ADVERTISEMENT

ರ್‍ಯಾಂಪ್ ನಿರ್ಮಾಣಕ್ಕೆ ಕೆರೆಕೋಡಿ ಬಂದ್‌

ಯಮಲೂರು ಕೆರೆಯಲ್ಲಿ ನೀರಿನ ಪ್ರಮಾಣ ಏರಿಕೆ; ಮಳೆ ಬಂದರೆ 15 ಅಡಿ ಎತ್ತರಕ್ಕೇರುವ ನೊರೆ ರಾಶಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
ಯಮಲೂರು ಕೆರೆ ಕೋಡಿಯಲ್ಲಿ ಮಂಗಳವಾರ ಕಂಡ ನೊರೆಯ ರಾಶಿ
ಯಮಲೂರು ಕೆರೆ ಕೋಡಿಯಲ್ಲಿ ಮಂಗಳವಾರ ಕಂಡ ನೊರೆಯ ರಾಶಿ   

ಬೆಂಗಳೂರು:  ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಕೆರೆ ಕೋಡಿಯಲ್ಲಿ ರ್‍ಯಾಂಪ್ ನಿರ್ಮಿಸಲು ಕೋಡಿಯನ್ನು ಮುಚ್ಚಲಾಗಿದೆ. ಇದರಿಂದಾಗಿ ಯಮಲೂರು ಕೆರೆ ಕೋಡಿಯಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ನೊರೆ ಸಮಸ್ಯೆಯೂ ಉಂಟಾಗಿದೆ.

ಕೋಡಿ ಮುಚ್ಚಿರುವ ಕಾರಣ ಬೆಳ್ಳಂದೂರು ಗ್ರಾಮದ ಜನತೆ ನೊರೆಯಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಆದರೆ, ಯಮಲೂರು ಕೆರೆ ಕೋಡಿಯ ಬಳಿಯ ಜನತೆ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಯಮಲೂರು ಕೆರೆ ಕೋಡಿಯ ಕೆಳಭಾಗದಲ್ಲಿ ರಾಜಕಾಲುವೆಗಳು ಒತ್ತುವರಿಗೊಂಡು ಕಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಬದಲಾಗಿ ಕೆರೆಯ ಕೊಳಚೆ ನೀರು ಕೋಡಿಯ ಕೆಳಭಾಗದಲ್ಲಿ ಮಡುಗಟ್ಟಿ ನಿಲ್ಲುತ್ತಿದೆ. ಆ ನೀರಿನ ಮೇಲೆ ನೊರೆಯ ರಾಶಿ ಸುಮಾರು ಅರ್ಧ ಕಿ.ಮೀ. ದೂರಕ್ಕೂ ಹಾಗೆ ಇದೆ.

ಮಳೆ ಬಂದಾಗ 15 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಕೋಡಿಯಲ್ಲಿ ನೊರೆ ಎದ್ದಿರುತ್ತದೆ. ದುರ್ನಾತವಂತೂ ಹೇಳತೀರದು ಎಂದು ಕೆರೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಟೇಶ ತಮ್ಮ ಅಳಲನ್ನು ತೋಡಿಕೊಂಡರು.

ಕೆಲ ತಿಂಗಳ ಹಿಂದೆಯೇ ಯಮಲೂರು ಕೋಡಿಯಲ್ಲಿ ನೊರೆಯ ಪ್ರಮಾಣವನ್ನು ಕಡಿಮೆ ಮಾಡಲು ರ್‍ಯಾಂಪ್‌ ನಿರ್ಮಿಸಲಾಗಿದೆ. ರ್‍ಯಾಂಪ್‌ ನಿರ್ಮಿಸಿರುವುದರಿಂದ ಕೆರೆಯ ನೀರು ರಭಸವಾಗಿ ಹರಿದು ಹೋಗುತ್ತಿದೆ ಹೊರತು ನೊರೆಯ ಪ್ರಮಾಣ ಕಿಂಚಿತ್ತು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗಿದೆ ಎಂದು ಅವರು ದೂರಿದರು.

₹3 ಕೋಟಿ ವೆಚ್ಚದಲ್ಲಿ ಬೆಳ್ಳಂದೂರು ಕೆರೆ ಕೋಡಿಯಲ್ಲಿ ರ್‍ಯಾಂಪ್‌ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಕಾಮಗಾರಿಯಿಂದ ಕೆರೆಯ ನೊರೆ ಮಾತ್ರ ಕಡಿಮೆಯಾಗುವುದಿಲ್ಲ. ಕಾರ್ಖಾನೆಗಳ ಕಶ್ಮಲ ನೀರು ಹಾಗೂ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರನ್ನು ಕೆರೆಗೆ ಹರಿದು  ಬರದಂತೆ ತಡೆಯಬೇಕು. ಆಗ ಕೆರೆಯಲ್ಲಿ ನೊರೆ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.

ಬೆಳ್ಳಂದೂರು ಕೆರೆ ಕೋಡಿಯ  ಸೇತುವೆಯಲ್ಲಿ ಸಂಚರಿಸುವವರ ಮೈಮೇಲೆ ನೊರೆ ಬೀಳುವುದನ್ನು ತಡೆಗಟ್ಟಲು ₹35 ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಸ್‌ ಅಳವಡಿಸಲಾಗಿದೆ. ಆದರೆ, ಅದು ಕೂಡ ಪ್ರಯೋಜನಕ್ಕೆ ಬಂದಿಲ್ಲ. ಬದಲಾಗಿ ಸಾರ್ವಜನಿಕರ ದುಡ್ಡು  ಪೋಲಾಗುತ್ತಿದೆ ಎಂದು ಬೆಳ್ಳಂದೂರು ಕೆರೆ ಕೋಡಿಯಲ್ಲಿನ ನಿವಾಸಿ ರಮೇಶ ದೂರಿದರು.

‘ಕೆರೆಯ ಉಳಿವಿಗಾಗಿ ಪ್ರತಿಭಟನೆ ಹೋರಾಟ ಮಾಡಿ ಸಾಕಾಗಿದೆ. ಪ್ರತಿಭಟನೆ ವೇಳೆ ಆಗಮಿಸುವ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೆರೆಯನ್ನು ಉಳಿಸುವ ಬಗ್ಗೆ ಆಶ್ವಾಸನೆ, ಭರವಸೆಗಳನ್ನು ನೀಡುತ್ತಲೇ ಇದ್ದಾರೆ ಹೊರತು ಕೆರೆ ಮಾತ್ರ ಶುಚಿಗೊಂಡಿಲ್ಲ, ಅಭಿವೃದ್ಧಿಯೂ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೆರೆಯಲ್ಲಿ ಬೆಳೆದ ಹುಲ್ಲು, ಗಿಡಗಳನ್ನು ತೆಗೆಯುವಂತೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದರು. ಕೆರೆಯಲ್ಲಿನ ಹೂಳು ತೆಗೆದು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುವುದು ಎಂದೂ ಭರವಸೆ ನೀಡಿದ್ದರು. ಆದರೆ,  ಇದುವರೆಗೂ ಯಾವುದೇ ಸ್ವಚ್ಛತೆ ಕಾರ್ಯ ಆರಂಭಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

ಸದ್ಯಕ್ಕೆ ಬೆಳ್ಳಂದೂರು ಕೆರೆ ಕೋಡಿಯಲ್ಲಿ ರ್‍ಯಾಂಪ್ ನಿರ್ಮಿಸುವ ಸಲುವಾಗಿ ಕೋಡಿಯ ಕೆಳಭಾಗದಲ್ಲಿ ಹೂಳು ಎತ್ತುವ ಕಾರ್ಯ ಆರಂಭಗೊಂಡಿದೆ. ಇದರಿಂದಾಗಿ ಗುಂಡಿ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಕೋಡಿಯ ನೀರು ಹರಿಯುವ ಸ್ಥಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕಾರ್ಯ ಆರಂಭಗೊಂಡಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ಮಂದಗತಿಯಿಂದ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.