ADVERTISEMENT

ಲೂದಿಯಾನದಲ್ಲಿ ಹಂತಕ ಬಂಧನ!

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ತಿರುಪಾಲರೆಡ್ಡಿ
ತಿರುಪಾಲರೆಡ್ಡಿ   

ಬೆಂಗಳೂರು: ‘ಸಿಐಡಿ’ ಎಂಬ ಹಿಂದಿ ಪತ್ತೆದಾರಿ ಧಾರಾವಾಹಿಯಿಂದ ಪ್ರೇರೇಪಿತನಾಗಿ ಪಿ.ಜಿ.ಕಟ್ಟಡದ ಮಾಲೀಕನನ್ನು ಹತ್ಯೆಗೈದಿದ್ದ ಬಿಹಾರದ ಬಾಣಸಿಗ ಶಿವಶಂಕರ್ (29), ಪಂಜಾಬ್‌ನ ಲೂದಿಯಾನದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಿಟಿಎಂ ಲೇಔಟ್2ನೇ ಹಂತದಲ್ಲಿ ಪೇಯಿಂಗ್ ಗೆಸ್ಟ್ ವ್ಯವಹಾರ ನಡೆಸುತ್ತಿದ್ದ ಆಂಧ್ರಪ್ರದೇಶದ ತಿರುಪಾಲರೆಡ್ಡಿ (60), ಡಿ.12ರ ರಾತ್ರಿ ಕಟ್ಟಡದ ನೆಲಮಹಡಿಯಲ್ಲೇ ಕೊಲೆಯಾಗಿದ್ದರು. ಬೆಳಿಗ್ಗೆ 7 ಗಂಟೆಗೆ ಮಗ ಈಶ್ವರ್‌ರೆಡ್ಡಿ ಕಟ್ಟಡಕ್ಕೆ ಬಂದಾಗ ಪ್ರಕರಣ ಬಯಲಾಗಿತ್ತು. ಅವರ ಬಳಿ ಅಡುಗೆ ಕೆಲಸ ಮಾಡುತ್ತಿದ್ದ ಶಿವಶಂಕರ್ ನಾಪತ್ತೆಯಾಗಿದ್ದರಿಂದ, ಆತನ ಮೇಲೆ ಅನುಮಾನ ವ್ಯಕ್ತಪಡಿಸಿ ಮೈಕೊಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು.

ದೂರುದಾರರಿಂದ ಶಿವಶಂಕರ್‌ನ ಮೂಲ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಪಡೆದು ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಮೊದಲು ಆತನ ಮೊಬೈಲ್ ಕರೆ ವಿವರ (ಸಿಡಿಆರ್) ಪರಿಶೀಲಿಸಿದರು. ಆಗ ಆರೋಪಿಯು ಬಿಹಾರದ ಸ್ನೇಹಿತನ ಜತೆ ಸಂಭಾಷಣೆ ನಡೆಸಿರುವುದು ಗೊತ್ತಾಗಿತ್ತು. ಆದರೆ, ‘ಟವರ್ ಡಂಪ್’ ತನಿಖೆ ನಡೆಸಿದಾಗ ಆತನ ಮೊಬೈಲ್ ಲೂದಿಯಾನದ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು.

ADVERTISEMENT

ಕೂಡಲೇ ಲೂದಿಯಾನಕ್ಕೆ ತೆರಳಿದ ಪೊಲೀಸರ ವಿಶೇಷ ತಂಡ, ಅಲ್ಲಿನ ಕೈಗಾರಿಕಾ ಪ್ರದೇಶದ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರಲ್ಲಿ ಸ್ನೇಹಿತರ ಜತೆ ತಂಗಿದ್ದ ಶಿವಶಂಕರ್‌ನನ್ನು ಪತ್ತೆ ಹಚ್ಚಿತು. ಶುಕ್ರವಾರ ರಾತ್ರಿ ನಗರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಹಣದಾಸೆಗೆ ಕೃತ್ಯ ಎಸಗಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಏಳು ವರ್ಷಗಳ ಹಿಂದೆ ಸಂಸಾರ ಸಮೇತ ನಗರಕ್ಕೆ ಬಂದಿದ್ದ ತಿರುಪಾಲರೆಡ್ಡಿ, ಕುಂದಲಹಳ್ಳಿ ಹಾಗೂ ಬಿಟಿಎಂ ಲೇಔಟ್‌ನಲ್ಲಿ ಪೇಯಿಂಗ್ ಗೆಸ್ಟ್ ವ್ಯವಹಾರ ನಡೆಸುತ್ತಿದ್ದರು. ಬಿಹಾರದ ಮಧುಬನಿ ಜಿಲ್ಲೆಯವನಾದ ಶಿವಶಂಕರ್, 6 ತಿಂಗಳ ಹಿಂದೆ ನಗರಕ್ಕೆ ಬಂದು ಅವರ ಬಳಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ.

ವ್ಯವಹಾರ ನೋಡಿಕೊಂಡು ನಿತ್ಯವೂ ಪಿ.ಜಿ.ಕಟ್ಟಡದ ನೆಲಮಹಡಿಯಲ್ಲೇ ಮಲಗುತ್ತಿದ್ದ ತಿರುಪಾಲರೆಡ್ಡಿ, ಅಲ್ಲೇ ಅಲ್ಮೆರಾ ಇಟ್ಟುಕೊಂಡಿದ್ದರು. ಇತ್ತೀಚೆಗೆ ₹ 2 ಲಕ್ಷ ನಗದನ್ನು ತಂದು ಅದರಲ್ಲಿ ಇಟ್ಟಿದ್ದರು. ಅದನ್ನು ನೋಡಿದ್ದ ಆರೋಪಿ, ಡಿ.12ರ ರಾತ್ರಿ ಹಣ ದೋಚಲು ಸಂಚು ರೂಪಿಸಿದ್ದ.

ರಾತ್ರಿ 12.30ರ ಸುಮಾರಿಗೆ ತಿರುಪಾಲರೆಡ್ಡಿ ನಿದ್ರೆಗೆ ಜಾರಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾಗಳ ಚಾಲನೆ ಸ್ಥಗಿತಗೊಳಿಸಿದ ಆರೋಪಿ, ತರಕಾರಿ ಕತ್ತರಿಸುವ ಚಾಕುವಿನೊಂದಿಗೆ ಕೋಣೆಗೆ ನುಗ್ಗಿ ಕುತ್ತಿಗೆ ಕುಯ್ದಿದ್ದ. ಬಳಿಕ ಅಲ್ಮೆರಾದ ಬೀಗ ಒಡೆದು ಹಣ ತೆಗೆದುಕೊಂಡು ಕಟ್ಟಡದಿಂದ ಹೊರಬಂದ ಆತ, ಮರು
ದಿನ ರಾತ್ರಿ ವಿಮಾನದಲ್ಲಿ ಪಂಜಾಬ್‌ಗೆ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಪತ್ತೆದಾರಿ ಧಾರಾವಾಹಿ ನೋಡಿದ್ದೆ’
‘ಹಿಂದಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘‍ಸಿಐಡಿ’ ಪತ್ತೆದಾರಿ ಧಾರಾವಾಹಿ ನೋಡುತ್ತಿದ್ದೆ. ಯಾವುದೇ ಕುರುಹು ಸಿಗದಂತೆ ಹೇಗೆ ಕೊಲೆ ಮಾಡಬಹುದು ಹಾಗೂ ಕೃತ್ಯದ ನಂತರ ಯಾವ ರೀತಿ ಸಾಕ್ಷ್ಯಗಳನ್ನು ನಾಶಮಾಡಬಹುದು ಎಂಬುದನ್ನು ಅದರಿಂದಲೇ ತಿಳಿದುಕೊಂಡಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ಪ್ರಸಾರವಾದ ಒಂದು ಸಂಚಿಕೆಯಲ್ಲಿ ಹಂತಕ ಸಿ.ಸಿ ಟಿ.ವಿ ಕ್ಯಾಮೆರಾ ಸ್ಥಗಿತಗೊಳಿಸಿ ವ್ಯಕ್ತಿಯೊಬ್ಬರನ್ನು ಕೊಂದಿದ್ದ. ನಂತರ ಪೊಲೀಸರ ಶ್ವಾನಗಳಿಗೆ ಕುರುಹು ಸಿಗಬಾರದೆಂದು ಕೃತ್ಯದ ಸ್ಥಳದಲ್ಲಿ ಖಾರದ ಪುಡಿ ಸುರಿದು ಹೋಗಿದ್ದ. ನಾನೂ ಆದೇ ತಂತ್ರಗಳನ್ನು ಬಳಸಿದ್ದೆ. ಆದರೂ, ಪೊಲೀಸರು ನನ್ನನ್ನು ಬಂಧಿಸಿದರು’ ಎಂದು ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.