್‌ಸಿಎಲ್‌ನ ಸಿಸ್ಟಮ್ಸ್‌ ವಿಭಾಗದ ನಿರ್ದೇಶಕ  ಎನ್‌.ಎಂ. ದೋಕೆ ತಿಳಿಸಿದರು.

ಎಂ.ಜಿ ರಸ್ತಯ ರಂಗೋಲಿ ಮೆಟ್ರೊ ಕಲಾ ಕೇಂದ್ರದ ರಂಗಸ್ಥಳ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬೆಂಗಳೂರಿಗೆ ಹೋಲಿಸಿದರೆ ದೆಹಲಿ ಮೆಟ್ರೊದ ಸುರಂಗ ಕಾಮಗಾರಿ ವೇಗವಾಗಿ ಮುಗಿಯಿತು.

ದೆಹಲಿಯಲ್ಲಿ ಸುರಂಗ ಕೊರೆಯುವ ಯಂತ್ರವು ದಿನವೊಂದಕ್ಕೆ ಗರಿಷ್ಠ 33.6 ಮೀಟರ್ ಉದ್ದದಷ್ಟು ಸುರಂಗ ಕೊರೆದಿದ್ದರೆ, ಇಲ್ಲಿ 18 ಮೀಟರ್ ಸುರಂಗ ನಿರ್ಮಿಸುವುದೂ ಕಷ್ಟವಾಗಿತ್ತು’.

‘ಬೆಂಗಳೂರಿನ ನೆಲದಡಿ ಕೆಲವೆಡೆ ಅತಿ ಗಟ್ಟಿಯಾದ ಬಂಡೆಗಳು, ಇನ್ನೂ ಕೆಲವೆಡೆ ಮೃದು ಬಂಡೆಗಳು ಹಾಗೂ ಮರಳು ಮಿಶ್ರಿತ ಬಂಡೆಗಳು ಇರುವುದರಿಂದ ಸುರಂಗ ಕಾಮಗಾರಿ ನಿಗದಿತ ವೇಳೆಯಲ್ಲಿ ಪೂರ್ಣವಾಗಲಿಲ್ಲ. ಆದರೆ ದೆಹಲಿಯ ನೆಲದಡಿ ಅಷ್ಟಾಗಿ ಬಂಡೆಗಳು ಇರಲಿಲ್ಲವಾದ ಕಾರಣ ಅಲ್ಲಿ ಕಾಮಗಾರಿ ವೇಗವಾಗಿ ನಡೆಯಿತು’ ಎಂದು ಅವರು ವಿವರಿಸಿದರು.

ದೆಹಲಿಯ ಮೆಟ್ರೊ ಆಧರಿಸಿಯೇ ಬೆಂಗಳೂರಿನ ಮೆಟ್ರೊ ಕಾಮಗಾರಿಗೆ ಗುರಿಗಳನ್ನು ನಿಗದಿ ಮಾಡಲಾಗಿತ್ತು. ಆದರೆ ಬೆಂಗಳೂರಿನ ಭೌಗೋಳಿಕ ಅಂಶಗಳು ದೆಹಲಿಗಿಂತ ಭಿನ್ನವಾಗಿದ್ದರಿಂದ ಕೂಡಿದ್ದರಿಂದ ಗುರಿ ಮಟ್ಟುವಲ್ಲಿ ವಿಳಂಬವಾಯಿತು ಎಂದರು.

ನಗರದಲ್ಲಿ ಹಗಲು ವೇಳೆಯಲ್ಲಿ ಭಾರಿ ಗಾತ್ರದ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.  ಈ ವಾಹನಗಳು ರಾತ್ರಿ ಹೊತ್ತಿನಲ್ಲಿ ಯಂತ್ರೋಪಕರಣ ಮತ್ತು ಸಲಕರಣೆಗಳನ್ನು ತಂದು ಬೆಳಿಗ್ಗೆ 5 ಗಂಟೆಯಷ್ಟರಲ್ಲಿ ಹಿಂದಿರುಗಬೇಕು. ಅಲ್ಲದೆ ರಾತ್ರಿ ಹೊತ್ತಿನಲ್ಲಿಯೇ ಕಾಮಗಾರಿಯನ್ನು ಕೈಗೊಳ್ಳಬೇಕಾದ್ದರಿಂದ ಸಹಜವಾಗಿಯೇ ಯೋಜನೆ ವಿಳಂಬವಾಗಿದೆ ಎಂದರು.

ಮೆಜೆಸ್ಟಿಕ್‌, ನಗರ ರೈಲ್ವೆ ನಿಲ್ದಾಣದ  ಅಡಿಯಲ್ಲಿ ಕಾಮಗಾರಿ ಕೈಗೊಳ್ಳುವುದು ಸವಾಲಿನಿಂದ ಕೂಡಿತ್ತು. ರೈಲು ನಿಲ್ದಾಣದಲ್ಲಿ ರೈಲ್ವೆ ಹಳಿಗಳ ಅಡಿಯಲ್ಲಿ ಮೆಟ್ರೊ ಕೆಲಸ ಮಾಡಬೇಕಿತ್ತು. ದೊಡ್ಡ ಬೀಮ್‌ಗಳನ್ನು ನಿರ್ಮಿಸಿ, ರೈಲ್ವೆ ಹಳಿಗಳಿಗೆ ಮತ್ತು ರೈಲು ಸಂಚಾರಕ್ಕೆ ಧಕ್ಕೆ ಆಗದಂತೆ ಎಚ್ಚರವಹಿಸಲಾಯಿತು. ಅಲ್ಲದೆ ಪ್ರತಿ ಗಂಟೆಗೊಮ್ಮೆ ಕೆಲಸ ನಿಲ್ಲಿಸಿ, ರೈಲ್ವೆ ಹಳಿಗಳ ಸ್ಥಿತಿಗತಿ ತಿಳಿದು ಪುನಃ ಕೆಲಸಕ್ಕೆ ಚಾಲನೆ ನೀಡಲಾಗುತ್ತಿತ್ತು’ ಎಂದು ಅವರು ಮಾಹಿತಿ ನೀಡಿದರು.

ನಿಗಮದ ಮುಖ್ಯ ಎಂಜಿನಿಯರ್‌ ಸಿದ್ದನಗೌಡ ಹೆಗ್ಗಾರೆಡ್ಡಿ, ‘ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಹಳಿ ನಿರ್ಮಿಸುವ ಕಾರ್ಯ ವರ್ಷದ ಹಿಂದೆಯೇ ಮುಗಿದಿತ್ತು. ಹಾಗಾಗಿ ಮೂರು ತಿಂಗಳು ಮೊದಲೇ ಈ ಮಾರ್ಗದಲ್ಲಿ ಸಂಚಾರ ಆರಂಭಿಸಬಹುದಿತ್ತು. ಆದರೆ, ಮೆಜೆಸ್ಟಿಕ್‌ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಕಾಯಲಾಗುತ್ತಿತ್ತು’ ಎಂದರು.

‘ಮೆಜೆಸ್ಟಿಕ್‌ ನಿಲ್ದಾಣಕ್ಕೆ ಸಂಬಂಧಿಸಿ­ದಂತೆ ಮೂರು ಬಾರಿ ಗುತ್ತಿಗೆ ಕರೆಯಲಾಯಿತು. 2012ರಲ್ಲಿ ಗುತ್ತಿಗೆ ಅಂತಿಮವಾಯಿತು. ಅಲ್ಲಿಂದ ನಾಲ್ಕು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸ­ಲಾಗಿದೆ. 

ಇಲ್ಲಿನ ಮೆಟ್ರೊ ನಿಲ್ದಾಣವು (ಪೂರ್ವ–ಪಶ್ಚಿಮ ಮತ್ತು ಉತ್ತರ–ದಕ್ಷಿಣ ಕಾರಿಡಾರ್‌ ನಿಲ್ದಾಣಗಳು ಸೇರಿ) ಒಟ್ಟಾರೆ 50 ಸಾವಿರ ಚದರ ಮೀಟರ್‌ ಪ್ರದೇಶವನ್ನು (ಸುಮಾರು 11 ಎಕರೆ)  ಹೊಂದಿದೆ. ಇಲ್ಲಿಗೆ ಒಂದು ಲಕ್ಷ ಕ್ಯೂಬಿಕ್ಸ್‌ನಷ್ಟು ಸಿಮೆಂಟ್‌ ಬಳಸಲಾಗಿದೆ. ಇಷ್ಟು ಸಿಮೆಂಟ್‌ನಿಂದ ಒಂದು ಡ್ಯಾಂ ಕೂಡ ಕಟ್ಟಬಹುದಿತ್ತು’ ಎಂದು ಅವರು ವಿವರಿಸಿದರು.

ಸಮನ್ವಯದ ಸಮಸ್ಯೆ: ಮೆಟ್ರೊ ಕಾಮಗಾರಿಯಲ್ಲಿ ತೊಡಗಿದ್ದ  ಸಿವಿಲ್‌, ಸಿಸ್ಟಮ್ಸ್‌, ಎಲೆಕ್ಟ್ರಿಕಲ್‌ ಮತ್ತಿತರ ಗುತ್ತಿಗೆದಾರರ ನಡುವೆ ಸಮನ್ವಯ ಸಾಧಿಸುವುದು ಸ್ವಲ್ಪ ಕಷ್ಟವಾಗಿತ್ತು.  ಮುಖ್ಯ ಕೆಲಸ ಮುಗಿದ್ದಿದ್ದರೂ ಅಂತಿಮ ಸ್ಪರ್ಶ ನೀಡುವ ಕೆಲಸಗಳು ಬಾಕಿ ಉಳಿಯುತ್ತಿದ್ದವು. ಹಾಗಾಗಿ ಕೆಲವೆಡೆ ದೊಡ್ಡ ಗುತ್ತಿಗೆದಾರರಿಗೇ ಅಂತಿಮ ಸ್ಪರ್ಶ ನೀಡುವ ಜವಾಬ್ದಾರಿಯನ್ನೂ ವಹಿಸಲಾಯಿತು’ ಎಂದರು.

ಆದರೂ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ವಿಶ್ವ ದರ್ಜೆಯ ಗುಣಮಟ್ಟವನ್ನು ‘ನಮ್ಮ ಮೆಟ್ರೊ’ ಹೊಂದಿದೆ ಎಂದರು.
ಬಿಎಂಆರ್‌ಸಿಎಲ್‌ನ ನಿರ್ದೇಶಕ (ಯೋಜನೆ) ವಿಜಯ್‌ ಕುಮಾರ್‌ ಧೈರ್‌, ‘ಬೆಂಗಳೂರಿನ ನಾಗರಿಕರು ಸಂಯಮ ಕಾಯ್ದುಕೊಂಡು, ನೀಡಿದ ಸಹಕಾರ­ದಿಂದ ಪೂರ್ವ– ಪಶ್ಚಿಮ ಕಾರಿಡಾರ್‌ ಪೂರ್ಣಗೊಳ್ಳಲು ಸಾಧ್ಯವಾಗಿದೆ’ ಎಂದು ಹೇಳಿದರು.

8 ನಿಮಿಷಕ್ಕೊಂದು ರೈಲು ಸಂಚಾರ

ADVERTISEMENT

‘ಪ್ರತಿ ಮೆಟ್ರೊ ರೈಲು ಮೂರು ಬೋಗಿಗಳನ್ನು ಹೊಂದಿದ್ದು, ಒಟ್ಟಾರೆ 975 ಜನರು ಒಮ್ಮೆಗೆ ಪ್ರಯಾಣಿ­ಸ­ಬಹುದು. ಪ್ರಸ್ತುತ ಪ್ರತಿ 10 ನಿಮಿಷಕ್ಕೆ ಒಮ್ಮೆ ರೈಲು ಸಂಚರಿಸುತ್ತಿದೆ. ಕಳೆದ ಮೂರು ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದ ಕಾರಣ ಪ್ರತಿ 8 ನಿಮಿಷಕ್ಕೊಮ್ಮೆ ಸಂಚಾರಕ್ಕೆ ಅನುವು ಮಾಡಿಕೊಡ­ಲಾಗಿತ್ತು.

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ  6 ನಿಮಿಷ ಅಥವಾ 3 ನಿಮಿಷಕ್ಕೊಮ್ಮೆ ಮೆಟ್ರೊ ಸಂಚರಿಸಲು ಅವಕಾಶ ಕಲ್ಪಿಸಬಹುದಾಗಿದೆ’ ಎಂದು ಬಿಎಂಆರ್‌ಸಿಇಎಲ್‌ ನಿರ್ದೇಶಕ (ಯೋಜನೆ)  ದೋಕೆ  ಪ್ರತಿಕ್ರಿಯಿಸಿದರು.

ಮೆಟ್ರೊ ರೈಲು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ  ಹಲವೆಡೆ ತಿರುವುಗಳು, ನಿಲ್ದಾಣಗಳು ಎದುರಾಗುವ ಕಾರಣ ಪ್ರಸ್ತುತ ಅದು ಗಂಟೆಗೆ 34 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ದೆಹಲಿಯ ಮೆಟ್ರೊ ವೇಗವೂ ಇಷ್ಟೇ ಇದೆ ಎಂದರು.

ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣದಲ್ಲಿ ಮುಂದಿನ ಆರು ತಿಂಗಳಲ್ಲಿ ಸೌರ ವಿದ್ಯುತ್‌ನಿಂದ ಎರಡು ಮೆಗಾ ವಾಟ್‌ ವಿದ್ಯುತ್‌ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.