ADVERTISEMENT

ರಾಷ್ಟ್ರೋತ್ಥಾನ ಮುದ್ರಣಾಲಯದ ವಿರುದ್ಧ ಎಫ್‌ಐಆರ್‌ ದಾಖಲು

ಹಿಂಸೆಗೆ ಪ್ರಚೋದನೆ ನೀಡುವ ಕರಪತ್ರ ಮುದ್ರಣ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:20 IST
Last Updated 23 ಏಪ್ರಿಲ್ 2018, 19:20 IST

ಬೆಂಗಳೂರು: ಹಿಂಸೆಗೆ ಪ್ರಚೋದನೆ ನೀಡುವ ಕರಪತ್ರ ಮುದ್ರಣ ಮಾಡಿರುವ ಆರೋಪದಡಿ ರಾಷ್ಟ್ರೋತ್ಥಾನ ಮುದ್ರಣಾಲಯದ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವಸಂತನಗರದ ಬಿ.ಆರ್‌.ನಾಯ್ಡು ಎಂಬುವರು ನೀಡಿದ ದೂರಿನ ಅನ್ವಯ ಸಾಮರಸ್ಯ ಹಾಳು ಮಾಡಿದ (ಐಪಿಸಿ 153 ಎ) ಆರೋಪ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ರಾಷ್ಟ್ರ ಗೆಲ್ಲಿಸಿ ಅಭಿಯಾನ – 91 ಶಂಕರಪುರ’ ಶೀರ್ಷಿಕೆ ಅಡಿ ರಾಷ್ಟ್ರೋತ್ಥಾನ ಮುದ್ರಣಾಲಯವು ಕರಪತ್ರ ಮುದ್ರಿಸಿದೆ. ಧಾರ್ಮಿಕ ದ್ವೇಷಕ್ಕೆ ಕುಮ್ಮಕ್ಕು ನೀಡುವ, ಹಿಂಸೆಗೆ ಪ್ರಚೋದಿಸುವ ಹಾಗೂ ಚುನಾವಣೆ ಸಮಯದಲ್ಲಿ ಗಲಾಟೆ ಮಾಡಿಸುವ ಉದ್ದೇಶವನ್ನಿಟ್ಟುಕೊಂಡು ಈ ಕರಪತ್ರ ಪ್ರಕಟಿಸಲಾಗಿದೆ’ ಎಂದು ನಾಯ್ಡು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ವಿಧಾನಸಭಾ ಚುನಾವಣೆಯಲ್ಲಿ ಹಿಂದೂಪರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರಪತ್ರದಲ್ಲಿ ಬರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ. ಟಿಪ್ಪು ಸುಲ್ತಾನ್‌ರನ್ನು ಕೊಲೆಗಡುಕರೆಂದು ಬರೆಯಲಾಗಿದೆ. ಎರಡು ಧರ್ಮಗಳ ಜನರ ನಡುವೆ ದ್ವೇಷ ಬೆಳೆಸುವುದು ಈ ಕರಪತ್ರದ ಉದ್ದೇಶ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಂಥ ಕರಪತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಹೈಗ್ರೌಂಡ್ಸ್‌ ಪೊಲೀಸರು, ‘ಶಂಕರಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಈ ಕರಪತ್ರಗಳನ್ನು ಹಂಚಲಾಗಿದೆ. ರಾಷ್ಟ್ರೋತ್ಥಾನ ಮುದ್ರಣಾಲಯದ ಕಚೇರಿಯೂ ಅಲ್ಲಿಯೇ ಇದೆ. ಹೀಗಾಗಿ, ಪ್ರಕರಣವನ್ನು ಶಂಕರಪುರ ಠಾಣೆಗೆ ವರ್ಗಾಯಿಸಲು ಚಿಂತನೆ ನಡೆಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.