ADVERTISEMENT

ಮೆಟ್ರೊ ಸಂಚಾರ: ಹರಿದುಬಂದ ಜನಸಾಗರ

ಒಂದೇ ದಿನದಲ್ಲಿ ಲಕ್ಷ ಜನ ಪ್ರಯಾಣಿಕರು, ಟಿಕೆಟ್ ಕೌಂಟರ್‌ ಎದುರು ಉದ್ದದ ಸರದಿ

​ಪ್ರಜಾವಾಣಿ ವಾರ್ತೆ
Published 1 ಮೇ 2016, 19:35 IST
Last Updated 1 ಮೇ 2016, 19:35 IST
ಕೆಂಪೇಗೌಡ ಮೆಜೆಸ್ಟಿಕ್‌್ ಮೆಟ್ರೊ ರೈಲು ನಿಲ್ದಾಣದಲ್ಲಿ ಟಿಕೆಟ್‌್ ಖರೀದಿಸಲು ಸರದಿಯಲ್ಲಿ ನಿಂತಿದ್ದ ಪ್ರಯಾಣಿಕರು   - ಪ್ರಜಾವಾಣಿ ಚಿತ್ರ`
ಕೆಂಪೇಗೌಡ ಮೆಜೆಸ್ಟಿಕ್‌್ ಮೆಟ್ರೊ ರೈಲು ನಿಲ್ದಾಣದಲ್ಲಿ ಟಿಕೆಟ್‌್ ಖರೀದಿಸಲು ಸರದಿಯಲ್ಲಿ ನಿಂತಿದ್ದ ಪ್ರಯಾಣಿಕರು   - ಪ್ರಜಾವಾಣಿ ಚಿತ್ರ`   

ಬೆಂಗಳೂರು: ಮೆಟ್ರೊ ಸುರಂಗ ಮಾರ್ಗದಲ್ಲಿ ಸಂಚರಿಸುವ ಮೋಜು ಅನುಭವಿಸಲು ರಜಾ ದಿನವಾದ ಭಾನುವಾರ ಜನಪ್ರವಾಹವೇ ಹರಿದುಬಂತು. ಸುಮಾರು 1.20 ಲಕ್ಷ ಪ್ರಯಾಣಿಕರು ಮೆಟ್ರೊ ನಿಲ್ದಾಣಗಳಿಗೆ ಲಗ್ಗೆಯಿಟ್ಟರು.

‘ನಮ್ಮ ಮೆಟ್ರೊ’ ರೈಲು ಸಂಚಾರ ಸೇವೆ ಆರಂಭವಾದ ಬಳಿಕ ಒಂದೇ ದಿನದಲ್ಲಿ ಲಕ್ಷ ಜನ ಪ್ರಯಾಣಿಕರನ್ನು ಕಂಡಿದ್ದು ಇದೇ ಮೊದಲು. ಪ್ರತಿ ನಿಲ್ದಾಣದ ಟಿಕೆಟ್‌ ಕೌಂಟರ್‌ಗಳ ಮುಂದೆಯೂ ಉದ್ದನೆಯ ಸರದಿಗಳು ಇದ್ದವು. ಸ್ಮಾರ್ಟ್‌ ಕಾರ್ಡ್‌ ಹೊಂದಿದವರು ಸರದಿಯಲ್ಲಿ ನಿಲ್ಲುವ ಕಿರಿಕಿರಿ ಇಲ್ಲದೆ ನಗುತ್ತಾ ರೈಲು ಹತ್ತಲು ಹೊರಟರೆ, ಟಿಕೆಟ್‌ ಖರೀದಿಗೆ ಹೊರಟವರು ಕೌಂಟರ್‌ಗಳ ಮುಂದೆ ಬೆವರು ಹರಿಸುತ್ತಾ ನಿಲ್ಲಬೇಕಾಯಿತು. ಮೆಟ್ರೊ ನಿಲ್ದಾಣಗಳ ಸಿಬ್ಬಂದಿ ಬೆಳಗಿನಿಂದ ರಾತ್ರಿವರೆಗೆ ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿದ್ದರು. 

60 ಅಡಿ ಆಳದಲ್ಲಿ ನಿರ್ಮಿಸಲಾದ ಸುರಂಗದಲ್ಲಿ ರೈಲು ಶಿಳ್ಳೆ ಹಾಕುತ್ತಾ ಮುನ್ನುಗ್ಗುತ್ತಿದ್ದಂತೆ ಮೇಲಿನ ರಸ್ತೆಗಳಲ್ಲಿ ಉಂಟಾದ ದಟ್ಟಣೆಯಿಂದ ಪಾರಾದ ಖುಷಿಯಲ್ಲಿ ಪ್ರಯಾಣಿಕರು ತೇಲಿದರು. ಮೆಜೆಸ್ಟಿಕ್‌ನಿಂದ ಎಂ.ಜಿ. ರಸ್ತೆವರೆಗೆ ಸುರಂಗದಲ್ಲಿ ಪ್ರಯಾಣದ ಅನುಭವ ಪಡೆಯಲು ಭಾರಿ ದಟ್ಟಣೆ ಇತ್ತು.

ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಸಂಪೂರ್ಣ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಸುತ್ತುಹಾಕುವ ಉತ್ಸಾಹ ಸಹ ಎದ್ದು ಕಾಣುತ್ತಿತ್ತು.
ಕಬ್ಬನ್‌ ಪಾರ್ಕ್‌ನಲ್ಲಿ ಭಾನುವಾರದ ವಿಹಾರಕ್ಕೆ ಬಂದವರು ಸಹ ಮೆಟ್ರೊ ರೈಲು ಬಳಸಿ ನೇರವಾಗಿ ಉದ್ಯಾನ ಪಕ್ಕದ ನೆಲದಡಿ ನಿಲ್ದಾಣಕ್ಕೆ ಬಂದಿಳಿದರು.

ಮೆಜೆಸ್ಟಿಕ್‌ ನಿಲ್ದಾಣದಲ್ಲಂತೂ ಟಿಕೆಟ್‌ ಖರೀದಿಗೆ ಭಾರಿ ಉದ್ದದ ಸರದಿಗಳಿದ್ದವು. ನಾನು ಕಳೆದ 15 ನಿಮಿಷಗಳಿಂದ ಸರದಿಯಲ್ಲಿ ಕಾಯುತ್ತಿದ್ದೇನೆ. ಈ ಕಾಯುವ ತಾಪತ್ರಯದಿಂದ ಮುಕ್ತವಾಗಲು ನಾನೂ ಸ್ಮಾರ್ಟ್‌ ಕಾರ್ಡ್‌ ಖರೀದಿಸುತ್ತೇನೆ’ ಎಂದು ನಾಗಸಂದ್ರದ ಗಜಾನನ ಹೆಗಡೆ ಹೇಳಿದರು.

ಪ್ರಯಾಣದ ಖುಷಿ: ಮಾಗಡಿ ರಸ್ತೆಯಿಂದ ಎಂ.ಜಿ.ರಸ್ತೆವರೆಗೆ ಮೆಟ್ರೊ ರೈಲಿನಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡಿದ ಖಾಸಗಿ ಸಂಸ್ಥೆ ಉದ್ಯೋಗಿ ಎಚ್‌. ಶಶಿಧರ್‌, 15 ನಿಮಿಷಗಳಲ್ಲಿ ಕಚೇರಿ ತಲುಪಿದ್ದಕ್ಕೆ ಹರ್ಷಚಿತ್ತರಾಗಿದ್ದರು.

‘ರಾಜಾಜಿನಗರದಿಂದ ಎಂ.ಜಿ.ರಸ್ತೆವರೆಗೆ ನಾನು ಸುಮಾರು ವರ್ಷಗಳಿಂದ ಪ್ರತಿದಿನ ಬಸ್ಸಿನಲ್ಲಿ ಬರುತ್ತಿದ್ದೆ. ಒಂದೂವರೆ ಗಂಟೆ ಹಿಡಿಯುತ್ತಿತ್ತು. ಈಗ ಕೇವಲ 15 ನಿಮಿಷಗಳಲ್ಲೇ ಕಚೇರಿಗೆ ಬಂದಿದ್ದೇನೆ. ಅಲ್ಲದೆ ಬಸ್ಸಿಗೆ ₹ 33 ವ್ಯಯಿಸಿದರೆ, ಮೆಟ್ರೊ ಟಿಕೆಟ್‌ಗೆ ಕೊಟ್ಟಿದ್ದು ಬರಿ ₹ 17. ಹವಾನಿಯಂತ್ರಿತ ವ್ಯವಸ್ಥೆ ಬೇರೆ’ ಎಂದು ತಮ್ಮ ಖುಷಿಗೆ ಕಾರಣಗಳನ್ನು ಪಟ್ಟಿ ಮಾಡಿದರು.

‘ಸ್ಮಾರ್ಟ್‌ ಕಾರ್ಡ್‌ ಖರೀದಿಸಿದರೆ ಯಾವುದೇ ಕಿರಿಕಿರಿ ಇಲ್ಲದೆ ಆರಾಮವಾಗಿ ಪ್ರಯಾಣ ಮಾಡಬಹುದು. ಹೆಚ್ಚಿನ ಜನ ಮೆಟ್ರೊ ಬಳಕೆ ಮಾಡಿದಷ್ಟು ರಸ್ತೆ ಸಂಚಾರದ ಒತ್ತಡ ಕಡಿಮೆಯಾಗಲಿದೆ’ ಎಂದು ಹೇಳಿದರು.

ಮೆಟ್ರೊ ರೈಲು ಸೇವೆ ವಿಸ್ತರಣೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಐಪಿಎಲ್‌ ಕ್ರಿಕೆಟ್‌ ಪಂದ್ಯ ನಡೆಯಲಿರುವ ಕಾರಣ ಮತ್ತೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಮೆಟ್ರೊ ರೈಲು ಸೇವೆಯ ಅವಧಿಯನ್ನೂ ವಿಸ್ತರಿಸಲಾಗಿದೆ.

ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿ ಹಾಗೂ ಸಂಪಿಗೆ ರಸ್ತೆಯಿಂದ ನಾಗಸಂದ್ರ ಎರಡೂ ಮಾರ್ಗಗಳಲ್ಲಿ ರಾತ್ರಿ 12.30 ರವರೆಗೆ ರೈಲುಗಳು ಓಡಲಿವೆ.

ಬೈಯಪ್ಪನಹಳ್ಳಿ ನಿಲ್ದಾಣದ ಬದಲು ಸ್ವಾಮಿ ವಿವೇಕಾನಂದ ನಿಲ್ದಾಣದಿಂದ ಫೀಡರ್‌ ಬಸ್‌ಗಳ ಸೌಲಭ್ಯ ಕಲ್ಪಿಸಲು ಬಿಎಂಟಿಸಿ ಒಪ್ಪಿದೆ ಎಂದು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ತಿಳಿಸಿದರು.

ಮೆಟ್ರೊ ಸುರಂಗದ ಮೇಲಿನ ರಸ್ತೆ ಕುಸಿತ: ಸಂಚಾರ ದಟ್ಟಣೆ
‘ನಮ್ಮ ಮೆಟ್ರೊ’ದ ಸುರಂಗ ಮಾರ್ಗ ರೈಲು ಸಂಚಾರಕ್ಕೆ ಚಾಲನೆ ದೊರೆತು ದಿನ ಕಳೆಯುವರಷ್ಟರಲ್ಲೇ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಸುರಂಗದ ಮೇಲ್ಭಾಗದ ರಸ್ತೆ ಕುಸಿದು ಟೆಂಪೊ ಚಕ್ರಗಳು ಹಳ್ಳದಲ್ಲಿ ಸಿಲುಕಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.

ಚಿಕ್ಕಪೇಟೆಯಿಂದ ಚಿಕ್ಕಬಳ್ಳಾಪುರಕ್ಕೆ ಸರಕು ತುಂಬಿಕೊಂಡು ಹೋಗುತ್ತಿದ್ದ ಟೆಂಪೊ, ರಾತ್ರಿ 11 ಗಂಟೆ ಸುಮಾರಿಗೆ ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಬಂದಿದೆ. ಸುರಂಗದ ಮೇಲ್ಭಾಗದ ರಸ್ತೆಯಲ್ಲಿ ಹೋಗುವಾಗ ಹಿಂದಿನ ಚಕ್ರಗಳು ಹಳ್ಳದಲ್ಲಿ ಸಿಲುಕಿಕೊಂಡವು.

ಇದರಿಂದ  ಸುಮಾರು ಒಂದು ಗಂಟೆ ದಟ್ಟಣೆ ಉಂಟಾಯಿತು. ಕೂಡಲೇ  ಸ್ಥಳಕ್ಕೆ ದೌಡಾಯಿಸಿದ ಮೆಟ್ರೊ ಅಧಿಕಾರಿಗಳು ಹಾಗೂ ಚಿಕ್ಕಪೇಟೆ ಸಂಚಾರ ಪೊಲೀಸರು, ಟೆಂಪೊ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹಳ್ಳ ತೆಗೆಯಲಾಗಿತ್ತು: ‘ರಸ್ತೆ ವಿಭಜಕಕ್ಕೆ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸುವ ಉದ್ದೇಶದಿಂದ ರಸ್ತೆಯಲ್ಲಿ ಹಳ್ಳ ತೋಡಲಾಗಿತ್ತು. ಆ ಜಾಗಕ್ಕೆ ಹೋಗದಂತೆ ಸುತ್ತಲೂ ಟೇಪ್ ಹಾಕಲಾಗಿತ್ತಾದರೂ, ಚಾಲಕ ಆ ಪ್ರದೇಶದಲ್ಲಿ ಟೆಂಪೊ ಚಾಲನೆ ಮಾಡಿದ್ದರಿಂದ ಈ ಘಟನೆ ನಡೆದಿದೆ. ಇದರಿಂದ ಸುರಂಗ ಮಾರ್ಗಕ್ಕೆ ಯಾವುದೇ ತೊಂದರೆ ಆಗಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.