ADVERTISEMENT

ವರದಿಗೆ ಕಾಂಗ್ರೆಸ್‌ನಲ್ಲೇ ತೀವ್ರ ಆಕ್ಷೇಪ

ಬಿಬಿಎಂಪಿ ವಾರ್ಡ್‌ ಪುನರ್‌ವಿಂಗಡಣೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2015, 19:53 IST
Last Updated 26 ಫೆಬ್ರುವರಿ 2015, 19:53 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌­ಗಳ ಪುನರ್‌ವಿಂಗಡಣೆ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿ­ಕಾರಿ ವಿ.ಶಂಕರ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ವರದಿಗೆ ಆಡಳಿತರೂಢ ಕಾಂಗ್ರೆಸ್‌ ಪಕ್ಷದವರೇ ವಿರೋಧ ವ್ಯಕ್ತಪಡಿಸು­ತ್ತಿದ್ದು, ಪಾಲಿಕೆ ಚುನಾವಣೆ ವಿಳಂಬವಾಗುವ ಸಾಧ್ಯತೆಗಳು ಕಾಣುತ್ತಿವೆ.

2011ರ ಜನಗಣತಿಯ ವರದಿ ಆಧರಿಸಿ ವಾರ್ಡ್‌ಗಳ ಪುನರ್‌ವಿಂಗಡಣೆ ಪೂರ್ಣಗೊಳಿಸಿದ ಬಳಿಕವೇ ಬಿಬಿಎಂಪಿ ಚುನಾವಣೆ ನಡೆಸಬೇಕಿದೆ. ನಗರಾ­ಭಿವೃದ್ಧಿ ಇಲಾಖೆಯು ವಾರ್ಡ್‌ಗಳ ಪುನರ್‌­­ವಿಂಗಡಣೆ ವರದಿಗೆ ಒಪ್ಪಿಗೆ ನೀಡಿ ಕಳು­ಹಿಸಿದ ಬಳಿಕ­ವಷ್ಟೇ ರಾಜ್ಯ ಚುನಾ­ವಣಾ ಆಯೋಗವು ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಬಹುದು.

ವಾರ್ಡ್‌ ಪುನರ್‌ವಿಂಗಡಣೆ ಪ್ರಕ್ರಿಯೆ ಆರಂಭಿಸುವಂತೆ ನಗರಾಭಿವೃದ್ಧಿ ಇಲಾ­ಖೆಯು ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ ಪಾಲಿಕೆಯ 198 ವಾರ್ಡು­ಗಳ ಪುನರ್‌ವಿಂಗಡಣೆ ವರದಿ ಸಿದ್ಧ­ಪಡಿಸಿರುವ ಶಂಕರ್‌, ಜನವರಿ 31­ರಂದು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿರುವ ಜನಸಂಖ್ಯೆ­ಯನ್ನು ಸಾಧ್ಯವಾದಷ್ಟೂ ಎಲ್ಲ ವಾರ್ಡ್‌ಗಳಿಗೆ ಸಮನಾಗಿ ಹಂಚಿಕೆ ಮಾಡುವುದು ಸೇರಿದಂತೆ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಕೆಲವು ಮಾರ್ಗ­ಸೂಚಿ­ಗಳನ್ನು ನಿಗದಿ ಮಾಡಲಾಗಿತ್ತು. ಜಿಲ್ಲಾ­ಧಿಕಾರಿ ಸಲ್ಲಿಸಿ­ರುವ ವರದಿ ಮಾರ್ಗ­ಸೂಚಿ ಪ್ರಕಾರ ಇಲ್ಲ ಎಂದು ಕಾಂಗ್ರೆಸ್‌ನ ಕೆಲವರು ಆಕ್ಷೇಪ ಎತ್ತಿದ್ದಾರೆ ಎಂದು ಗೊತ್ತಾಗಿದೆ.

98 ವಾರ್ಡ್‌ಗಳಲ್ಲಿ ಬದಲಾವಣೆ: ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಪ್ರಕಾರ ಪಾಲಿಕೆಯ 198 ವಾರ್ಡ್‌­ಗಳ ಪೈಕಿ 98 ವಾರ್ಡ್‌­ಗಳಲ್ಲಿ ಬದಲಾವಣೆ ಆಗಲಿದೆ. ಯಾವುದೇ ಒಂದು ವಾರ್ಡ್‌ ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರದ ವ್ಯಾಪ್ತಿ­ಯಲ್ಲಿ ಇರುವುದಿಲ್ಲ. 2011ರ ಜನಗಣತಿ ಪ್ರಕಾರ ಬಿಬಿ­ಎಂಪಿ ವ್ಯಾಪ್ತಿಯಲ್ಲಿ 84.25 ಲಕ್ಷ ಜನಸಂಖ್ಯೆ ಇದೆ. ಸರಾಸರಿ 42 ಸಾವಿರ ಜನರಿಗೆ ಒಂದು ವಾರ್ಡ್‌ ಇರಬೇಕಿತ್ತು. ಈಗ 43 ಸಾವಿರದಿಂದ 50 ಸಾವಿರ ಜನಸಂಖ್ಯೆ­ಯವರೆಗೆ ವಾರ್ಡ್‌ಗಳನ್ನು ವಿಂಗ­ಡಣೆ ಮಾಡಲಾಗಿದೆ. ಎಲ್ಲ ವಾರ್ಡ್‌­ಗಳ ಗಡಿಗಳ ವಿವರಗಳನ್ನು ವರದಿಯ ಜೊತೆ ನೀಡಲಾಗಿದೆ.

ಆಕ್ಷೇಪಣೆ ಆಹ್ವಾನ: ನಗರಾಭಿವೃದ್ಧಿ ಇಲಾಖೆಯು ಜಿಲ್ಲಾಧಿಕಾರಿಯವರ ವರದಿಯನ್ನು ಪರಿಶೀಲಿಸುತ್ತಿದೆ. ವರದಿಗೆ ಸಂಬಂಧಿಸಿದಂತೆ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ವರದಿಗೆ ಆಕ್ಷೇಪಣೆಗಳು ಬಂದರೆ ಮರು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

ವಾರ್ಡ್‌ಗಳ ಪುನರ್‌ವಿಂಗಡಣೆ ಸಂದರ್ಭದಲ್ಲಿ ಜನಗಣತಿ ಬ್ಲಾಕ್‌ಗಳನ್ನು ಒಂದಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ವಿಭಜಿಸಲಾಗಿದೆ. ಈ ಬಗ್ಗೆಯೂ ನಗರದ ಕೆಲವು ಕಾಂಗ್ರೆಸ್‌ ಮುಖಂಡರು ಆಕ್ಷೇಪ ಎತ್ತಿದ್ದಾರೆ. ಪಾಲಿಕೆಯ ಕೌನ್ಸಿಲ್‌ ಅವಧಿ ಏಪ್ರಿಲ್‌ 26ಕ್ಕೆ ಅಂತ್ಯಗೊಳ್ಳಲಿದೆ. ಬಿಬಿ­ಎಂಪಿ ವಿಭಜನೆ ಬಳಿಕ ಚುನಾವಣೆ ನಡೆಸಲು ಕಾಂಗ್ರೆಸ್‌ ಯೋಚಿಸಿದೆ. ಅದಕ್ಕೆ ಪೂರಕವಾಗಿ ವಾರ್ಡ್‌ಗಳ ಪುನರ್‌­ವಿಂಗಡಣೆ ವಿಳಂಬ ಮಾಡಬಹುದು ಎಂದು ಗೊತ್ತಾಗಿದೆ.

ವಾರ್ಡ್‌ ಪುನರ್‌ವಿಂಗಡಣೆಯಲ್ಲಿ ಮಾರ್ಗ­ಸೂಚಿ ಉಲ್ಲಂಘನೆ ಆಗಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕೆಲವರು ನ್ಯಾಯಾಲಯದ ಮೆಟ್ಟಿಲೇ­ರುವ ಸಾಧ್ಯತೆಯೂ ಇದೆ. ಇದು ಕೂಡ ಚುನಾವಣೆ ಮುಂದೂಡುವುದಕ್ಕೆ ಕಾರಣ ಆಗಬ­ಹುದು ಎಂಬ ಮಾತುಗಳು ಆಡಳಿತ ಪಕ್ಷದೊಳಗೆ ಕೇಳಿಬರುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರದ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಜಿಲ್ಲಾಧಿಕಾರಿ­ಯ­ವರು ಇತ್ತೀಚೆಗಷ್ಟೆ ವರದಿ ನೀಡಿದ್ದಾರೆ. ಈ ಬಗ್ಗೆ ನಗರಾ­ಭಿವೃದ್ಧಿ ಇಲಾಖೆ ಪರಿಶೀಲನೆ ನಡೆಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.