ADVERTISEMENT

ಯಾವ ಜಾತಿಯವರಿಗೆ ಟಿಕೆಟ್‌ ನೀಡಲಿ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 20:04 IST
Last Updated 18 ಮಾರ್ಚ್ 2017, 20:04 IST
ರಮೇಶ್‌ ಬಾಬು ಅವರಿಗೆ ಯುನೈಟೆಡ್‌ ಲಾಯರ್‌್ಸ್ ಪೋರಂ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಸ್ಮರಣಿಕೆ ನೀಡಿದರು. ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ಎಚ್‌.ಡಿ.ದೇವೇಗೌಡ, ಎಸ್‌.ಎನ್‌.ಅಶ್ವತ್ಥ ನಾರಾಯಣ, ಪ್ರಮೀಳಾ ನೇಸರ್ಗಿ ಇದ್ದಾರೆ. – ಪ್ರಜಾವಾಣಿ ಚಿತ್ರ
ರಮೇಶ್‌ ಬಾಬು ಅವರಿಗೆ ಯುನೈಟೆಡ್‌ ಲಾಯರ್‌್ಸ್ ಪೋರಂ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಸ್ಮರಣಿಕೆ ನೀಡಿದರು. ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ಎಚ್‌.ಡಿ.ದೇವೇಗೌಡ, ಎಸ್‌.ಎನ್‌.ಅಶ್ವತ್ಥ ನಾರಾಯಣ, ಪ್ರಮೀಳಾ ನೇಸರ್ಗಿ ಇದ್ದಾರೆ. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಉದ್ದಗಲಕ್ಕೆ ಓಡಾಡಿದ ಅನುಭವ ನನಗಿದೆ. ಆದರೂ, ಚುನಾವಣೆಯಲ್ಲಿ ಯಾವ ಜಾತಿಯವರಿಗೆ ಟಿಕೆಟ್‌ ನೀಡಲಿ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಯುನೈಟೆಡ್‌ ಲಾಯರ್ಸ್‌ ಫೋರಂ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಧಾನ ಪರಿಷತ್‌ ಸದಸ್ಯ ರಮೇಶ್‌ಬಾಬು ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎರಡು ದೊಡ್ಡ ಸಮುದಾಯಗಳಿವೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಂತಹ ಪರಿಸ್ಥಿತಿ ಇಲ್ಲ. 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಲಿಂಗಾಯತರಿಗೆ, 40ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಕ್ಕಲಿಗರಿಗೆ ಟಿಕೆಟ್‌ ನೀಡಲು ಸಾಧ್ಯವಿಲ್ಲ. ಟಿಕೆಟ್‌ ನೀಡಬಹುದು. ಪರಿಶಿಷ್ಟ ಜಾತಿಯವರಿಗೆ 35 ಟಿಕೆಟ್‌ ಹಾಗೂ ಪರಿಶಿಷ್ಟ ಪಂಗಡದವರಿಗೆ 15 ಟಿಕೆಟ್‌ ಮೀಸಲಿಡಬೇಕು. ಇನ್ನುಳಿದ ಟಿಕೆಟ್‌ಗಳನ್ನು ಯಾರಿಗೆ ನೀಡಲಿ’ ಎಂದರು.

‘ರಾಜ್ಯದ ಜನರ ಹಿತವನ್ನು ಕಾಪಾಡಲು ಪ್ರಾದೇಶಿಕ ಪಕ್ಷವನ್ನು ಬಲಪಡಿಸಬೇಕಾದ ಅಗತ್ಯ ಇಲ್ಲವೇ ಎಂಬುದನ್ನು ಜನರೇ ತೀರ್ಮಾನಿಸಬೇಕು’ ಎಂದರು. ‘ರಾಜ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳ ಕುಸಿತಕ್ಕೆ ದುಡ್ಡು ಮತ್ತು ಜಾತಿ ವ್ಯವಸ್ಥೆ ಕಾರಣವಾಗಿದೆ. ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ವಕೀಲರ ಮೇಲೂ ಇದೆ’ ಎಂದರು.

ಹಿರಿಯ ವಕೀಲ ಉದಯ ಹೊಳ್ಳ ಮಾತನಾಡಿ, ‘ಸ್ವಾತಂತ್ರ್ಯ ಬಂದ ಆರಂಭದಲ್ಲಿ ಶಾಸನಸಭೆಗಳಲ್ಲಿ ವಕೀಲರ ಪ್ರಾತಿನಿಧ್ಯ ಹೆಚ್ಚು ಇತ್ತು. ಈಗ ವಕೀಲರಿಗೆ ಸಾಮಾಜಿಕ ಕಾರ್ಯಗಳಿಗೆ ಬಿಡುವು ಸಿಗುತ್ತಿಲ್ಲ’ ಎಂದರು. ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.