ADVERTISEMENT

ರೈತ ವಿರೋಧಿ ನೀತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:57 IST
Last Updated 29 ಮೇ 2016, 19:57 IST
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಿಸಾನ್‌ ಖೇತ್‌ ಮಜ್ದೂರ್‌ ಘಟಕದ ಕಾರ್ಯಕರ್ತರು ಆನಂದರಾವ್‌ ವೃತ್ತದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು  ಪ್ರಜಾವಾಣಿ ಚಿತ್ರ
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಿಸಾನ್‌ ಖೇತ್‌ ಮಜ್ದೂರ್‌ ಘಟಕದ ಕಾರ್ಯಕರ್ತರು ಆನಂದರಾವ್‌ ವೃತ್ತದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಿಸಾನ್‌ ಖೇತ್‌ ಮಜ್ದೂರ್‌ ಘಟಕದ ಕಾರ್ಯಕರ್ತರು ಮೌರ್ಯ ವೃತ್ತದ ಗಾಂಧಿ  ಪುತ್ಥಳಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

 ಈ ವೇಳೆ ಮಾತನಾಡಿದ ಘಟಕದ  ಅಧ್ಯಕ್ಷ ಸಚಿನ್‌ ಮೇಘಾ, ‘ಎರಡು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ಬೀಗುತ್ತಿದೆ. ಬಂಡವಾಳವಾಳಶಾಹಿ ಪರವಿರುವ ಸರ್ಕಾರವು ಸಾಮಾನ್ಯ ಜನ ಹಾಗೂ ರೈತರನ್ನು ಕಡೆಗಣಿಸಿದೆ’ ಎಂದು ದೂರಿದರು.

‘ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಶೇ 50ರಷ್ಟು ಸಾಲವನ್ನು ಮನ್ನಾ ಮಾಡಬೇಕು. ಸೈನಿಕರ ಮಾದರಿಯಲ್ಲಿ ರೈತರಿಗೆ ಪಿಂಚಣಿ ನೀಡಬೇಕು. ರಾಷ್ಟ್ರೀಯ ಬೆಳೆ ವಿಮೆ ಯೋಜನೆಯನ್ನು ವೈಯಕ್ತಿಕವಾಗಿ ರೈತರಿಗೆ ಅನುಷ್ಠಾನಗೊಳಿಸಬೇಕು. ಗೋರಾಕ್‌ ಸಿಂಗ್‌ ವರದಿ ಆಧರಿಸಿ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ಎಲ್ಲ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ರೈತರ ಪರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಆದರೆ ಕೇಂದ್ರ ಸರ್ಕಾರವು ಸೂಕ್ತ ಅನುದಾನ ನೀಡುತ್ತಿಲ್ಲ. ಅದೇ ಕಾರಣಕ್ಕೆ ರಾಜ್ಯದ ರೈತರಿಗೆ  ಕೇಂದ್ರ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಅವರು ಆರೋಪಿಸಿದರು. ಪ್ರತಿಭಟನೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಿಸಾನ್‌ ಖೇತ್‌ ಮಜ್ದೂರ್‌ ಘಟಕದ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.