ADVERTISEMENT

ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:31 IST
Last Updated 20 ಅಕ್ಟೋಬರ್ 2016, 19:31 IST

ಬೆಂಗಳೂರು:  ಮಹದೇವಪುರ ಸಮೀಪದ ಕಾವೇರಿನಗರದಲ್ಲಿ ಗುರುವಾರ ಬೆಳಿಗ್ಗೆ ಪ್ರೇಮಿಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಕೋಲಾರದ ಮಧು (20) ಹಾಗೂ ರೇಖಾ (18) ಮೃತರು. ಕೂಲಿ ಕೆಲಸ ಮಾಡುತ್ತಿದ್ದ ಮಧು, ಅಣ್ಣನ ಜತೆ ಕೆ.ಆರ್.ಪುರ ಸಮೀಪದ ಸೀಗೇಹಳ್ಳಿಯಲ್ಲಿ ನೆಲೆಸಿದ್ದರು. ರೇಖಾ ಅವರು ಪೋಷಕರ ಜತೆ ಕಾವೇರಿನಗರದಲ್ಲಿ ವಾಸವಾಗಿದ್ದರು.

ಬೆಳಿಗ್ಗೆ 6.30ರ ಸುಮಾರಿಗೆ ಮಧು ಕಾವೇರಿನಗರಕ್ಕೆ ಬಂದಿದ್ದಾರೆ. ಈ ವೇಳೆ ಹಾಲು ತರುವುದಾಗಿ ಮನೆಯಲ್ಲಿ ಹೇಳಿ ರೇಖಾ ಸಹ ಹೊರಗೆ ಬಂದಿದ್ದಾರೆ.

ADVERTISEMENT

ಬಳಿಕ ಇಬ್ಬರೂ ಹತ್ತಿರದ ರೈಲ್ವೆ ಪ್ರದೇಶಕ್ಕೆ ತೆರಳಿ, ರೈಲಿಗೆ ತಲೆ ಕೊಟ್ಟಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಶವಗಳನ್ನು ಕಂಡ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ.

ತಂದೆ ಬಳಿ ಕೆಲಸ:  ‘ರೇಖಾ ತಂದೆ ವೆಂಕಟರಮಣ ಅವರು ಸಿವಿಲ್ ಗುತ್ತಿಗೆದಾರರಾಗಿದ್ದಾರೆ. ಮಧು ಮೊದಲು ಅವರ ಬಳಿ ಕಾರು ಚಾಲಕರಾಗಿದ್ದರು. ಈ ಸಂದರ್ಭದಲ್ಲಿ ರೇಖಾ ಜತೆ ಪ್ರೇಮಾಂಕುರವಾಗಿತ್ತು. ಆರು ತಿಂಗಳ ಹಿಂದೆ ಅವರ ಬಳಿ ಕೆಲಸ ಬಿಟ್ಟ ಮಧು, ಕೂಲಿ ಮಾಡಲಾರಂಭಿಸಿದ್ದರು’ ಎಂದು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ. 

‘ಪ್ರೀತಿ ಮಾಡುತ್ತಿರುವ ವಿಷಯವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಮಧು–ರೇಖಾ, ಪೋಷಕರಿಗೆ ಆ ಸಂಗತಿ ತಿಳಿಸಿರಲಿಲ್ಲ. ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಯಾವುದೇ ಮರಣ ಪತ್ರ ಸಿಕ್ಕಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಾನೇ ಮದುವೆ ಮಾಡಿಸುತ್ತಿದ್ದೆ’
‘ಎಸ್ಸೆಸ್ಸೆಲ್ಸಿ ಓದಿದ್ದ ಮಗಳು, ನಂತರ ಶಿಕ್ಷಣ ಮುಂದುವರಿಸಲಿಲ್ಲ. ಮಧುನನ್ನು ಪ್ರೀತಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದರೆ, ಸಂತೋಷದಿಂದ ಮದುವೆ  ಮಾಡಿಸುತ್ತಿದ್ದೆ. ತಾನು ಜೀವ ಬಿಡುವುದರ ಜತೆಗೆ, ನಮಗೂ ಅನ್ಯಾಯ ಮಾಡಿದಳು’ ಎಂದು ವೆಂಕಟರಮಣ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.