ADVERTISEMENT

ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲಿ ಗಣಿಗಾರಿಕೆ

ಕೇಂದ್ರ ಪರಿಸರ ಸಚಿವರಿಗೆ ದೂರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:40 IST
Last Updated 17 ಮಾರ್ಚ್ 2018, 19:40 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹರ್ಷವರ್ಧನ ಅವರಿಗೆ ವಿಜಯ್‌ ನಿಶಾಂತ್‌ ವಿವರಿಸಿದರು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹರ್ಷವರ್ಧನ ಅವರಿಗೆ ವಿಜಯ್‌ ನಿಶಾಂತ್‌ ವಿವರಿಸಿದರು   

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲಿರುವ ರಾಗಿಹಳ್ಳಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ವೃಕ್ಷಾ ಪ್ರತಿಷ್ಠಾನ ಆರೋಪಿಸಿದೆ.

ಈ ಕುರಿತು ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ ಅವರಿಗೆ ಪ್ರತಿಷ್ಠಾನವು ಶನಿವಾರ ದೂರು ನೀಡಿದೆ.

‘ರಾಗಿಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ಕಲ್ಲು ಪುಡಿಮಾಡುವ ಘಟಕ ಆರಂಭಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸುವಾಗ ಮಾಲೀಕರು ಅರಣ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಾಡು ಇಲ್ಲ ಎಂದು ಅವರು ತಿಳಿಸಿದ್ದರು. ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆಯೇ ಈ ಘಟಕಕ್ಕೆ ಅನುಮತಿ ನೀಡಿದ್ದರು’ ಎಂದು ಪ್ರತಿಷ್ಠಾನದ ವಿಜಯ್‌ ನಿಶಾಂತ್‌ ದೂರಿದ್ದಾರೆ.

ADVERTISEMENT

ಈ ಕ್ವಾರಿಯ ಸುತ್ತಲೂ ರಾಷ್ಟ್ರೀಯ ಉದ್ಯಾನ ಪ್ರದೇಶ ಆವರಿಸಿದೆ. ಇದು ಆನೆ ಕಾರಿಡಾರ್‌ನ ಪಕ್ಕದಲ್ಲೇ ಇದೆ. ಅಕ್ಷಾಂಶ– ರೇಖಾಂಶ ಆಧರಿಸಿ ಪರಿಶೀಲಿಸಿದಾಗ ಈ ಪ್ರದೇಶವು ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದಲ್ಲೇ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಕಲ್ಲು ಸಾಗಿಸುವ ವಾಹನಗಳು ಹಗಲು ರಾತ್ರಿ ಸಂಚರಿಸುತ್ತಿರುತ್ತವೆ. ಇದರಿಂದ ವನ್ಯಜೀವಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಕ್ವಾರಿಯಿಂದ ಉಂಟಾಗುವ ಮಾಲಿನ್ಯದಿಂದ ಸ್ಥಳೀಯರಿಗೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.  ಈ ಘಟಕವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ.

ಬನ್ನೇರುಘಟ್ಟ ವನ್ಯಜೀವಿ ವಲಯ ಹಾಗೂ ಹಾರೊಹಳ್ಳಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಡೆ ಕಲ್ಲುಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಇದರಲ್ಲಿ ಎರಡು ಗಣಿಗಳಿಗೆ 20 ವರ್ಷಗಳ ಅವಧಿಗೆ 2006–07ನೇ ಸಾಲಿನಲ್ಲೇ ಅನುಮತಿ ನೀಡಲಾಗಿದೆ. ರಾಗಿಹಳ್ಳಿಯ ಘಟಕಕ್ಕೆ 2013ರಲ್ಲಿ ಅನುಮತಿ ಕೊಡಲಾಗಿದೆ.
**
ಅನುಮತಿ ಪಡೆಯದೆ ರಸ್ತೆ ವಿಸ್ತರಣೆ?
ಹಾರೊಹಳ್ಳಿ– ಆನೇಕಲ್‌ ಸಂಪರ್ಕ ರಸ್ತೆಯು ಆನೆ ಕಾರಿಡಾರ್‌ ಅನ್ನು ವಿಭಜಿಸುತ್ತದೆ. ಇದನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವ ಸಿದ್ಧವಾಗಿದೆ. ಈ ಕಾಮಗಾರಿಗೆ ರಾಷ್ಟ್ರಿಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ವಿಚಾರವನ್ನು ಮಂಡಳಿಯ ಗಮನಕ್ಕೆ ತಂದಿಲ್ಲ ಎಂದು ವಿಜಯ್‌ ನಿಶಾಂತ್‌ ಆರೋಪಿಸಿದ್ದಾರೆ.

ಈ ರಸ್ತೆಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಿದರೆ ವನ್ಯಜೀವಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕಲಿವೆ. ಈ ಪ್ರದೇಶದಲ್ಲಿ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
**
ಗಣಿಗಾರಿಕೆ ನಿಲ್ಲಿಸುವಂತೆ ಕೋರಿದ್ದೇವೆ
‘ರಾಷ್ಟ್ರೀಯ ಉದ್ಯಾನದಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಈ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಂದುವರಿಸಲು ಅವಕಾಶ ನೀಡದಂತೆ ಇಲಾಖೆಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಈಗಾಗಲೇ ಅನೇಕ ಬಾರಿ ಪತ್ರ ಬರೆದಿದ್ದೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವಿದ್‌ ಮುಮ್ತಾಜ್‌ ತಿಳಿಸಿದರು.

‘ಅಕ್ಷಾಂಶ–ರೇಖಾಂಶದ ಆಧಾರವಾಗಿಟ್ಟುಕೊಂಡು ಪರಿಶೀಲನೆ ನಡೆಸಿದಾಗ ರಾಗಿಹಳ್ಳಿ ಗಣಿಗಾರಿಕೆ ಪ್ರದೇಶವು ರಾಷ್ಟ್ರೀಯ ಉದ್ಯಾನದ ಸುರಕ್ಷತಾ ವಲಯದ ವ್ಯಾಪ್ತಿಯಲ್ಲಿ ಬರುವ ವಿಚಾರ ನನಗೆ ತಿಳಿದಿಲ್ಲ. ಈ ವಿಚಾರವನ್ನು ಪರಿಶೀಲಿಸುತ್ತೇನೆ’ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಯಾವುದೇ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬನ್ನೇರುಘಟ್ಟ ಉದ್ಯಾನದಿಂದ ರಾಗಿಹಳ್ಳಿಗೆ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ರಸ್ತೆ ಹಾದುಹೋಗುತ್ತದೆ. ಇದರಲ್ಲಿ ರಾತ್ರಿ 10ಯಿಂದ ಬೆಳಿಗ್ಗೆ 5 ಗಂಟೆವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇಲ್ಲಿ ಎರಡು ವರ್ಷದಿಂದ ಈಚೆಗೆ ಯಾವುದೇ ವನ್ಯಜೀವಿ ಮೃತಪಟ್ಟಿಲ್ಲ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಸುರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.