ADVERTISEMENT

ರೈತರ ಕಣ್ಸೆಳೆದ ಬರ ನಿರೋಧಕ ಭತ್ತ

ಸೋನಾ ಮಸೂರಿಗೆ ಸೆಡ್ಡುಹೊಡೆಯುವ ಮಾಸ್‌ –99 ತಳಿ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:56 IST
Last Updated 17 ನವೆಂಬರ್ 2017, 20:56 IST
ರೈತರ ಕಣ್ಸೆಳೆದ ಬರ ನಿರೋಧಕ ಭತ್ತ
ರೈತರ ಕಣ್ಸೆಳೆದ ಬರ ನಿರೋಧಕ ಭತ್ತ   

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಅನುವಂಶೀಯ ಮತ್ತು ತಳಿಶಾಸ್ತ್ರ ವಿಭಾಗದ ಸಂಶೋಧಕರು ಸಂಶೋಧಿಸಿರುವ ಬರ ನಿರೋಧಕ ಮತ್ತು ಅಪೌಷ್ಟಿಕತೆ ನೀಗಿಸುವ ಭತ್ತದ ತಳಿ ಈ ಬಾರಿಯ ಕೃಷಿ ಮೇಳದಲ್ಲಿ ರೈತರನ್ನು ಆಕರ್ಷಿಸುತ್ತಿದೆ.

ನಗರದ ಜಿಕೆವಿಕೆ ಸಂಶೋಧನಾ ಕೇಂದ್ರದ ತಾಕುಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಎಂಎಎಸ್‌–99 (ಏರೋಬಿಕ್‌ ಭತ್ತ) ತಳಿಯ ಭತ್ತದ ಬೆಳೆಯನ್ನು ಶುಕ್ರವಾರ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರು ಕತೂಹಲದಿಂದ ವೀಕ್ಷಿಸುತ್ತಿದ್ದರು.

ಸೋನಾ ಮಸೂರಿ ಮತ್ತು ಹೈಪ್ರೋಟಿನ್‌ –14 ತಳಿಗಳಿಂದ ಸಂಕರಣ ಮಾಡಿರುವ ಎಂಎಎಸ್‌–99 ತಳಿಯ ಭತ್ತಕ್ಕೆ ಬೆಂಕಿ ರೋಗ ಬಾಧಿಸದು. ವಿ.ವಿ ಪ್ರಾಧ್ಯಾಪಕಿ ಡಾ.ಶೈಲಜಾ ಹಿತ್ತಲಮನಿ. ಹಿರಿಯ ಸಂಶೋಧಕ ಆರ್‌.ವೆಂಕಟೇಶ್‌ ಗಾಂಧಿ, ಸಹಾಯಕ ಸಂಶೋಧಕರಾದ ಹನುಮರೆಡ್ಡಿ, ಅರುಣಾ ಅವರ ತಂಡ ಈ ತಳಿ ಸಂಶೋಧನೆ ಮಾಡಿದೆ.

ADVERTISEMENT

‘2004ರಲ್ಲಿ ಮೊದಲ ಬಾರಿಗೆ ಈ ತಳಿಯ ಪ್ರಯೋಗ ಬೆಂಗಳೂರಿನ ಜಿಕೆವಿಕೆ ಮುಖ್ಯ ಸಂಶೋಧನಾ ಕೇಂದ್ರದಲ್ಲಿ ನಡೆದಿತ್ತು. ನಿರಂತರ ಪ್ರಯೋಗಕ್ಕೆ ಒಳಪಡಿಸಿ, ಮೂರು ವರ್ಷಗಳಿಂದ ತುಮಕೂರು, ಪಾವಗಡ, ದೊಡ್ಡಬಳ್ಳಾಪುರ, ಕೋಲಾರ ಭಾಗದ ರೈತರ ತಾಕುಗಳಲ್ಲಿ ಬೆಳೆಯಲಾಗುತ್ತಿದೆ. ಉತ್ತಮ ಫಲಿತಾಂಶವೂ ಬಂದಿದೆ. ಮುಂದಿನ ವರ್ಷದ ಹಂಗಾಮು ಅಥವಾ 2019ಕ್ಕೆ ಎಂಎಎಸ್‌–99 ತಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು’ ಎಂದು ಸಹಾಯಕ ಸಂಶೋಧಕ ಹನುಮನರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅರೆನೀರಾವರಿ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆಯಬಹುದಾದ ಈ ಹೊಸ ತಳಿಗೆ ಭಾರಿ ಬೇಡಿಕೆಯೂ ವ್ಯಕ್ತವಾಗುತ್ತಿದೆ. ಬಿತ್ತನೆ ಬೀಜದ ಭತ್ತವನ್ನು ಪ್ರತಿ ಕೆ.ಜಿ.ಗೆ ₹30ರಂತೆ ರೈತರಿಗೆ ಒದಗಿಸಲಾಗಿದೆ. ಹೆಚ್ಚು ಪೋಷಕಾಂಶ ಹೊಂದಿರುವ ಈ ಭತ್ತಕ್ಕೆ ಮಾರುಕಟ್ಟೆಯಲ್ಲಿ ಸೋನಾಮಸೂರಿ ಭತ್ತಕ್ಕಿರುವಷ್ಟೇ ಬೆಲೆಯೂ ಇದೆ. ಅರೆನೀರಾವರಿ ಪ್ರದೇಶಗಳಲ್ಲಿ ಎಕರೆಗೆ 20ರಿಂದ 22 ಕ್ವಿಂಟಲ್‌ ಇಳುವರಿ ಬರಲಿದೆ. ರಾಯಚೂರು, ಸಿಂಧನೂರು, ಸಿರಗುಪ್ಪ ಭಾಗದ ನೀರಾವರಿ ಪ್ರದೇಶಗಳಲ್ಲಿ ಎಕರೆಗೆ 25ರಿಂದ 30 ಕ್ವಿಂಟಲ್‌ ಇಳುವರಿ ತೆಗೆಯಬಹುದು. ಮಲೆನಾಡಿನ ಭಾಗಕ್ಕೂ ಈ ತಳಿಯ ಭತ್ತ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಅವರು.

ಸೋನಾ ಮಸೂರಿ ಭತ್ತಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣಾಂಶ, ಸತು ಹಾಗೂ ಪ್ರೋಟಿನ್‌ ಈ ಹೊಸ ತಳಿಯ ಭತ್ತದಲ್ಲಿದೆ. ಮಳೆ ಆಶ್ರಯ ಅಥವಾ ತುಂತುರು ನೀರಾವರಿ ಸೌಲಭ್ಯದಲ್ಲೂ ಬೆಳೆಯುವ ಈ ಭತ್ತ ಅತ್ಯಂತ ಕಡಿಮೆ ನೀರು ಬಯಸುತ್ತದೆ. ಸಸಿ ಮಡಿ ಬೆಳೆಸಿ ನಾಟಿ ಮಾಡಬಹುದು. ಬಿತ್ತನೆ ವಿಧಾನವನ್ನೂ ಅನುಸರಿಸಬಹುದು. ಎರಡೂ ಅವಧಿಯೂ ಬೆಳೆ ತೆಗೆಯಬಹುದು. 110 ದಿನಗಳಿಗೆ ಫಸಲು ಕಟಾವಿಗೆ ಬರುತ್ತದೆ. 95 ಸೆ.ಮೀ ಎತ್ತರ ಬೆಳೆಯುವ ಈ ಭತ್ತದ ಹುಲ್ಲು ಜಾನುವಾರುಗಳಿಗೂ ರುಚಿಯಾದ ಮೇವು ಆಗಿದೆ ಎನ್ನುತ್ತಾರೆ ಸಂಶೋಧಕರು.

**

ಚಳಿಗಾಲದಲ್ಲಿ ಬೆಳೆಯಬಲ್ಲ ರಾಗಿ!

ಜಿಕೆವಿಕೆ ಕೃಷಿ ವಿಜ್ಞಾನಿಗಳು ಚಳಿಗಾಲದಲ್ಲೂ ಬೆಳೆಯಬಹುದಾದ ಎಂಎಲ್‌–322 ರಾಗಿ ತಳಿ ಅಭಿವೃದ್ಧಿಪಡಿಸುತ್ತಿದ್ದಾರೆ.

ಅನುವಂಶೀಯ ಮತ್ತು ತಳಿಶಾಸ್ತ್ರ ವಿಭಾಗದಿಂದ ಎಂಎಲ್‌–365 ರಾಗಿ ತಳಿ ಅಭಿವೃದ್ಧಿಪಡಿಸಿ, 2008ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಇದು ಇಡೀ ರಾಜ್ಯ ವ್ಯಾಪಿಸುತ್ತಿದೆ. ಎಕರೆಗೆ 15ರಿಂದ 20 ಕ್ವಿಂಟಲ್‌ ಇಳುವರಿ ಬರುತ್ತಿದೆ. ರೋಗ ಬಾಧೆಯೂ ಇಲ್ಲ. ಈ ತಳಿ ಯಶಸ್ಸು ಕಂಡಿರುವ ಬೆನ್ನಲ್ಲೇ ಹೊಸ ತಳಿ ಪ್ರಯೋಗಕ್ಕೆ ಕೈಹಾಕಲಾಗಿದೆ. ಚಳಿಗಾಲದಲ್ಲಿ ಬೆಳೆಯುವ ರಾಗಿಗೆ ರೈತರಿಂದಲೂ ಬೇಡಿಕೆ ಇದೆ ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯರು.

ತುಮಕೂರು, ದೊಡ್ಡಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಭಾಗದಲ್ಲಿ ರೈತರ ತಾಕುಗಳಲ್ಲಿ ಎಂಎಲ್‌–322 ತಳಿ ರಾಗಿ ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದೆ. 2019ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.