ADVERTISEMENT

ಲಿಂಗಾಯತ ಮಠಗಳಿಗೆ ಅಮಿತ್ ಶಾ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:39 IST
Last Updated 21 ಮಾರ್ಚ್ 2018, 19:39 IST

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಬಳಸಿರುವ ಬೆನ್ನಲ್ಲೇ, ಲಿಂಗಾಯತ ಮತ ಬ್ಯಾಂಕ್‌ ಒಲಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ.

ಇದೇ 26 ಮತ್ತು 27ರಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಶಾ, ಐದಕ್ಕೂ ಹೆಚ್ಚು ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.

26ರಂದು ಶಿವಮೊಗ್ಗಕ್ಕೆ ಬರಲಿರುವ ಅವರು ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು, ಶಿವಮೊಗ್ಗ ನಗರದಲ್ಲಿ ರೋಡ್ ಶೋ ನಡೆಸುವರು. ಶಿವಮೊಗ್ಗದಲ್ಲಿರುವ ಬೆಕ್ಕಿನ ಕಲ್ಮಠಕ್ಕೆ ಭೇಟಿ ನೀಡುವರು.

ADVERTISEMENT

ಅದೇ ದಿನ ತುಮಕೂರಿಗೆ ತೆರಳುವ ಶಾ, ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲಿಂದ ತಿಪಟೂರಿನಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

27ರಂದು ದಾವಣಗೆರೆಯಲ್ಲಿ ಏರ್ಪಡಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಶಾ, ಸಿರಿಗೆರೆ ಬೃಹನ್ಮಠಕ್ಕೆ ಭೇಟಿ ನೀಡುವರು. ಅಲ್ಲಿಂದ ಚಿತ್ರದುರ್ಗಕ್ಕೆ ತೆರಳಿ ಮುರುಘಾಮಠ ಹಾಗೂ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ಕೊಡುವರು. ಬಳಿಕ, ಚಳ್ಳಕೆರೆಯಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

‘ಕವಿಶೈಲ’ಕ್ಕೆ ಶಾ ಭೇಟಿ

ತೀರ್ಥಹಳ್ಳಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಮುನ್ನ ಕವಿ ಕುವೆಂಪು ಅವರ ಮನೆ ಹಾಗೂ ‘ಕವಿಶೈಲ’ಕ್ಕೆ ಭೇಟಿ ಕೊಡಲಿದ್ದಾರೆ.

ಕವಿಶೈಲದಲ್ಲಿ ಸೊಬಗು ಸವಿಯಲು ಅರ್ಧಗಂಟೆ ಮೀಸಲಿಡಲಾಗಿದೆ. ಅದಾದ ಬಳಿಕ ಕುವೆಂಪು ಅಧ್ಯಯನ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.