ADVERTISEMENT

‘ಯೋಜನಾರಹಿತ ಜನ­ವಸತಿಯೇ ಕಾರಣ’

ಪ್ರವಾಹದ ಕುರಿತು ಸ್ವಿಟ್ಜ್‌ರ್ಲೆಂಡ್‌ನ ಬರ್ನ್‌ ವಿ.ವಿ ಮುಖ್ಯಸ್ಥ ಪ್ರೊ. ಥಾಮಸ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 20:07 IST
Last Updated 14 ಸೆಪ್ಟೆಂಬರ್ 2017, 20:07 IST
‘ಯೋಜನಾರಹಿತ ಜನ­ವಸತಿಯೇ ಕಾರಣ’
‘ಯೋಜನಾರಹಿತ ಜನ­ವಸತಿಯೇ ಕಾರಣ’   

ಬೆಂಗಳೂರು: ‘ಭಾರತದಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಗೆ ತಾಪಮಾನ ಬದಲಾವಣೆ ಕಾರಣ. ಇದರ ಜೊತೆ, ನದಿ ದಂಡೆ­ಗಳಲ್ಲಿ ಯೋಜನಾರಹಿತವಾಗಿ ಜನ­ವಸತಿ ನೆಲೆ­ಗಳು ಆವ್ಯಾಹತವಾಗಿ ತಲೆ ಎತ್ತಿರುವುದು ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಲು ಕಾರಣವಾಗಿದೆ’ ಎಂದು ಸ್ವಿಟ್ಜರ್ಲೆಂಡ್‌ನ ಬರ್ನ್‌ ವಿಶ್ವವಿದ್ಯಾಲಯದ ಹವಾಮಾನ ಮತ್ತು ಪರಿಸರ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಥಾಮಸ್‌ ಸ್ಟಾಕರ್‌ ತಿಳಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ದಿವೆಚಾ ತಾ‍ಪಮಾನ ಬದಲಾವಣೆ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ‘ತಾಪಮಾನ ಬದಲಾವಣೆ’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಪ್ರವಾಹ ಮತ್ತು ಸುನಾಮಿಗೂ ವ್ಯತ್ಯಾಸವಿದೆ. ಸಮುದ್ರ ಮಟ್ಟ ಏರಿಕೆಯಾಗುವುದರಿಂದ ಸುನಾಮಿ ಸಂಭವಿಸುವುದಿಲ್ಲ. ಇದು ನಿಸರ್ಗ ಸಹಜವಾದುದು. ಯಾವುದೇ ರೀತಿಯ ಹವಾಮಾನ ಇದ್ದರೂ ನಿಯಮಿತವಾಗಿ ಸುನಾಮಿಗಳು ಘಟಿಸುತ್ತಿರುತ್ತವೆ’ ಎಂದರು.

ADVERTISEMENT

‘ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಅತಿಯಾದ ಕೈಗಾರೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಎಗ್ಗಿಲ್ಲದ ಬಳಕೆಯಿಂದ ಮಾಲಿನ್ಯ ಪ್ರಮಾಣ ಹೆಚ್ಚಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಇಲ್ಲಿ ಇಂಗಾಲ ಹೊರಸೂಸುವಿಕೆಯ ತಲಾ ಪ್ರಮಾಣ ಕಡಿಮೆ ಇದೆ. ಆದರೆ, ಒಟ್ಟು ಮಾಲಿನ್ಯ ಹೊರಸೂಸುವ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಗಣನೀಯ‌ವಾಗಿ ಏರಿಕೆ ಆಗುತ್ತಿದೆ’ ಎಂದರು.

‘ಹಾಗಾಗಿ ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಇಂಗಾಲ ಅಥವಾ ಕಡಿಮೆ ಮಾಲಿನ್ಯ ಹೊಂದಿದ ಅಭಿವೃದ್ಧಿಯ ಹಾದಿಯನ್ನು ಕಂಡುಕೊಂಡು, ಮಾಲಿನ್ಯ ಪ್ರಮಾಣ ತಗ್ಗಿಸಲು ಮಹತ್ತರ ಕೊಡುಗೆ ನೀಡಬೇಕು’ ಎಂದು ತಿಳಿಸಿದರು.

‘ನೈಸರ್ಗಿಕವಾಗಿ ಒಂದು ವರ್ಷ ತಾಪಮಾನ ಹೆಚ್ಚಿದ್ದರೆ, ಮತ್ತೊಂದು ವರ್ಷ ಕಡಿಮೆ ಇರುತ್ತದೆ. ಆದರೆ, ಸತತ ಮೂರು ವರ್ಷಗಳಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಲೇ ಇದೆ’ ಎಂದು ಹೇಳಿದರು.

‘ತಾಪಮಾನ ಬದಲಾವಣೆಯಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಸಿಹಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟ ಏರಿಕೆ ಆಗುತ್ತಿರುವುದರಿಂದ ಭೂಪ್ರದೇಶ ಕುಗ್ಗುತ್ತಿದೆ’ ಎಂದು ವಿವರಿಸಿದರು.

ಇದರ ಪರಿಣಾಮಗಳನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳೇನು ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೊದಲು ಸಕ್ರಿಯ ಪ್ರಜೆಯಾಗಬೇಕು. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು. ಜನರನ್ನು ಒಳಗೊಂಡು ಆ ಬಗ್ಗೆ ಚರ್ಚಿಸಬೇಕು. ನಮ್ಮ ಜೀವನಶೈಲಿಯೂ ತಾಪಮಾನ ಬದಲಾವಣೆಗೆ ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಇಂಗಾಲ ಬಳಸುವ ಜೀವನಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.