ADVERTISEMENT

ರೈತರಿಗೆ ಇನ್ನೂ ದೊರೆಯದ ಪರಿಹಾರ

ಮಾರುಕಟ್ಟೆಗಾಗಿ 27 ವರ್ಷಗಳ ಹಿಂದೆಯೇ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 20:09 IST
Last Updated 18 ಡಿಸೆಂಬರ್ 2014, 20:09 IST

ಯಲಹಂಕ: ಹಣ್ಣು ಮತ್ತು ತರಕಾರಿ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ನಿರ್ಮಾಣಕ್ಕಾಗಿ ಬ್ಯಾಟರಾಯನಪುರ ಗ್ರಾಮದಲ್ಲಿ ಸರ್ಕಾರ ವಶಪಡಿಸಿಕೊಂಡಿರುವ ಜಮೀನಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬ್ಯಾಟರಾಯನಪುರದಲ್ಲಿ ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಲು 1986–87ರಲ್ಲಿ  33.33 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು, ಆ ಸಮಯ­ದಲ್ಲಿ ಚಾಲ್ತಿಯಲ್ಲಿದ್ದ ಪರಿಹಾರ ಧನ ನೀಡಲಾ­ಗಿತ್ತು. ಕೆಲವು ರೈತರನ್ನು ಹೊರತುಪಡಿಸಿದರೆ ಉಳಿದವರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ 2007–08ರಲ್ಲಿ ಮಾರುಕಟ್ಟೆಯನ್ನು ಖಾಸಗಿ–ಸಾರ್ವಜನಿಕ ಪಾಲುದಾರಿಕೆ ಆಧಾರದ ಮೇಲೆ ನಿರ್ಮಿಸುವ ಯೋಜನೆಯನ್ನು ಶೋಭಾ ಡೆವಲಪರ್‌್ಸ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗಿತ್ತು. ಗುತ್ತಿಗೆದಾರರು 20 ಎಕರೆ ಪ್ರದೇಶದಲ್ಲಿ ₨ 106 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿ, ಸಮಿತಿಗೆ ನೀಡಬೇಕು  ಹಾಗೂ ಉಳಿದ 10 ಎಕರೆ ಪ್ರದೇಶವನ್ನು ಗುತ್ತಿಗೆದಾರರು 60 ವರ್ಷಗಳವರೆಗೆ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬೇಕು ಎಂಬ ಒಪ್ಪಂದಕ್ಕೆ ಬರಲಾಗಿತ್ತು.

ಸರ್ಕಾರದ ಈ ನಿರ್ಣಯವನ್ನು ವಿರೋಧಿಸಿ, 2012ರ ಅಕ್ಟೋಬರ್‌ ತಿಂಗಳಲ್ಲಿ ಕೃಷ್ಣ ಬೈರೇ­ಗೌಡರ ನೇತೃತ್ವದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಅಂದಿನ ಎಪಿಎಂಸಿ ಸಚಿವರೊಂದಿಗೆ ನಡೆದ ರೈತರ ಸಭೆಯಲ್ಲಿ ಹೆಚ್ಚಿನ ಪರಿಹಾರಕ್ಕಾಗಿ ಆಗ್ರಹಿಸಲಾಗಿತ್ತು.

ಆದರೆ ಇದುವರೆಗೂ ಎಪಿಎಂಸಿ ಮಾರುಕಟ್ಟೆ­ಯನ್ನೂ ನಿರ್ಮಿಸದೆ, ಯಾವುದೇ ಪರಿಹಾರವನ್ನೂ ನೀಡದೆ ಸರ್ಕಾರ ಕಾಲ ದೂಡುತ್ತಿದೆ. ಇದರಿಂದ ಜಮೀನು ಕಳೆದುಕೊಂಡಿರುವ ರೈತರು ನಿರ್ಗತಿಕರಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಕಾಳಜಿ ವಹಿಸಿ, ಸರ್ಕಾರದ ಪ್ರಸ್ತುತ ಮಾರ್ಗಸೂಚಿ ಬೆಲೆಗೆ ಸಮನಾದ ಪರಿಹಾರವನ್ನು ನೀಡಬೇಕು ಎಂದು ಅಮೃತಹಳ್ಳಿ ನಿವಾಸಿ ರವಿ ಒತ್ತಾಯಿಸಿದ್ದಾರೆ.

ಎಪಿಎಂಸಿಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದಲ್ಲಿ ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಈಗಿನ ಮಾರುಕಟ್ಟೆ ದರದಂತೆ ಪರಿಹಾರ ನೀಡಲು ಆದೇಶಿಸಲಾಗಿದೆ. ಅದೇ ರೀತಿ ಬ್ಯಾಟರಾಯನಪುರ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೂ ಪರಿಹಾರ ನೀಡಬೇಕು. ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರವು ಹೆಚ್ಚಿನ ಪರಿಹಾರ ನೀಡಿದ ಮಾನದಂಡವನ್ನು ಅನುಸರಿಸಿ  ಪರಿಹಾರ ನೀಡಬೇಕು ಎಂದು ರೈತ ಮುಖಂಡ ಬಿ.ಎನ್‌.ಬೈರೇಗೌಡ ಆಗ್ರಹಿಸಿದ್ದಾರೆ.

ಎಪಿಎಂಸಿಯು ಬ್ಯಾಂಕಿನಿಂದ ಸಾಲ ಪಡೆದು ರೈತರಿಗೆ ಪರಿಹಾರ ನೀಡಿದಲ್ಲಿ, ಮಳಿಗೆಗಳಿಂದ ಬರುವ ವಾರ್ಷಿಕ ₨ 214 ಕೋಟಿ ವರಮಾನದ ಮೂಲಕ ಮೂರು ವರ್ಷದಲ್ಲಿ ಸಾಲವನ್ನು ತೀರಿಸಬಹುದಾಗಿದೆ. ಬಳಿಕ ಸಿಗುವ ಆದಾಯ ಎಪಿಎಂಸಿಗೆ ಸೇರಲಿದೆ ಎಂದು ಬ್ಯಾಟರಾಯನಪುರ ನಗರಸಭೆ ಮಾಜಿ ಅಧ್ಯಕ್ಷ ಎಸ್‌.ಶ್ರೀನಿವಾಸರಾಜು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.