ADVERTISEMENT

ವಿಜ್ಞಾನವೂ ಇತ್ತು.. ಆಟವೂ ಆಗಿತ್ತು!

ರಾಮನ್‌ ಮನೆಯಲ್ಲಿ ‘ವಿಜ್ಞಾನದ ಮುಕ್ತ ದಿನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ತಯಾರಿಸಿದ ಸೂಕ್ಷ್ಮದರ್ಶಕದ ಮೂಲಕ ಎಲೆಯನ್ನು ವೀಕ್ಷಿಸಿದ ತಂದೆ, ಮಗಳು
ತಯಾರಿಸಿದ ಸೂಕ್ಷ್ಮದರ್ಶಕದ ಮೂಲಕ ಎಲೆಯನ್ನು ವೀಕ್ಷಿಸಿದ ತಂದೆ, ಮಗಳು   

ಬೆಂಗಳೂರು: ಪುಟ್ಟ ಪುಟ್ಟ ಕೈಗಳು ವಿಜ್ಞಾನದ ತರಹೇವಾರಿ ಪ್ರಯೋಗಗಳನ್ನು ಮಾಡುತ್ತಾ ಸಂಭ್ರಮಿಸುತ್ತಿದ್ದರೆ, ಪೋಷಕರು ತಮ್ಮ ಮಗು ಹೊಸ ವಿಷಯವೊಂದನ್ನು ಕಲಿಯಿತು ಎಂಬ ಖುಷಿಯನ್ನು ಅನುಭವಿಸುತ್ತಿದ್ದರು. –ಇದು ಆವಿಷ್ಕಾರ ಮತ್ತು ವಿಜ್ಞಾನ ಪ್ರಸಾರ ಪ್ರತಿಷ್ಠಾನ (ಐಎಸ್‌ಪಿಎಫ್‌) ಖ್ಯಾತ ವಿಜ್ಞಾನಿ ಸಿ.ವಿ.ರಾಮನ್‌ ಅವರ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ವಿಜ್ಞಾನದ ಮುಕ್ತ ದಿನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ.

ಹತ್ತಾರು ವಿಜ್ಞಾನದ ಪ್ರಯೋಗಗಳು ಮಕ್ಕಳನ್ನು ಆಕರ್ಷಿಸಿದವು. ಮಕ್ಕಳನ್ನು ಮೊದಲು ಸೆಳೆದಿದ್ದು ಅರಿಶಿನದಿಂದ ಕುಂಕುಮ ಮಾಡುವ ಮ್ಯಾಜಿಕ್‌.

ಒಂದು ವಸ್ತುವಿನಲ್ಲಿ ಆಮ್ಲ ಇದೆಯೇ ಅಥವಾ ಪ್ರತ್ಯಾಮ್ಲ ಇದೆಯೇ ಎನ್ನುವುದನ್ನು ಲಿಟ್ಮಸ್‌ ಪೇಪರ್‌ ಮೂಲಕ ತಿಳಿಯುವುದು ಸಾಮಾನ್ಯ. ಅದಕ್ಕಿಂತ ಸುಲಭವಾಗಿ ಅರಿಶಿನ ಮತ್ತು ಕುಂಕುಮದ ಸಹಾಯದಿಂದ ಆಮ್ಲ, ಪ್ರತ್ಯಾಮ್ಲದ ಇರುವಿಕೆಯನ್ನು ತಿಳಿಸುವ ಪ್ರಯತ್ನ ಇಲ್ಲಿತ್ತು.

ADVERTISEMENT

ಮಕ್ಕಳು ಸ್ವತಃ ಈ ಪ್ರಯೋಗ ಮಾಡಿದರು. ಅರಿಶಿನದ ನೀರಿಗೆ ಕ್ಯಾಲ್ಶಿಯಂ ಹೈಡ್ರಾಕ್ಸೈಡ್‌ (ಪ್ರತ್ಯಾಮ್ಲ) ಸೇರಿಸಿದಾಗ ಅದು ಕುಂಕುಮವಾಯಿತು.

ಕುಂಕುಮ ತಯಾರಿಸುವುದು ಇಷ್ಟು ಸುಲಭವಾ ಎಂದು ಅಚ್ಚರಿಪಟ್ಟ ಮಕ್ಕಳು, ‘ಅರೇ ಇದು ಮ್ಯಾಜಿಕ್‌ ಅಲ್ಲ, ಸುಲಭ ಪ್ರಯೋಗ’ ಎಂದು ಉದ್ಗರಿಸಿದರ. ಸಿದ್ಧವಾಗಿದ್ದ ಕುಂಕುಮಕ್ಕೆ ಸಿಟ್ರಿಕ್‌ ಆ್ಯಸಿಡ್‌ ಸೇರಿಸಿದಾಗ ಅದು ಮತ್ತೆ ಅರಿಶಿನವಾದಾಗ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಅದನ್ನು ಮುಗಿಸಿ ಮುಂದಿನ ಪ್ರಯೋಗದತ್ತ ತೆರಳಿದ ಮಕ್ಕಳಿಗೆ ಸೆಳೆದದ್ದು ಪ್ಯಾರಾಚೂಟ್‌ ತಯಾರಿಕೆ. ಕಪ್ಪು ಪ್ಲಾಸ್ಟಿಕ್‌ ಮೂಲಕ ಪ್ಯಾರಾಚೂಟ್‌ ತಯಾರಿಸುವುದನ್ನು ಹೇಳಿಕೊಟ್ಟರು. ಪ್ರತಿಷ್ಠಾನದ ಪ್ರತಿನಿಧಿಯೊಬ್ಬರು ವಿವರಿಸುತ್ತಿದ್ದನ್ನು ಅನುಸರಿಸಿ ಮಕ್ಕಳ ಪ್ಯಾರಾಚೂಟ್‌ ಸರಿಯಾಗಿ ರೂಪುಗೊಂಡಿತ್ತು.

ಅದನ್ನು ನಭದತ್ತ ಹಾರಿಸಿದ ಮಗು, ಅದು ನಿಧಾನಕ್ಕೆ ಇಳಿಯುವಾಗ ಖುಷಿಯಲ್ಲಿ ಕುಣಿದಾಡಿತು. ಆ ಮಗುವಿನ ತಂದೆ–ತಾಯಿ ‘ಇದು ನನ್ನ ಕಂದ ತಯಾರಿಸಿದ ಪ್ಯಾರಾಚೂಟ್‌’ ಎಂದು ಹೆಮ್ಮೆಯಿಂದ ಹೇಳಿಕೊಂಡು ಬೀಗಿದರು.

ಹಾಗೆ ಸಾಗಿದ ಮಕ್ಕಳು ಮತ್ತೆ ನಿಂತದ್ದು, ಲಿಪ್‌ ಬಾಮ್‌ ತಯಾರಿಸುವ ಟೇಬಲ್ ಬಳಿ. ಜೇನಿನ ಮೇಣ, ಕೊಬ್ಬರಿ ಎಣ್ಣೆಯನ್ನು ಕಾಯಿಸಿ, ಆರಿಸಿದರೆ ಲಿಪ್‌ ಬಾಮ್‌ ಸಿದ್ಧ. ಮಕ್ಕಳು ತಾವು ತಯಾರಿಸಿ ಲಿಪ್‌ ಬಾಮ್‌ ಹಚ್ಚಿಕೊಂಡು ಶಬ್ಬಾಷ್‌ ಗಿರಿ ಕೊಟ್ಟುಕೊಂಡರು. ಜೊತೆಗೆ ಅಮ್ಮನ ತುಟಿಗೂ ಹಚ್ಚಿ ‘ನಾನೇ ಮಾಡಿದ್ದು’ ಎಂದು ಹೇಳಿ ಸಂತಸಪಟ್ಟರು.

ಇಷ್ಟಕ್ಕೇ ಪ್ರಯೋಗಗಳೂ ಮುಗಿಯಲಿಲ್ಲ, ಮಕ್ಕಳ ಕುತೂಹಲವೂ ತಣಿಯಲಿಲ್ಲ. ಅದನ್ನು ಮುಗಿಸಿ ಮುಂದಿನ ಪ್ರಯೋಗಕ್ಕೆ ಮಕ್ಕಳು ಓಡುತ್ತಿದ್ದರೆ, ಪೋಷಕರು ಅವರನ್ನೇ ಹಿಂಬಾಲಿಸಿದರು. ಮನೆಯಲ್ಲಿಯೇ ಸುಲಭವಾಗಿ ಪೆನ್‌ ಸ್ಟ್ಯಾಂಡ್‌ ಮಾಡುವ ವಿಧಾನವನ್ನೂ ಇಲ್ಲಿ ಹೇಳಿಕೊಡಲಾಯಿತು. ತಂತಿ, ಸಿ.ಡಿ ಬಳಸಿಕೊಂಡು ಪೆನ್‌ ಸ್ಟ್ಯಾಂಡ್‌ ಮಾಡುವುದನ್ನು ಮಕ್ಕಳು ಆಸಕ್ತಿಯಿಂದ ಕಲಿತರು. ತಂತಿಯನ್ನು ಬಗ್ಗಿಸಲು ಕಷ್ಟ ಪಡುತ್ತಿದ್ದ ಮಕ್ಕಳಿಗೆ ಪೋಷಕರು ನೆರವಾದರು.

ತಯಾರಿಸಿದ್ದ ಪೆನ್‌ ಸ್ಟ್ಯಾಂಡ್‌ ಹಿಡಿದು ಹೊರಟ ಮಕ್ಕಳಿಗೆ ತಡೆದು ನಿಲ್ಲಿಸಿದ್ದು, ಆಹಾರದಲ್ಲಿರುವ ಸಾರಜನಕ ಪರೀಕ್ಷೆ ಮಾಡುವ ಪ್ರಯೋಗ.

ಪರೀಕ್ಷೆ ಮಾಡಬೇಕಾದ ಆಹಾರ ಪದಾರ್ಥವನ್ನು ಗಾಜಿನ ನಳಿಕೆಯಲ್ಲಿ ಹಾಕಿ, ಅದಕ್ಕೆ ಸೋಡಿಯಂ ಹೈಡ್ರಾಕ್ಸೈಡ್‌ ಹಾಗು ಕಾಪರ್‌ ಸಲ್ಫೇಟ್‌ ಹನಿಗಳನ್ನು ಹಾಕಿದಾಗ ಅದು ನೇರಳೆ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಪ್ರೊಟೀನ್‌ ಇರುವುದು ತಿಳಿಯುತ್ತದೆ ಎಂದು ಅಲ್ಲಿದ್ದ ಪ್ರತಿನಿಧಿ ವಿವರಿಸಿದರು. ಅದರಂತೆ ಮಕ್ಕಳು ಸೌತೆಕಾಯಿ, ಬಿಸ್ಕತ್‌, ಕಡಲೆಹಿಟ್ಟು... ಹೀಗೆ ಮನೆಯಲ್ಲಿ ಬಳಸುವ ಪದಾರ್ಥಗಳಿಂದ ಪ್ರಯೋಗಗಳನ್ನು ಮಾಡಿದರು. ಇಲ್ಲಿ ಮಕ್ಕಳೊಂದಿಗೆ ಪೋಷಕರು ಸಹ ವಿಜ್ಞಾನದ ಹೊಸ ಹೊಸ ಪಾಠಗಳನ್ನು ಕಲಿತುಕೊಂಡರು.

ಹಾಗೆಯೇ ಸ್ಪಿನ್ನಿನ್ ಮೋಟಾರ್‌, ಬ್ಯಾಟರಿ ಮಾಡುವುದು, ಹೈಡ್ರಾಲಿಸಿಸ್‌ ಪ್ರಕ್ರಿಯೆ ತಿಳಿಸುವುದು, ಪುಟ್ಟದಾದ ಸೂಕ್ಷ್ಮದರ್ಶಕ ತಯಾರಿಸುವ
ಪ್ರಾತ್ಯಕ್ಷಿಕೆಗಳು ಮಕ್ಕಳನ್ನು ವಿಜ್ಞಾನದ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋದವು. ಈ ಕಾರ್ಯಕ್ರಮವನ್ನು ಮನಸಾರೆ ಹೊಗಳಿದ ಪೋಷಕರು, ಮತ್ತೊಮ್ಮೆ ಯಾವಾಗ ‘ಮುಕ್ತ ದಿನ’ವನ್ನು ಆಯೋಜಿಸುತ್ತೀರಿ ಎಂದು ತಿಳಿದುಕೊಳ್ಳುವುದನ್ನು ಮರೆಯಲಿಲ್ಲ.

ಸಂಭ್ರಮದಿಂದ ಕಲಿತ ಮಕ್ಕಳು

ಶಾಲೆಗಿಂತ ಬೇರೆಯದ್ದೇ ಲೋಕವನ್ನು ಇಲ್ಲಿ ಕಂಡೆ. ದಿನವೂ ಹೀಗೆ ಕಲಿಯುವುದಾದರೆ ಎಷ್ಟು ಚೆಂದ ಇರುತ್ತದೆ ಎಂದೂ ಅಂದುಕೊಂಡೆ.
–ಹಿತಾ ನಯನ, 3ನೇ ತರಗತಿ

*
ಪ್ಯಾರಾಚೂಟ್‌ ಮಾಡುವುದನ್ನು ಕಲಿತದ್ದು ಖುಷಿಯಾಯ್ತು. ನನ್ನ ಸ್ನೇಹಿತರಿಗೂ ಇದನ್ನು ಹೇಳಿಕೊಡುತ್ತೇನೆ.
–ಅಭಿರ್‌, 5ನೇ ತರಗತಿ

*
ಸುಲಭವಾಗಿ ಕುಂಕುಮ ತಯಾರಿಸುವುದು ಕಲಿತೆ. ಲಿಪ್‌ ಬಾಮ್‌ ಅನ್ನು ಮನೆಯಲ್ಲಿಯೇ ಮಾಡಬಹುದು ಎಂದು ಗೊತ್ತೇ ಇರಲಿಲ್ಲ.
–ಟಿಯರಾ, 6ನೇ ತರಗತಿ

*
ಸ್ಪಿನ್ನಿಂಗ್‌ ಬ್ಯಾಟರಿ ಮಾಡಿದ್ದು, ಸೆಲ್‌ ತಯಾರಿಕೆ ಇಷ್ಟ ಆಯ್ತು. ಇಲ್ಲಿಗೆ ಬಂದದ್ದು ಕಾಡಿನ ಬಂದ ಅನುಭವ ನೀಡಿತು.
–ಆದಿತ್ಯ, 5ನೇ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.