ADVERTISEMENT

ವಾಸದ ಮಿತಿ 15 ರಿಂದ 5 ವರ್ಷಕ್ಕೆ ಇಳಿಕೆ

ಬಿಡಿಎ ಫ್ಲ್ಯಾಟ್‌ ಖರೀದಿ ಹೊರ ರಾಜ್ಯದವರಿಗೆ ಇನ್ನು ಸುಲಭ

ಬಿ.ಸತೀಶ್
Published 29 ಏಪ್ರಿಲ್ 2016, 19:55 IST
Last Updated 29 ಏಪ್ರಿಲ್ 2016, 19:55 IST
-ಶ್ಯಾಮ್ ಭಟ್
-ಶ್ಯಾಮ್ ಭಟ್   

ಬೆಂಗಳೂರು: ಹೊರ ರಾಜ್ಯದ ಜನರು ನಗರದಲ್ಲಿ  ಫ್ಲ್ಯಾಟ್‌ ಖರೀದಿಸಲು ಕನಿಷ್ಠ 15 ವರ್ಷ ರಾಜ್ಯದಲ್ಲಿ ವಾಸವಿರಬೇಕು ಎಂಬ ಮಿತಿಯನ್ನು ಐದು ವರ್ಷಕ್ಕೆ ಇಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತೀರ್ಮಾನಿಸಿದೆ. ಈ ಬಗ್ಗೆ ಏಪ್ರಿಲ್ 13ರಂದು ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ನಗರದಲ್ಲಿ ವಾಸವಾಗಿರುವ ಹೊರ ರಾಜ್ಯಗಳ ಜನರಿಂದ ಫ್ಲ್ಯಾಟ್‌ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರಿಂಗ್‌ ಅಧಿಕಾರಿ ಎನ್.ಜಿ.ಗೌಡಯ್ಯ ಹೇಳಿದರು.

‘ವಾಸದ ಮಿತಿಯನ್ನು ಐದು ವರ್ಷಕ್ಕೆ ಇಳಿಸಿರುವ ತೀರ್ಮಾನವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು. ಮುಂದಿನ ಒಂದು ತಿಂಗಳ ಒಳಗೆ ಹೊರ ರಾಜ್ಯದವರಿಗೆ ಫ್ಲ್ಯಾಟ್‌ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ನಗರದಲ್ಲಿ ಹೊರ ರಾಜ್ಯಗಳ ಸಾಫ್ಟ್‌ವೇರ್‌ ಉದ್ಯೋಗಿಗಳು, ವಿವಿಧ ಇಲಾಖೆಗಳ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಬಿಡಿಎ ಫ್ಲ್ಯಾಟ್‌ ಖರೀದಿಸಲು ನಗರದಲ್ಲಿ ಕಡ್ಡಾಯವಾಗಿ 15 ವರ್ಷ ವಾಸವಾಗಿರಬೇಕು ಎಂಬ ನಿಯಮ ಇದ್ದುದರಿಂದ ಹೊರ ರಾಜ್ಯದವರು ಹೆಚ್ಚಾಗಿ ಇಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಿಲ್ಲ’ ಎಂದರು.

‘ಆಲೂರು, ದೊಡ್ಡಬನಹಳ್ಳಿ, ಕಣಿಮಿಣಿಕೆ, ವಳಗೇರಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಡಿಎ ವತಿಯಿಂದ ಫ್ಲ್ಯಾಟ್‌ ನಿರ್ಮಾಣ ಮಾಡಲಾಗಿದೆ. ಬಿಡಿಎ ಫ್ಲ್ಯಾಟ್‌ಗಳು ಖಾಸಗಿ ಫ್ಲ್ಯಾಟ್‌ಗಳಿಗಿಂತ ಹೆಚ್ಚು ಸುಸಜ್ಜಿತವಾಗಿವೆ ಮತ್ತು ಕಡಿಮೆ ದರಕ್ಕೆ ಸಿಗುತ್ತವೆ. ಹೀಗಾಗಿ ಹೊರ ರಾಜ್ಯದವರು ಬಿಡಿಎ ಫ್ಲ್ಯಾಟ್‌ಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’  ಎಂದು ಹೇಳಿದರು.

ಸ್ಪರ್ಧಾತ್ಮಕ ದರ: ‘900 ಚದರ ಅಡಿ ವಿಸ್ತೀರ್ಣದ 2 ಕೊಠಡಿಗಳ ಫ್ಲ್ಯಾಟ್‌ನ್ನು ಬಿಡಿಎ ₹ 25 ಲಕ್ಷಕ್ಕೆ ಹಂಚಿಕೆ ಮಾಡುತ್ತಿದೆ. ಇದೇ ವಿಸ್ತೀರ್ಣದ ಫ್ಲ್ಯಾಟ್‌ನ್ನು ಖಾಸಗಿಯವರು ₹ 55 ರಿಂದ 60 ಲಕ್ಷಕ್ಕೆ ಮಾರಾಟ ಮಾಡುತ್ತಾರೆ. ಅದೇ ರೀತಿ 1,200 ಚದರ ಅಡಿ ವಿಸ್ತೀರ್ಣದ ಮೂರು ಕೊಠಡಿಗಳ ಫ್ಲ್ಯಾಟ್‌ನ್ನು ಬಿಡಿಎ ₹35 ಲಕ್ಷಕ್ಕೆ ಹಂಚಿಕೆ ಮಾಡಿದರೆ, ಖಾಸಗಿಯವರು ₹ 90 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಖಾಸಗಿಯವರ ಸ್ಪರ್ಧೆ ಎದುರಿಸಬೇಕು
‘ಬಿಡಿಎ ಫ್ಲ್ಯಾಟ್‌ ಖರೀದಿಸಲು 1984ರ ಬಿಡಿಎ ಕಾಯ್ದೆ ಅನ್ವಯ ನಗರದಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು ಎಂಬ ನಿಯಮ ಇದೆ.  ಹೀಗಾಗಿ ಹೊರ ರಾಜ್ಯದವರಿಗೆ ಇಲ್ಲಿ ಫ್ಲ್ಯಾಟ್‌ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಬಿಡಿಎ ಆಯುಕ್ತ ಶ್ಯಾಮ್ ಭಟ್ ತಿಳಿಸಿದರು.

‘ನಮ್ಮ ರಾಜ್ಯದವರು ಇಲ್ಲಿ ಫ್ಲ್ಯಾಟ್‌ಗಳಿಗಿಂತ ಹೆಚ್ಚು ನಿವೇಶನಗಳನ್ನು ಖರೀದಿಸಲು ಆಸಕ್ತಿ ತೋರುತ್ತಾರೆ. ಆದರೆ, ಹೊರ ರಾಜ್ಯದವರಿಂದ ಫ್ಲ್ಯಾಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ವಾಸದ ಮಿತಿಯನ್ನು ಸಡಿಲಗೊಳಿಸಲಾಗಿದೆ’ ಎಂದರು.

‘ಬಿಡಿಎಯಿಂದ ಲೇಔಟ್‌ ನಿರ್ಮಾಣ ಕೈಬಿಟ್ಟ ನಂತರ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿಯವರಿಂದ ತೀವ್ರ ಸ್ಪರ್ಧೆ ಇರುವುದರಿಂದ ಪ್ರಾಧಿಕಾರದ ಫ್ಲ್ಯಾಟ್‌ಗಳು ಮಾರಾಟವಾಗದಿದ್ದರೆ ಬಿಡಿಎಗೆ ಹೊರೆಯಾಗುತ್ತದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಇಲ್ಲಿನ ಜನರಿಗೆ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT