ADVERTISEMENT

ರಾಜಾಶ್ರಯದಿಂದ ಕಲೆ ಬೆಳೆಯಿತು: ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2014, 20:14 IST
Last Updated 21 ಜೂನ್ 2014, 20:14 IST
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌್ ಆರ್ಟ್ಸ್‌ನಲ್ಲಿ ಶನಿವಾರದಿಂದ ಆಯೋಜಿಸಿರುವ ರಾಜಾ ದೀನ್‌ ದಯಾಳ್‌ ಅವರ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಛಾಯಾಚಿತ್ರಗಳನ್ನು ವೀಕ್ಷಿಸಿದ ವಿದೇಶಿಯರು
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌್ ಆರ್ಟ್ಸ್‌ನಲ್ಲಿ ಶನಿವಾರದಿಂದ ಆಯೋಜಿಸಿರುವ ರಾಜಾ ದೀನ್‌ ದಯಾಳ್‌ ಅವರ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಛಾಯಾಚಿತ್ರಗಳನ್ನು ವೀಕ್ಷಿಸಿದ ವಿದೇಶಿಯರು   

ಬೆಂಗಳೂರು: ‘ಭಾರತದಲ್ಲಿ ಕಲೆಗಳಿಗೆ ರಾಜರ ಪ್ರೋತ್ಸಾಹ ಹೆಚ್ಚಾಗಿತ್ತು. ಹೈದರಾ­ಬಾದ್‌ ನಿಜಾಮರ ಆಶ್ರಯ­ದಲ್ಲಿದ್ದ ರಾಜಾ ದೀನ್‌ ದಯಾಳ್‌ ಅವರ ಛಾಯಾಚಿತ್ರಗಳಲ್ಲಿ ಇತಿಹಾಸ ದಾಖಲಾಗಿದೆ’ ಎಂದು ಲೇಖಕ ರಾಮಚಂದ್ರ ಗುಹಾ ಹೇಳಿದರು.

ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್ಸ್‌ನಲ್ಲಿ ಶನಿ­ವಾರ­ದಿಂದ ಆಯೋಜಿಸಿರುವ ರಾಜಾ ದೀನ್‌ ದಯಾಳ್‌ ಅವರ ಛಾಯಾ­ಚಿತ್ರಗಳ ಪ್ರದರ್ಶನ ಉದ್ಘಾ­ಟಿಸಿ ಅವರು ಮಾತನಾಡಿದರು.
‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀ­ತದ ಬೆಳವಣಿಗೆಗೆ ನಿಜಾಮರ ಪ್ರೋತ್ಸಾಹ ಹೆಚ್ಚಾಗಿತ್ತು. ಅದೇ ರೀತಿ ಇತರೆ ಕಲೆಗಳಿಗೂ ರಾಜಾಶ್ರಯದಿಂದ ಹೆಚ್ಚು ಅನುಕೂಲವಾಗಿದೆ’ ಎಂದರು.

‘ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು 1989ರಲ್ಲಿ ದೀನ್‌ ದಯಾಳ್‌ ಅವರ ಕುಟುಂಬ ಸದಸ್ಯ­ರಿಂದ ಅಪರೂಪದ ಛಾಯಾಚಿತ್ರ­ಗ­ಳನ್ನು ಸಂಗ್ರಹಿಸಿದೆ. ಈವರೆಗೆ ದೆಹಲಿ, ಮುಂಬೈ, ಭೋಪಾಲ್‌, ಗುವಾಹಟಿ, ಕೋಲ್ಕತ್ತಾ ಸೇರಿ ಅನೇಕ ಕಡೆ ಛಾಯಾ­ಚಿತ್ರಗಳ ಪ್ರದರ್ಶನ ಏರ್ಪಡಿಸ­ಲಾ­ಗಿದೆ’ ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಪ್ರಾದೇ­ಶಿಕ ವಿಭಾಗದ ಕಾರ್ಯ­ನಿರ್ವಾ­ಹಕ ನಿರ್ದೇಶಕ ವಿಕ್ರಮ್‌ ಸಂಪತ್‌ ಹೇಳಿದರು.

1880ರಲ್ಲಿ ತೆಗೆದಿರುವ ವಿಜಾ­ಪುರದ ಬಾರಾ ಕಮಾನು, ಗುಲ್ಬ­ರ್ಗದ ಕೋಟೆಬೀದಿ, 1890ರಲ್ಲಿ ತೆಗೆದಿರುವ ಗುಲ್ಬರ್ಗದ ಮಹಾ ಕಮಾನಿನ ಛಾಯಾ­ಚಿತ್ರ­ಗಳು, ಹೈದರಾ­ಬಾದ್‌ ನಿಜಾಮರ ಕುಟುಂಬ ಸದಸ್ಯರ ಛಾಯಾ­ಚಿತ್ರಗಳು, ಬ್ರಿಟಿಷ್‌ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಛಾಯಾಚಿತ್ರಗಳು ­ಸೇರಿ 168 ಅಪರೂಪದ ಛಾಯಾ­ಚಿತ್ರ­ಪ್ರದರ್ಶನದಲ್ಲಿವೆ. ಪ್ರದರ್ಶನಕ್ಕೆ ಪ್ರವೇಶ ಉಚಿತ. ಜುಲೈ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ­ಯ­ವ­ರೆಗೆ ಪ್ರದ­ರ್ಶನ  ವೀಕ್ಷಣೆಗೆ ಮುಕ್ತವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.