ADVERTISEMENT

ರೂ 350 ಕೋಟಿ ಆಸ್ತಿ ವಶ

ನಗರ ಜಿಲ್ಲಾಡಳಿತದಿಂದ 77 ಎಕರೆ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:48 IST
Last Updated 25 ಅಕ್ಟೋಬರ್ 2014, 19:48 IST
ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕೊಮ್ಮಸಂದ್ರ ಗ್ರಾಮದಲ್ಲಿ ಒತ್ತುವರಿ ತೆರವು ಮಾಡಲಾಯಿತು
ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕೊಮ್ಮಸಂದ್ರ ಗ್ರಾಮದಲ್ಲಿ ಒತ್ತುವರಿ ತೆರವು ಮಾಡಲಾಯಿತು   

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ­ಡಳಿತ ವಿವಿಧ ಕಡೆಗಳಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯಾ­ಚರಣೆ ನಡೆಸಿ 77.31 ಎಕರೆ ಒತ್ತುವರಿ ತೆರವು ಮಾಡಿದೆ. ವಶಪಡಿಸಿಕೊಂಡಿ­ರುವ ಭೂಮಿಯ ಮಾರುಕಟ್ಟೆ ಮೌಲ್ಯ ರೂ350 ಕೋಟಿ.

ಉತ್ತರ (ಹೆಚ್ಚುವರಿ) ತಾಲ್ಲೂಕಿನಲ್ಲೇ ಅಧಿಕ: ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಯಲಹಂಕ ಹೋಬಳಿಯ ಬೆಳ್ಳಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 13ರ ಜಾಗ ಸರ್ಕಾರಿ ಬಂಡೆ. ಈ ಜಾಗದ ವಿಸ್ತೀರ್ಣ 32 ಎಕರೆ. ಇಲ್ಲಿ ಮುತ್ತುರಾಜ್ ಮತ್ತಿತ­ರರು ಕಳೆದ 20 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಇತ್ತೀಚೆಗೆ ಈ ಗಣಿಗಳ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಪಡಿಸಿತ್ತು. ಸ್ಥಳೀಯ ನಿವಾಸಿಗಳು ಸಹ ಈ ಗಣಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿ 16 ಕಲ್ಲು ಗಣಿಗಳಿವೆ.

ಪರವಾನಗಿ ರದ್ದುಪಡಿಸಿದ ಬಳಿಕವೂ ಗಣಿಗಾರಿಕೆ ಅವ್ಯವಾಹತವಾಗಿ ಸಾಗಿತ್ತು. ಅಲ್ಲದೆ ಇಲ್ಲಿ 16 ಗುಡಿಸಲು ಸೇರಿದಂತೆ ಸುಮಾರು 50 ಮನೆಗಳನ್ನು ನಿರ್ಮಿಸ­ಲಾ­ಗಿತ್ತು. ಜಿಲ್ಲಾಡಳಿತ ನೋಟಿಸ್‌ ನೀಡಿದ್ದರೂ ಗಣಿಗಾರಿಕೆ ನಿಂತಿರಲಿಲ್ಲ. ಈ ಕಾರಣದಿಂದ ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ಶನಿವಾರ ಕಾರ್ಯಾ­ಚರಣೆ ನಡೆಸಿ ಈ ಗುಡಿಸಲುಗಳನ್ನು ನೆಲಸಮ ಮಾಡಲಾಯಿತು. ಇಲ್ಲಿದ್ದ ದೇವಸ್ಥಾನವನ್ನು ಹಾಗೆಯೇ ಬಿಡಲಾ­ಗಿದೆ. ವಶಪಡಿಸಿಕೊಂಡ ಜಾಗದ ಮೌಲ್ಯ ರೂ100 ಕೋಟಿ.

‘ಜಮೀನನ್ನು ಕಸ ವಿಲೇವಾರಿಗಾಗಿ ಬಿಬಿಎಂಪಿಯ ಯಲಹಂಕ ವಲಯದ ಅಧಿಕಾರಿಗಳು ಕೋರಿದ್ದು, ರಾಜ್ಯ ಸರ್ಕಾರದ ಅನುಮತಿ ಪಡೆದು ಜಮೀನನ್ನು ಹಸ್ತಾಂತರ ಮಾಡಲಾಗು­ವುದು’ ಎಂದು ತಹಶೀಲ್ದಾರ್‌ ಬಾಳಪ್ಪ ಹಂದಿಹುಂದ್‌ ತಿಳಿಸಿದರು.

ಹೆಸರಘಟ್ಟ ಹೋಬಳಿಯ ಕೊಂಡ­ಶೆಟ್ಟಿ­ಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 29ರಲ್ಲಿ 10 ಎಕರೆ ಮೂರು ಗುಂಟೆ ಜಮೀನಿನ ಒತ್ತುವರಿಯನ್ನು ತೆರವುಗೊ­ಳಿ­ಸಲಾಗಿದೆ. ಇದು ಸರ್ಕಾರಿ ಗೋಮಾಳ ಜಮೀನು. ಈ ಹಿಂದೆ ಈ ಜಾಗವನ್ನು ಉಮ್ರಾ ಡೆವಲಪರ್ಸ್‌ ಸಂಸ್ಥೆಗೆ ಹರಾಜು ಮೂಲಕ ನೀಡಲಾ­ಗಿತ್ತು. ಈಗ ಇಲ್ಲಿನ ಕೃಷಿ ಒತ್ತುವರಿ­ಯನ್ನು ತೆರವು ಮಾಡಿ ಬಿಡ್‌ದಾರರಿಗೆ ಹಸ್ತಾಂತರಿಸಲಾಗಿದೆ.

ಇದೇ ಹೋಬಳಿಯ ಮಧುಗಿರಿಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 14ರಲ್ಲಿ 3 ಎಕರೆ 17 ಗುಂಟೆ ಖರಾಬು ಜಮೀನು ಕೆರೆ ಮುಳುಗಡೆ ಪ್ರದೇಶ. ಇದನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅದ್ದೆ ವಿಶ್ವನಾಥಪುರ ಗ್ರಾಮದ ಸರ್ವೆ ಸಂಖ್ಯೆ 226ರಲ್ಲಿ 2 ಎಕರೆ 13 ಗುಂಟೆ ಜಮೀನು ಸರ್ಕಾರಿ ಗುಂಡುತೋಪು ಆಗಿದ್ದು, ಇದರ ಒತ್ತುವರಿಯನ್ನೂ ತೆರವು­ಗೊಳಿಸಲಾಗಿದೆ

ಮಾದಪ್ಪನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 61ರಲ್ಲಿ 4 ಎಕರೆ 23 ಗುಂಟೆ ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಮಾವಳ್ಳಿಪುರ ಗ್ರಾಮದ ಸರ್ವೆ ಸಂಖ್ಯೆ 39ರ 19 ಗುಂಟೆ ಸರ್ಕಾರಿ ಗುಂಡುತೋಪು ಜಾಗದ ಒತ್ತುವರಿ ತೆರವು ಮಾಡಲಾಗಿದೆ. ಈ ಮೂಲಕ ಉತ್ತರ (ಹೆಚ್ಚುವರಿ) ತಾಲ್ಲೂಕಿನಲ್ಲಿ 52 ಎಕರೆ 35 ಗುಂಟೆ ಜಾಗದ ಒತ್ತುವರಿ ತೆರವುಗೊಳಿಸ­ಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ರೂ120 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಎಕರೆ ವಶ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ ಸರ್ವೆ ನಂ. 28 ರಲ್ಲಿ 10 ಎಕರೆ ಗೋಮಾಳ ಜಾಗವನ್ನು ಕೋಣನಕುಂಟೆ ಎಜುಕೇಷನ್ ಟ್ರಸ್ಟ್‌ನ­ವ­ರಿಗೆ ಈ ಹಿಂದೆ ಲೀಸ್‌ಗೆ ನೀಡ­ಲಾಗಿತ್ತು. ಕಳೆದ ವರ್ಷ ಲೀಸ್‌ ರದ್ದು ಮಾಡಲಾಗಿತ್ತು. ಈ ಜಾಗದಲ್ಲಿ ಶೆಡ್‌ ನಿರ್ಮಿಸಲಾಗಿತ್ತು. ಇದನ್ನು ಈಗ ತೆರವು ಮಾಡಲಾಗಿದೆ.  ಬೇಗೂರು ಹೋಬ­ಳಿಯ ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 38 ರಲ್ಲಿ ಕೆರೆಯ 1- ಎಕರೆ 25 ಗಂಟೆ ಜಾಗವನ್ನು ನಾಲ್ಕು ಮಂದಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಜಾಗಗಳ ಒತ್ತುವರಿ ತೆರವು ಮಾಡಿ ರೂ38 ಕೋಟಿ ಮೌಲ್ಯದ ಜಾಗವನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ.

ಅದೇ ರೀತಿ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ  ಹೋಬಳಿ ವಡೇರಹಳ್ಳಿ ಗ್ರಾಮದ ಸರ್ವೆ ನಂ. 20 ರಲ್ಲಿ 1-ಎಕರೆ 17 ಗುಂಟೆ ವಿಸ್ತೀರ್ಣದ ಗೋಮಾಳದ ಒತ್ತುವರಿ ತೆರವುಗೊಳಿಸಿ ರೂ2 ಕೋಟಿ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಗುಂಜೂರು ಗ್ರಾಮದ ಸರ್ವೆ ಸಂಖ್ಯೆ 83ರಲ್ಲಿ 5 ಗುಂಟೆ ಜಮೀನನ್ನು ರಾಮಸ್ವಾಮಿ, ಕಾಡುಗೋಡಿ ಗ್ರಾಮದ ಸರ್ವೆ ಸಂಖ್ಯೆ 15ರಲ್ಲಿ 22 ಗುಂಟೆ ಜಮೀನನ್ನು ನಸೀರುದ್ದೀನ್ ನಿಸ್ಸಾರ್‌ ಅಹಮದ್‌, ಹಗದೂರು ಗ್ರಾಮದ ಸರ್ವೆ ಸಂಖ್ಯೆ 15ರಲ್ಲಿ 24 ಗುಂಟೆ ಜಾಗವನ್ನು ಮುನಿಯಲ್ಲಪ್ಪ ಎಂಬವರು ಒತ್ತುವರಿ ಮಾಡಿಕೊಂಡಿದ್ದರು.

ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 33ರಲ್ಲಿ 10 ಗುಂಟೆ ಜಮೀನು ಒತ್ತುವರಿ ಮಾಡಿ­ಕೊಂಡು ಕೃಷಿ ಮಾಡಲಾಗುತ್ತಿತ್ತು. ಈ ಒತ್ತುವರಿಗಳನ್ನು ತಹಶೀಲ್ದಾರ್‌ ಡಾ.ಬಿ.ಆರ್‌.­ಹರೀಶ್‌ ನಾಯ್ಕ್‌ ನೇತೃತ್ವ­ದಲ್ಲಿ ತೆರವು ಮಾಡಿ ರೂ10 ಕೋಟಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.

ತೆರವುಗೊಳಿಸಿದ ಜಾಗವೇ ಮತ್ತೆ ಒತ್ತುವರಿ!
ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕೊಮ್ಮಸಂದ್ರ ಗ್ರಾಮದ ಸರ್ವೆ ಸಂಖ್ಯೆ 111ರಲ್ಲಿ 1 ಎಕರೆ 5 ಗುಂಟೆ ಹಾಗೂ ಸರ್ವೆ ಸಂಖ್ಯೆ 112ರಲ್ಲಿ 9 ಎಕರೆ 35 ಗುಂಟೆ ಗುಂಡು­ತೋಪು ಜಮೀನಿನ ಒತ್ತುವರಿ ತೆರವು ಮಾಡಲಾಯಿತು. ಈ ಜಾಗದಲ್ಲಿ ಕೇರಳ ಮೂಲದ ರಾಜೇಂದ್ರ ಎಂಬವರು ಒತ್ತುವರಿ ಮಾಡಿ­ಕೊಂಡು 116 ಸೈಟ್‌ಗಳನ್ನು ನಿರ್ಮಿಸಿದ್ದರು. ಪಕ್ಕದ ಸರ್ವೆ ಸಂಖ್ಯೆಯ ಹೆಸರಿನಲ್ಲಿ ಈ ಸೈಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವು ಸೈಟ್‌ಗಳನ್ನು ಈಗಾಗಲೇ ಮಾರಾಟ ಆಗಿವೆ. ಪ್ರತಿ ಚದರ ಅಡಿಗೆ ರೂ1600ರಿಂದ ರೂ1800 ರವರೆಗೆ ದರ ನಿಗದಿ ಮಾಡಿದ್ದರು. ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್‌ ನೋಟಿಸ್‌ ನೀಡಿದ್ದರು. ಆದರೆ, ಒತ್ತುವರಿ ತೆರವು ಮಾಡಿರಲಿಲ್ಲ. ಈಗ ವಶಪಡಿಸಿಕೊಂಡಿರುವ ಜಾಗದ ಮಾರುಕಟ್ಟೆ ಮೌಲ್ಯ ರೂ25 ಕೋಟಿ.

‘ಕೆಲವು ವರ್ಷಗಳ ಹಿಂದೆಯೂ ಇಲ್ಲಿನ ಒತ್ತುವರಿ ತೆರವು ಮಾಡಲಾ­ಗಿತ್ತು. ಅಧಿ­ಕಾರಿಗಳು ಬದಲಾದ ಬಳಿಕ ರಾಜೇಂದ್ರ ಅವರು ಮತ್ತೆ ಒತ್ತುವರಿ ಮಾಡಿ­ಕೊಂಡು ತಡೆಗೋಡೆ ನಿರ್ಮಿಸಿ­ದ್ದರು. ಹೀಗಾಗಿ ಕೆಲವು ಸಮಯ ಒತ್ತುವರಿ ಬಹಿ­ರಂಗ ಆಗಿರಲಿಲ್ಲ. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್‌ ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

450 ಎಕರೆ ತೆರವು
ಕಳೆದ ನಾಲ್ಕು ತಿಂಗಳಲ್ಲಿ ನಗರ ಜಿಲ್ಲಾಡಳಿತ 450 ಎಕರೆ ಒತ್ತುವರಿ ತೆರವು ಮಾಡಿದೆ. ‘ಜುಲೈನಲ್ಲಿ 25 ಎಕರೆ, ಆಗಸ್ಟ್‌ನಲ್ಲಿ 34 ಎಕರೆ, ಸೆಪ್ಟೆಂಬರ್‌ನಲ್ಲಿ 109 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಅಕ್ಟೋಬರ್‌ ತಿಂಗಳಿನಲ್ಲೇ 260 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಮುಂದಿನ ವಾರ ಒತ್ತುವರಿ ತೆರವು ಕಾರ್ಯಾಚರಣೆ ವ್ಯಾಪಕ ಪ್ರಮಾಣ­ದಲ್ಲಿ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.