ADVERTISEMENT

ವಂಚಕಿಯ ಜತೆ ಇನ್‌ಸ್ಪೆಕ್ಟರ್!

ಕಡೂರಿನಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದ ಪವಿತ್ರಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 20:05 IST
Last Updated 10 ಫೆಬ್ರುವರಿ 2016, 20:05 IST
ವಂಚಕಿ ಪವಿತ್ರಾ
ವಂಚಕಿ ಪವಿತ್ರಾ   

ಕಡೂರು: ಸಮಾಜ ಸೇವೆಯ ಮುಖವಾಡ ಧರಿಸಿ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಸುಳ್ಳು ಹೇಳಿ ಕಡೂರಿನ ವೈದ್ಯ ಡಾ.ಬಸವಂತಪ್ಪ ಅವರ ಮನೆಯಿಂದ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಲಪಟಾಯಿಸಿದ್ದ ವಂಚಕಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಪೊಲೀಸ್ ಅಧಿಕಾರಿಯೊಂದಿಗೆ ಆಕೆಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ.

ಘಟನೆಯ ವಿವರ: ಸಮಾಜ ಸೇವೆ ಆಕೆಯ ಕಾಯಕ. ಜನರ ಕಣ್ಣಿಗೆ ಆಕೆ ಮಹಾನ್ ಸಮಾಜ ಸೇವಕಿ. ವಾಸ್ತವವಾಗಿ ಆಕೆ ಮಾಡಿದ್ದು ದರೋಡೆ. ಅದೂ ಅತಿ ಬುದ್ಧಿವಂತಿಕೆಯಿಂದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಪ್ರವೇಶ ಮಾಡಿದ್ದು ಕಡೂರಿನ ವೈದ್ಯ ಡಾ.ಬಸವಂತಪ್ಪ ಅವರ ಮನೆ. ಅಲ್ಲಿ ಲಪಟಾಯಿಸಿದ್ದು ಬರೋಬ್ಬರಿ ₹ 6.40 ಲಕ್ಷ ಮತ್ತು ₹ 1.50 ಲಕ್ಷ ಮೌಲ್ಯದ ಚಿನ್ನಾಭರಣ.

ಕಡೂರು ಪೊಲೀಸ್ ಠಾಣೆಗೆ ಅನತಿ ದೂರದಲ್ಲಿಯೇ ಇರುವ ಡಾ.ಬಸವಂತಪ್ಪ ಅವರ ಮನೆಯಲ್ಲಿ ನಡೆದ ಈ ಪ್ರಕರಣ ಕಡೂರಿಗರನ್ನು ಬೆಚ್ಚಿಬೀಳಿಸಿತ್ತು. ಕಡೂರು ಪೊಲೀಸರಿಗೂ ಇದು ಸವಾಲಾಗಿತ್ತು.

ತರೀಕೆರೆ ಡಿವೈಎಸ್‌ಪಿ ರಾಜನ್.ವೈ.ನಾಯಕ್ ಅವರ ಮಾರ್ಗದರ್ಶನದಲ್ಲಿ ಕಡೂರು ಇನ್‌ಸ್ಪೆಕ್ಟರ್‌ ಮಧುಸೂದನ್, ಸಖರಾಯಪಟ್ಟಣ ಪಿಎಸ್‌ಐ ಲಿಂಗರಾಜು, ಎಎಸ್‌ಐ ಲೀಲಾವತಿ ನೇತೃತ್ವದಲ್ಲಿ ತಂಡ ರಚನೆಯಾಗಿ ಅತ್ಯಂತ ವೈಜ್ಞಾನಿಕವಾಗಿ ತನಿಖೆಯ ಜಾಡು ಹಿಡಿದ ಆ ತನಿಖಾ ತಂಡ ಸಮಾಜಸೇವಕಿಯ ಮುಖವಾಡ ತೊಟ್ಟು ಈ ರೀತಿಯ ದರೋಡೆ ಮಾಡುತ್ತಿದ್ದ ಪವಿತ್ರಾ ಎಂಬಾಕೆಯನ್ನು ಬೆಂಗಳೂರಿನ ಉತ್ತರಹಳ್ಳಿಯ ಬ್ರಿಗೇಡ್ ಅಪಾರ್ಟ್‌ಮೆಂಟ್ ನಿಂದ ಬಂಧಿಸಿ ತಂದ ಕಡೂರು ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪೊಲೀಸರ ಈ ಸಾಧನೆಗೆ ಮೆಚ್ಚುಗೆಯೂ ವ್ಯಕ್ತವಾಯಿತು.

ಕಡೂರಿನ ವೈದ್ಯರ ಮನೆಯಲ್ಲಿ ದರೋಡೆ ಮಾಡಿದ ತಂಡದ ಪವಿತ್ರಾ ಎಂಬಾಕೆ  ಕೇವಲ 30 ವರ್ಷದ ಮಹಿಳೆ ಎಂಬುದು ಸ್ವಲ್ಪ ಅಚ್ಚರಿಯಾದರೂ ಅದಕ್ಕಿಂತ ಬೆಚ್ಚಿಬೀಳುವ ಸಂಗತಿಯೆಂದರೆ ಪೊಲೀಸರು ಆಕೆಯ ಅಪಾರ್ಟ್‌ಮೆಂಟ್ ನಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ಆಂತರಿಕ ಭದ್ರತೆ ವಿಭಾಗದ ಇನ್‌ಸ್ಪೆಕ್ಟರ್ ಆಗಿರುವ ಪಾಪಣ್ಣ ಅವರ ಜತೆಗಿರುವ ಫೋಟೋಗಳು ಸಿಕ್ಕಿದ್ದು!

ಸಬ್ ಇನ್‌ಸ್ಪೆಕ್ಟರ್‌ ಪಾಪಣ್ಣರಿಗೆ ಪವಿತ್ರಾಳೊಂದಿಗೆ ಅಕ್ರಮ ಸಂಬಂಧವಿದೆ ಹಾಗೂ ಈ ಮೊದಲೇ ಅವರಿಗೆ ಮದುವೆಯೂ ಆಗಿತ್ತು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.

ಪವಿತ್ರಾ ನಡೆಸಿರುವ ಮತ್ತು ನಡೆಸಿರಬಹುದಾದ ದರೋಡೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ದರೋಡೆ ಪ್ರಕರಣಗಳಲ್ಲಿ ಪಾಪಣ್ಣನ ಪಾತ್ರವೂ ಇದೆಯೇ ಅಥವಾ ಅವರ ಮತ್ತು ಪವಿತ್ರಾಳ ಸಂಬಂಧ ಕೇವಲ ಅಕ್ರಮ ಸಂಬಂಧಕ್ಕೆ ಮಾತ್ರ ಸೀಮಿತವೇ ಎಂಬ ವಿಚಾರದಲ್ಲಿಯೂ ತನಿಖೆ ನಡೆಸಲಾರಂಭಿಸಿದ್ದಾರೆಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಇವರ ಪಾತ್ರವಿದೆಯೇ ಇಲ್ಲವೇ ಎಂಬುದರ ಬಗ್ಗೆ ವಿಚಾರಣೆ  ನಡೆಸಲು ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ತನಿಖೆಯ ನಂತರವೇ ಸ್ಪಷ್ಟವಾಗಲಿದೆ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು.

ಈ ನಡುವೆ ವೈದ್ಯ ಡಾ.ಬಸವಂತಪ್ಪ ಅವರ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್, ವಿಶ್ವನಾಥ್, ಹೇಮಂತ್ ಅವರನ್ನು ಬಂಧಿಸಲಾಗಿದ್ದು, ಮೂವರೂ ಹಾಸನ ಮೂಲದವರೆಂದು ತಿಳಿದು ಬಂದಿದೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.