ADVERTISEMENT

ಲೋಕಾಯುಕ್ತ ಕಚೇರಿ ಭಣಭಣ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:04 IST
Last Updated 30 ನವೆಂಬರ್ 2015, 20:04 IST

ಬೆಂಗಳೂರು: ದೂರು–ದುಮ್ಮಾನ ಹೇಳಿಕೊಳ್ಳಲು ಬರುತ್ತಿದ್ದ ಜನರಿಂದ ಗಿಜಿಗುಡುತ್ತಿದ್ದ ಲೋಕಾಯುಕ್ತ ಕಚೇರಿ ಸೋಮವಾರ ಭಣಗುಡುತ್ತಿತ್ತು. ಸೋಮವಾರ ಮಧ್ಯಾಹ್ನ ‘ಪ್ರಜಾವಾಣಿ’ ಪ್ರತಿನಿಧಿ ಕಚೇರಿ ಭೇಟಿ ನೀಡಿದಾಗ, ಸಾರ್ವಜನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯೇ ಕಂಡುಬಂದರು.

‘ಶುಕ್ರವಾರದವರೆಗೂ ಜನ ಬರುತ್ತಿದ್ದರು. ಆದರೆ ಇವತ್ತು ಸಾರ್ವಜನಿಕರು ಕಚೇರಿಗೆ ಬಂದಿದ್ದು ತೀರಾ ಕಡಿಮೆ’ ಎಂದು ಲೋಕಾಯುಕ್ತ ಸಿಬ್ಬಂದಿಯೊಬ್ಬರು ತಿಳಿಸಿದರು. ಉಪ ಲೋಕಾಯುಕ್ತ ಸುಭಾಷ್‌ ಬಿ. ಅಡಿ ಅವರು ಶುಕ್ರವಾರದವರೆಗೆ ಕಚೇರಿಗೆ ಬರುತ್ತಿದ್ದರು. ಆದರೆ, ಅವರ ಪದಚ್ಯುತಿ ಪ್ರಸ್ತಾವನೆಯನ್ನು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಶುಕ್ರವಾರ ಅಂಗೀಕರಿಸಿರುವ ಕಾರಣ, ಉಪ ಲೋಕಾಯುಕ್ತರು ಸೋಮವಾರ ಕರ್ತವ್ಯಕ್ಕೆ ಬಂದಿರಲಿಲ್ಲ.

‘ಪದಚ್ಯುತಿ ಪ್ರಸ್ತಾವನೆಯನ್ನು ಸಭಾಧ್ಯಕ್ಷರು ಅಂಗೀಕರಿಸಿದ ಕ್ಷಣದಿಂದ ಕರ್ತವ್ಯ ನಿರ್ವಹಿಸಬಾರದೋ ಅಥವಾ ಪ್ರಸ್ತಾವನೆಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ಕಳುಹಿಸಿದ ಕ್ಷಣದಿಂದ ಕೆಲಸ ನಿರ್ವಹಿಸಬಾರದೋ ಎಂಬ ಬಗ್ಗೆ ಕಾನೂನು ಸ್ಪಷ್ಟವಾಗಿ ಏನೂ ಹೇಳಿಲ್ಲ. ನ್ಯಾಯಮೂರ್ತಿ ಅಡಿ ಅವರು ಈ ಬಗ್ಗೆ ಹಂಗಾಮಿ ರಿಜಿಸ್ಟ್ರಾರ್‌ ಅವರಿಂದ ಸ್ಪಷ್ಟನೆ ಕೋರಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ಪುತ್ರ ಅಶ್ವಿನ್‌ ರಾವ್‌ ಬಂಧನವಾದ ನಂತರ ಕಚೇರಿಗೆ ಬಂದಿಲ್ಲ. ಅವರು ಮತ್ತೆ ಮತ್ತೆ ರಜೆ ಹಾಕುತ್ತಿದ್ದಾರೆ. ಈಗ ಲೋಕಾಯುಕ್ತದ ಆಡಳಿತಾತ್ಮಕ ಹೊಣೆ ಹಂಗಾಮಿ ರಿಜಿಸ್ಟ್ರಾರ್‌ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.