ADVERTISEMENT

ವಿದೇಶಕ್ಕೆ ಮಕ್ಕಳ ಸಾಗಣೆ: ಅಮೆರಿಕಕ್ಕೆ ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:52 IST
Last Updated 10 ಫೆಬ್ರುವರಿ 2016, 19:52 IST

ಬೆಂಗಳೂರು: ‘ಮಕ್ಕಳ ಸಾಗಣೆ’ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸದ್ಯದಲ್ಲೇ ವಿಶೇಷ ತಂಡವೊಂದನ್ನು ಅಮೆರಿಕಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್  ಸುದ್ದಿಗಾರರಿಗೆ ತಿಳಿಸಿದರು.

‘ಅಮೆರಿಕಕ್ಕೆ ಮಕ್ಕಳ ಸಾಗಣೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬಂಧಿಸಲಾಗಿದ್ದ 16 ಮಂದಿಯ ವಿಚಾರಣೆ ಬುಧವಾರದಿಂದ ಆರಂಭವಾಗಿದೆ. ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.  ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ವಿಶೇಷ ತಂಡವೊಂದನ್ನು ಅಮೆರಿಕಕ್ಕೆ ಕಳುಹಿಸಲಾಗುವುದು’ ಎಂದು ಹೇಳಿದರು.

‘ಗುಜರಾತ್, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳ 10 ರಿಂದ 14 ವರ್ಷದೊಳಗಿನ 25 ಮಕ್ಕಳನ್ನು ಅಮೆರಿಕಕ್ಕೆ ಸಾಗಣೆ ಮಾಡಲಾಗಿದೆ. ಗಂಭೀರ ಪ್ರಕರಣವಾದ ಕಾರಣ ಆ ರಾಜ್ಯಗಳ ಪೊಲೀಸರನ್ನೂ ತನಿಖೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ಹೆಚ್ಚಿನ ಮಕ್ಕಳು ಇವರ ಮೂಲಕ ವಿದೇಶಕ್ಕೆ ಹೋಗಿರುವ ಅನುಮಾನ ವ್ಯಕ್ತವಾಗಿದ್ದು, ಅದೇ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ’ ಎಂದು  ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅಮೆರಿಕದಲ್ಲಿ ಅಕ್ರಮವಾಗಿ ವಾಸವಾಗಿರುವ ಪೋಷಕರು, ಭಾರತದಲ್ಲಿರುವ ತಮ್ಮ ಮಕ್ಕಳನ್ನು ಕಳ್ಳ ಮಾರ್ಗದ ಮೂಲಕ ಕರೆಸಿಕೊಳ್ಳುತ್ತಿದ್ದರು ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅದೇ ಅಂತಿಮವಲ್ಲ. ಮಕ್ಕಳನ್ನು ಅಪಹರಿಸಿ ಸಾಗಣೆ ಮಾಡಿರುವ ಸಾಧ್ಯತೆ ಕೂಡ ಇದೆ’ ಎಂದು ಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.