ADVERTISEMENT

ಯುವಿಸಿಇ: ಸರ್ಕಾರದ ಆದೇಶ ಪಾಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 19:39 IST
Last Updated 2 ಸೆಪ್ಟೆಂಬರ್ 2014, 19:39 IST

ಬೆಂಗಳೂರು: ‘ಯೂನಿವರ್ಸಿಟಿ ವಿಶ್ವೇ­ಶ್ವ­­ರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ)ನಲ್ಲಿ ಸರ್ಕಾರಿ ಆದೇಶದ ಅನುಸಾರ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು’ ಎಂದು ಯುವಿಸಿಇ ಹೋರಾಟ ಸಮಿತಿ ಆಗ್ರಹಿಸಿದೆ.

‘ಕಡಿಮೆ ಶುಲ್ಕ ಇರುವುದರಿಂದಲೇ ನೂರಾರು ಬಡ ಹಾಗೂ ಪ್ರತಿಭಾ­ವಂತ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು­ಗಳನ್ನು ಆರಿಸಿಕೊಂಡು ಬರುತ್ತಾರೆ. ಇದೀಗ ಏಕಾಏಕಿ ಶುಲ್ಕ­ವನ್ನು 24 ಪಟ್ಟು ಏರಿಸಿರುವುದು ವಿದ್ಯಾರ್ಥಿಗಳಿಗೆ ಆಘಾತವನ್ನು ಉಂಟುಮಾಡಿದೆ. ಅಲ್ಲದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ’ ಎಂದು ಸಮಿತಿ ಆರೋಪಿಸಿದೆ.

‘ಅಭಿವೃದ್ಧಿ ಶುಲ್ಕ ಮತ್ತು ಇನ್ನುಳಿದ ಶುಲ್ಕಗಳ ನೆಪದಲ್ಲಿ ವಿದ್ಯಾರ್ಥಿಗಳಿಂದ ₨8,500 ವಸೂಲಿ ಮಾಡಲು ವಿಶ್ವವಿದ್ಯಾಲಯ ಮುಂದಾಗಿದೆ. ಈ ಕ್ರಮ ಡೊನೇಷನ್‌ ಪಡೆದಂತೆ ಆಗಿದೆ’ ಎಂದು ಸಮಿತಿ ದೂರಿದೆ.

ಶುಲ್ಕ ವಿನಾಯಿತಿ ನೀಡಲು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದುಕೊಡಬೇಕು ಎಂದು ಕುಲಪತಿ ಪಟ್ಟು ಹಿಡಿದಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ವಿನಾಯಿತಿ ನೀಡಲು ಯಾವುದೇ ಪೂರ್ವ ನಿಬಂಧನೆಗಳನ್ನು ಹೇರಬಾರದು’ ಎಂದು ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.