ADVERTISEMENT

ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಪೊಲೀಸರ ‘ಆತಿಥ್ಯ’

ಮಾನವ ಸಾಗಣೆ ತಡೆ ಘಟಕ ಹಾಗೂ ಸಿಸಿಬಿ ಅಧಿಕಾರಿಗಳಿಂದ 256 ಮಕ್ಕಳು, ಆರು ಮೌಲ್ವಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:44 IST
Last Updated 11 ಜುಲೈ 2017, 19:44 IST
ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪೊಲೀಸರು ಮಕ್ಕಳನ್ನು ವಿಚಾರಣೆ ನಡೆಸುತ್ತಿರುವ ವಿಷಯ ತಿಳಿದು ನಿಲ್ದಾಣದ ಬಳಿ ಜನ ಜಮಾಯಿಸಿದ್ದರು	– ಪ್ರಜಾವಾಣಿ ಚಿತ್ರ
ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪೊಲೀಸರು ಮಕ್ಕಳನ್ನು ವಿಚಾರಣೆ ನಡೆಸುತ್ತಿರುವ ವಿಷಯ ತಿಳಿದು ನಿಲ್ದಾಣದ ಬಳಿ ಜನ ಜಮಾಯಿಸಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಂಜಾನ್ ರಜೆ ಮುಗಿಸಿ ‘ಬೆಂಗಳೂರು–ಗುವಾಹಟಿ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಮಂಗಳವಾರ ನಗರಕ್ಕೆ ಬಂದಿಳಿದ ಬಿಹಾರ, ಅಸ್ಸಾಂ, ಉತ್ತರ ಪ್ರದೇಶ ರಾಜ್ಯಗಳ 256  ವಿದ್ಯಾರ್ಥಿಗಳು ಹಾಗೂ 6 ಮೌಲ್ವಿಗಳು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಇಡೀ ದಿನ ಪೊಲೀಸರ ವಿಚಾರಣೆ ಎದುರಿಸಬೇಕಾಯಿತು.

‘ರೈಲಿನಲ್ಲಿ ಮಕ್ಕಳನ್ನು ಸಾಗಣೆ ಮಾಡಲಾಗುತ್ತಿದೆ’ ಎಂದು ಪ್ರಯಾಣಿಕರೊಬ್ಬರು ನಿಯಂತ್ರಣ ಕೊಠಡಿಗೆ (100) ಮಾಹಿತಿ ನೀಡಿದ್ದರು. ಹೀಗಾಗಿ   ಕೆ.ಆರ್.ಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು,  ಮಕ್ಕಳು ಹಾಗೂ ಮೌಲ್ವಿಗಳನ್ನು ವಶಕ್ಕೆ ಪಡೆದಿದ್ದರು.

ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್‌) ಮಾತ್ರವಲ್ಲದೆ,  ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ), ಸಿಐಡಿಯ ಮಾನವ ಸಾಗಣೆ ತಡೆ ಘಟಕ ಹಾಗೂ ಸಿಸಿಬಿ ಅಧಿಕಾರಿಗಳು ಆ ವಿದ್ಯಾರ್ಥಿಗಳು ಮತ್ತು ಮೌಲ್ವಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಆ ನಂತರ ಮಕ್ಕಳೆಲ್ಲ ರಾಜ್ಯದ ವಿವಿಧ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಂಬುದು ಖಚಿತವಾಯಿತು.

ADVERTISEMENT

ಸಂಜೆಯಾದರೂ ಮಕ್ಕಳನ್ನು ಬಿಡುಗಡೆ ಮಾಡಲಿಲ್ಲವೆಂಬ ಕಾರಣಕ್ಕೆ ಕೆಲ ಸಂಘಟನೆಗಳು ಕಂಟೋನ್ಮೆಂಟ್ ನಿಲ್ದಾಣದ ಬಳಿ ಪ್ರತಿಭಟನೆ ಪ್ರಾರಂಭಿಸಿದವು.

‘ಮಕ್ಕಳಿಂದ ದೂರವಾಣಿ ಸಂಖ್ಯೆ ಪಡೆದು ಅವರ ಪೋಷಕರ ಜತೆ ಮಾತನಾಡುತ್ತಿದ್ದೇವೆ. ವಿದ್ಯಾಭ್ಯಾಸದ ಉದ್ದೇಶಕ್ಕೆ ಅವರೇ ಕಳುಹಿಸಿದ್ದಾರೆಯೇ ಎಂಬುದು ಖಚಿತವಾದ ಬಳಿಕ ನಾವೇ ಕಳುಹಿಸಿಕೊಡುತ್ತೇವೆ. ಕೆಲ ಮಕ್ಕಳ ಬಳಿ ಸಮರ್ಪಕ ದಾಖಲೆಗಳೂ ಇಲ್ಲ’ ಎಂದು ರೈಲ್ವೆ ಅಧಿಕಾರಿಗಳು ಸಂಘಟನೆ ಕಾರ್ಯಕರ್ತರಿಗೆ ತಿಳಿಸಿದರು.

ಸಂಜೆ 7 ಗಂಟೆ ಸುಮಾರಿಗೆ ದಾಖಲೆ ಪರಿಶೀಲನೆ ಕೆಲಸ ಪೂರ್ಣಗೊಳಿಸಿದ ರೈಲ್ವೆ ಪೊಲೀಸರು, ನಂತರ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತಂದು ವಿದ್ಯಾರ್ಥಿಗಳ ಹಾಗೂ ಮೌಲ್ವಿಗಳನ್ನು ಬಿಟ್ಟು ಕಳುಹಿಸಿದರು.

ರಜೆಗೆ ಹೋಗಿದ್ದರು: ‘ಬಡ ಕುಟುಂಬದಿಂದ ಬಂದಿರುವ 8 ರಿಂದ 15 ವರ್ಷ ವಯೋಮಾನದ ಈ ಮಕ್ಕಳು ಬೆಂಗಳೂರು, ಮಡಿಕೇರಿ, ತುಮಕೂರು ಹಾಗೂ ಶಿವಮೊಗ್ಗ  ಜಿಲ್ಲೆಗಳ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಂಜಾನ್ ರಜೆ ಕಾರಣದಿಂದ ಎಲ್ಲರೂ ಎರಡು ತಿಂಗಳ ಹಿಂದೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿದ್ದರು. ತರಗತಿ ಪುನರಾರಂಭವಾದ ಕಾರಣ ಮೌಲ್ವಿಗಳೇ ಹೋಗಿ ಅವರನ್ನು ನಗರಕ್ಕೆ ಕರೆದುಕೊಂಡು ಬರುತ್ತಿದ್ದರು. ಪೊಲೀಸರು ವದಂತಿಗೆ ಕಿವಿಕೊಟ್ಟು ಇಡೀ ದಿನ ಮಕ್ಕಳಿಗೆ ಹಿಂಸೆ ಕೊಟ್ಟದ್ದು ಸರಿಯಲ್ಲ’ ಎಂದು ಫ್ರೇಜರ್‌ಟೌನ್‌ನ ‘ಗೈಡೆನ್ಸ್‌ ಫಾರ್‌ ಮ್ಯಾನ್‌ಕೈಂಡ್ ಟ್ರಸ್ಟ್‌’ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಸಮೀವುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾದವರು ಎಂದರು:  ರೈಲಿನಲ್ಲಿ ಮೌಲ್ವಿಗಳ ಜತೆ ಅಷ್ಟೊಂದು ಮಕ್ಕಳನ್ನು ಕಂಡ ಪ್ರಯಾಣಿಕರೊಬ್ಬರು, ‘200ಕ್ಕೂ ಹೆಚ್ಚು ಬಾಂಗ್ಲಾದೇಶಿ ವಲಸಿಗ ಮಕ್ಕಳನ್ನು ಅಸ್ಸಾಂ ಮೂಲಕ ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ  ಸಾಗಣೆ ಮಾಡಲಾಗುತ್ತಿದೆ’ ಎಂದು ಸೋಮವಾರ ರಾತ್ರಿಯೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಕೊಟ್ಟಿದ್ದರು. ಅಲ್ಲಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು.

ಆ ನಂತರ ರಾಜ್ಯ ಗುಪ್ತದಳ, ರೈಲ್ವೆ ಪೊಲೀಸ್, ಸಿಸಿಬಿ ಹಾಗೂ ಸಿಐಡಿ ಅಧಿಕಾರಿಗಳು ಕಾರ್ಯಾಚರಣೆಗೆ ಸಜ್ಜಾದರು. ಮಂಗಳವಾರ ಬೆಳಿಗ್ಗೆ ಎರಡು ತಂಡಗಳನ್ನು ರಚಿಸಿಕೊಂಡು ಕೆ.ಆರ್.ಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಿಗೆ ತೆರಳಿದ್ದರು.

ಕೆ.ಆರ್.ಪುರ ನಿಲ್ದಾಣಕ್ಕೆ ಬಂದಿಳಿದ 32 ವಿದ್ಯಾರ್ಥಿಗಳು ಹಾಗೂ ಇಬ್ಬರು ಮೌಲ್ವಿಗಳನ್ನು ಒಂದು ತಂಡ ವಶಕ್ಕೆ ಪಡೆದರೆ, ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂದ 224 ಮಕ್ಕಳು ಹಾಗೂ ನಾಲ್ವರು ಮೌಲ್ವಿಗಳನ್ನು ಇನ್ನೊಂದು ತಂಡ ವಶಕ್ಕೆ ಪಡೆಯಿತು.

ಇಡೀ ದಿನ ಗದ್ದಲ: ಕಂಟೋನ್ಮೆಂಟ್ ನಿಲ್ದಾಣದ ಬಳಿ ಕೆಎಸ್‌ಆರ್‌ಪಿ ತುಕಡಿ ಸಹಿತ 50ಕ್ಕೂ ಹೆಚ್ಚು ಪೊಲೀಸರಿದ್ದರು. ಬೆಳಿಗ್ಗೆ 11.45ಕ್ಕೆ ರೈಲು ನಿಲ್ದಾಣಕ್ಕೆ ಬಂದಾಗ ನಿರೀಕ್ಷೆಯಂತೆಯೇ ಮಕ್ಕಳು ಹಾಗೂ ಮೌಲ್ವಿಗಳು ಮೂರು ಬೋಗಿಗಳಿಂದ ಇಳಿದರು.

ಪ್ಲಾಟ್‌ಫಾರಂನಲ್ಲೇ ಅವರನ್ನು ತಡೆದ ಪೊಲೀಸ್ ಪಡೆ, ಎಲ್ಲರನ್ನೂ ವಿಶ್ರಾಂತಿ ಕೊಠಡಿಗೆ ಕರೆದೊಯ್ದಿತು. ಅಲ್ಲೇ ಊಟ–ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿತು. ಸ್ವಲ್ಪ ಹೊತ್ತಿನಲ್ಲೇ ಕೆ.ಆರ್.ಪುರ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಮಕ್ಕಳು ಹಾಗೂ ಮೌಲ್ವಿಗಳನ್ನೂ ಈ ನಿಲ್ದಾಣಕ್ಕೆ ಕರೆತರಲಾಯಿತು.

ವಿದ್ಯಾರ್ಥಿಗಳನ್ನು ಪೊಲೀಸರು ವಶದಲ್ಲಿಟ್ಟುಕೊಂಡಿರುವ ಸುದ್ದಿ ತಿಳಿದು ನಿಲ್ದಾಣದ ಬಳಿ ಬಂದ ಕೆಲ ಸರ್ಕಾರೇತರ ಸಂಸ್ಥೆಗಳ ಸದಸ್ಯರು, ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಚಟುವಟಿಕೆಗಳಿಂದಾಗಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಇಡೀ ದಿನ ಗದ್ದಲ ಸೃಷ್ಟಿಯಾಯಿತು.

‘ಬಿಟ್ಟು ಕಳುಹಿಸಿ’: ಸಂಜೆ 5.30ರ ಸುಮಾರಿಗೆ ನಿಲ್ದಾಣಕ್ಕೆ ಬಂದ ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸ ಮೂರ್ತಿ, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅವರು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

‘ಒಂದು ಸಮದಾಯದ ಮಕ್ಕಳನ್ನು ಈ ರೀತಿ ಕೂಡಿಟ್ಟು ವಿಚಾರಣೆ ನಡೆಸುವುದು ಸರಿಯಲ್ಲ. ದಯವಿಟ್ಟು ಅವರನ್ನು ಬಿಟ್ಟು ಕಳುಹಿಸಿ’ ಎಂದು ಕೋರಿದರು.

ಇದೇ ವೇಳೆ ಮೌಲ್ವಿಗಳು, ‘ಎಲ್ಲ ಮಕ್ಕಳ ಮೂಲ ದಾಖಲೆಗಳು, ಅವರ ಮನೆ ವಿಳಾಸ, ಪೋಷಕರ ಬಗ್ಗೆ ಇನ್ನೆರಡು ದಿನಗಳಲ್ಲಿ ಮಾಹಿತಿಯನ್ನು ಒದಗಿಸುತ್ತೇವೆ’ ಎಂದು ಬರೆದುಕೊಟ್ಟರು. ನಂತರ ಎಲ್ಲರನ್ನೂ ಬಿಟ್ಟು ಕಳುಹಿಸಲಾಯಿತು.

ಎಸ್ಪಿಗಳಿಂದ ಮಾಹಿತಿ

‘ಮಕ್ಕಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂಬ ದೂರಿನಿಂದಾಗಿ ವಿವಿಧ ಏಜೆನ್ಸಿಗಳ ನೆರವಿನಿಂದ ಪರಿಶೀಲನೆ ನಡೆಸಿದ್ದೇವೆ. ಮಕ್ಕಳ ಪೂರ್ವಾಪರ ಹಾಗೂ ಅವರು ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಆಯಾ ರಾಜ್ಯಗಳ ಸಂಬಂಧಪಟ್ಟ ಎಸ್ಪಿಗಳಿಗೆ ಸೂಚಿಸಿದ್ದೇವೆ’ ಎಂದು ರೈಲ್ವೆ ಎಸ್ಪಿ ಚೈತ್ರಾ ತಿಳಿಸಿದರು.

ತಪ್ಪು ಸಂದೇಶ
‘ಭಾನುವಾರ ಬೆಳಿಗ್ಗೆ ಅಸ್ಸಾಂನಿಂದ ‘ಗುವಾಹಟಿ–ಬೆಂಗಳೂರು 12510’ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊರಟೆವು. ಮಾರ್ಗಮಧ್ಯೆ ಪ್ರಯಾಣಿಕರೊಬ್ಬರು ಮಕ್ಕಳ ಬಗ್ಗೆ ವಿಚಾರಿಸಿದರು. ಇವರೆಲ್ಲ ನಮ್ಮ ವಿದ್ಯಾರ್ಥಿಗಳು ಎಂದು ಹೇಳಿದ್ದೆ. ಆದರೆ, ಅವರು ಬೆಂಗಳೂರು ಪೊಲೀಸರಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದರು. ನಿಲ್ದಾಣದಲ್ಲಿ ನಮಗಾಗಿ ಅಷ್ಟೊಂದು ಪೊಲೀಸರು ಕಾಯುತ್ತಿದ್ದುದು ನೋಡಿ ಆಶ್ಚರ್ಯವಾಯಿತು. ಅವರು ಇಡೀ ದಿನ ನಮ್ಮನ್ನು ವಿಚಾರಣೆ ನಡೆಸಿದರೂ, ಯಾವುದೇ ಕಿರುಕುಳ ನೀಡದೆ ತುಂಬ ಸೂಕ್ಷ್ಮವಾಗಿಯೇ ನಡೆಸಿಕೊಂಡರು’ ಎಂದು ಮೌಲ್ವಿ ನಹೀಂ ಅತಾವುಲ್ಲಾ ಹೇಳಿದರು.

ಈ ಮಕ್ಕಳ ನಿರ್ವಹಣೆಯಲ್ಲಿ  ಪೊಲೀಸರ ಲೋಪವಿದೆ. ಮಹಿಳಾ ಮತ್ತು ಮಕ್ಕಳ ಸದನ ಸಮಿತಿ ಅಧ್ಯಕ್ಷನಾದ ನಾನು, ಈ ಬಗ್ಗೆ ವಿಚಾರಣೆ ಮಾಡುವಂತೆ ಸರ್ಕಾರಕ್ಕೆ ಕೋರುತ್ತೇನೆ.
-ಎನ್.ಎ ಹ್ಯಾರಿಸ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.