ADVERTISEMENT

ಲೇಖಕ ಎಸ್‌.ವಿದ್ಯಾಶಂಕರ್‌ ನಿಧನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ, ಲೇಖಕ ಎಸ್‌. ವಿದ್ಯಾಶಂಕರ್‌ (68) ಅವರು ಬುಧವಾರ ಸಂಜೆ ಇಲ್ಲಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ವಿದ್ಯಾಶಂಕರ್‌ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು  ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜನಿಸಿದ್ದರು.

ಬೆಂಗಳೂರು ವಿ.ವಿ ಸಿಂಡಿಕೇಟ್‌ ಮತ್ತು ಅಕಾಡೆಮಿ ಕೌನ್ಸಿಲ್‌ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ‘ವೀರಶೈವ ಪುರಾಣಗಳು’ ವಿಷಯದ ಮೇಲೆ ಪಿಎಚ್‌ಡಿ ಪ್ರಬಂಧವನ್ನು ಮಂಡಿಸಿದ್ದರು.

‘ನಂಬಿಯಣ್ಣ ಒಂದು ಅಧ್ಯಯನ’, ‘ವಚನಾನುಶೀಲನ’, ‘ನೆಲದ ಮರೆಯ ನಿಧಾನ’ ಅವರ ಪ್ರಮುಖ ಸಂಕಲನಗಳಾಗಿವೆ. 2001ರಿಂದ 2007ರ ವರೆಗೆ  ‘ಸ್ವಪ್ನಲೋಕ’ ಸಾಹಿತ್ಯ ಪತ್ರಿಕೆಯನ್ನು ನಡೆಸಿದ್ದರು. ‘ವೀರಶೈವ ಸಾಹಿತ್ಯ ಚರಿತ್ರೆ’ ನಾಲ್ಕು ಸಂಪುಟ ಕೂಡ ಹೊರತಂದಿದ್ದರು. ಇದರ ಜೊತೆಗೇ ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯನವರ ವಚನ ಸಂಪುಟವನ್ನು ಸಂಪಾದಿಸಿದ್ದರು.

ಗುರುವಾರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾಶಂಕರ್‌ ಅವರ ಪುತ್ರ ವಿ. ಕಾರ್ತಿಕ್‌ ಅವರನ್ನು 99860 50012ಗೆ  ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.