ADVERTISEMENT

ರಿಲಯನ್ಸ್‌ ಕಂಪನಿ ಹೆಸರಲ್ಲಿ ವಂಚನೆ

ಪಿಂಚಣಿ, ತೆರಿಗೆ ವಿನಾಯಿತಿ ಸೌಲಭ್ಯದ ಆಮಿಷ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 19:20 IST
Last Updated 22 ಏಪ್ರಿಲ್ 2018, 19:20 IST

ಬೆಂಗಳೂರು: ರಿಲಯನ್ಸ್‌ ನಿಪ್ಪನ್‌ ಜೀವವಿಮಾ ಕಂಪನಿಯ ಫಂಡ್‌ ಮ್ಯಾನೇಜರ್‌ ಸೋಗಿನಲ್ಲಿ ಗಣೇಶ್‌ ಕುಮಾರ್‌ ಎಂಬುವರು ₹5 ಲಕ್ಷ ಪಡೆದು, ನಕಲಿ ವಿಮಾ ಬಾಂಡ್‌ ನೀಡಿ, ವಂಚಿಸಿರುವ ಬಗ್ಗೆ ಮುರುಳೀಧರ್‌ ಎಂಬುವರು ಕೋಣನಕುಂಟೆ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಮಾರ್ಚ್‌1 ರಂದು ಗಣೇಶ್‌ ಕುಮಾರ್‌ ಎಂಬಾತ ಮುರಳೀಧರ್‌ ಅವರಿಗೆ ಕರೆ ಮಾಡಿ, ತಾನು  ರಿಲಯನ್ಸ್‌ ನಿಪ್ಪನ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಫಂಡ್‌ ಮ್ಯಾನೇಜರ್‌ ಎಂದು ಪರಿಚಯ ಮಾಡಿಕೊಂಡಿದ್ದಾರೆ.

ರಿಲಯನ್ಸ್‌ ನಿಪ್ಪನ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯಲ್ಲಿ ಹಣ ತೊಡಗಿಸಿ,  ಬಿಸಿನೆಸ್‌ನಲ್ಲಿ ಪಾಲುದಾರರಾದರೆ, ಕಂಪನಿಯು ಮೆಡಿಕಲ್‌ ಲೈಫ್‌ ಕವರೇಜ್‌, ಪಿಂಚಣಿ ಮತ್ತು ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ ಎಂದು ಗಣೇಶ್‌ ತಿಳಿಸಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ಗಣೇಶನ ಮಾತು ನಂಬಿ, ₹5 ಲಕ್ಷದ ಚೆಕ್‌ ನೀಡಿದೆ. ಜೆ.ಪಿ ನಗರದ, ಆರ್‌ಬಿಐ ಬಡಾವಣೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ ಶಾಖೆಯ ಚೆಕ್‌ ಅನ್ನು ರಾಜೇಶ್‌ ಮತ್ತು ಚಂದ್ರಶೇಖರ್‌ ಎಂಬುವರ ಮೂಲಕ ಮುರಳಿ, ಡ್ರಾ ಮಾಡಿಕೊಂಡು, ರಿಲಯನ್ಸ್‌ ಕಂಪನಿ ಹೆಸರಲ್ಲಿ ವಿಮೆಯ ಬಾಂಡ್‌ ನೀಡಿದ್ದಾರೆ. ಈ ಬಗ್ಗೆ ಅನುಮಾನಗೊಂಡು ಕಂಪನಿಗೆ ಹೋಗಿ ವಿಚಾರಿಸಿದಾಗ, ಅಂತಹ ಯಾವುದೇ ಸೌಲಭ್ಯಗಳನ್ನು ನೀಡಲಾಗುವುದಿಲ್ಲ, ನಿಮಗೆ ನೀಡಿರುವ ಬಾಂಡ್‌ ನಕಲಿ ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಗಣೇಶ್‌ ಅವರಿಗೆ ಕರೆ ಮಾಡಿದರೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುರಳಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.