ADVERTISEMENT

ವಿದ್ಯಾರ್ಥಿಗಳ ಗೊಂದಲ – ತಜ್ಞರಿಂದ ಪರಿಹಾರ

​ಪ್ರಜಾವಾಣಿ ವಾರ್ತೆ
Published 28 ಮೇ 2017, 20:04 IST
Last Updated 28 ಮೇ 2017, 20:04 IST
ವಿದ್ಯಾರ್ಥಿಗಳು ಮತ್ತು ಪೋಷಕರು ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದರು
ವಿದ್ಯಾರ್ಥಿಗಳು ಮತ್ತು ಪೋಷಕರು ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದರು   

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ), ಕಾಮೆಡ್‌–ಕೆ ಮೂಲಕ ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು, ಈ ಪ್ರಕ್ರಿಯೆ ಹೇಗಿರುತ್ತದೆ ಎಂಬ ಕುರಿತು ವಿದ್ಯಾರ್ಥಿಗಳನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯಿತು. 

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಆಯೋಜಿಸಿದ್ದ ‘ಎಡ್ಯುವರ್ಸ್‌ ಜ್ಞಾನದೇಗುಲ’ ಶೈಕ್ಷಣಿಕ ಮೇಳದ ಎರಡನೇ ದಿನ ಭಾನುವಾರ ನಡೆದ ಸಿಇಟಿ ಮತ್ತು ಕಾಮೆಡ್‌–ಕೆ ಕುರಿತ ವಿಚಾರಗೋಷ್ಠಿಯು ವಿದ್ಯಾರ್ಥಿಗಳ ಗೊಂದಲ ಪರಿಹರಿಸಲು ಅವಕಾಶ ಕಲ್ಪಿಸಿತು.

ದೂರದ ಬೆಳಗಾವಿಯಿಂದ ಮೇಳಕ್ಕೆ ಬಂದಿದ್ದ ಸುರೇಶ್‌ ಅಕ್ಕೋಲೆ, ‘ನಾನು ಜೈನ ಧರ್ಮದವ. ಕಾಮೆಡ್‌–ಕೆಯಲ್ಲಿ ಅಲ್ಪಸಂಖ್ಯಾತರ ಕೋಟಾದಲ್ಲಿ ಸೀಟು ಪಡೆಯಲು ಬಯಸಿದ್ದೆ. ಆದರೆ, ಕೇವಲ ಮೂರು ಧರ್ಮಗಳಿಗಷ್ಟೆ ಇಲ್ಲಿ ಆಯ್ಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಆ ಆಯ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೇನಾದರೂ ಪರಿಹಾರ ಇದೆಯಾ’ ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಕಾಮೆಡ್‌– ಕೆ ಸೀಟು ಹಂಚಿಕೆ ಪ್ರಕ್ರಿಯೆ ಸಮಿತಿ ಸದಸ್ಯ  ಪ್ರೊ.ವೈ.ಎಸ್. ರಾಮ ರಾವ್‌, ‘ಅಲ್ಪಸಂಖ್ಯಾತರ ಕೋಟಾದಲ್ಲಿ ಏಕೆ ಹೆಚ್ಚು ಆಯ್ಕೆಗಳನ್ನು ನೀಡಿಲ್ಲ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ನಿಮ್ಮ ಈ ಸಲಹೆಯನ್ನು ಸಂಘದ ಪ್ರಮುಖರೊಂದಿಗೆ ಚರ್ಚಿಸುತ್ತೇನೆ’ ಎಂದರು.

‘ಮೊದಲ ಹಂತದಲ್ಲಿ ಕಾಮೆಡ್‌–ಕೆ ಮೂಲಕ ಆಯ್ಕೆ ಮಾಡಿಕೊಂದ ಸೀಟು  ಬೇಡವೆಂದರೆ ವಾಪಸ್‌ ಮಾಡಬಹುದೇ? ಹಣ ಮರುಪಾವತಿ ಆಗುತ್ತದೆಯೇ’ ಎಂದು ವಿದ್ಯಾರ್ಥಿನಿ ತೇಜಸ್ವಿನಿ ಪ್ರಶ್ನಿಸಿದರು.

(ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು  –ಪ್ರಜಾವಾಣಿ ಚಿತ್ರಗಳು)

ರಾಮ ರಾವ್‌, ‘ಎರಡು ಹಂತಗಳಲ್ಲಿ ಕಾಮೆಡ್‌–ಕೆ ಸೀಟು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡ ಸೀಟು   ಬೇಡವೆಂದಾದರೆ, ಎರಡನೇ ಹಂತಕ್ಕೆ ಹೋಗುವ ಮೊದಲೇ ಅದನ್ನು ವಾಪಸ್‌ ಮಾಡಬೇಕು. ಆಗ ಮಾತ್ರ ನಿಮ್ಮ ಹಣ ವಾಪಸ್‌ ಸಿಗುತ್ತದೆ. ಆದರೆ, ಎರಡನೇ ಹಂತಕ್ಕೆ ಹೋದ ಮೇಲೆ ಈ ಆಯ್ಕೆ ಇರುವುದಿಲ್ಲ. ಸಿಇಟಿ ಅಥವಾ ನೀಟ್‌  ಅಡಿ ಸೀಟು ಪಡೆಯಲು ಪ್ರಯತ್ನಿಸುವವರು  ಕಾಮೆಡ್‌– ಕೆ ಸೀಟು ಹಿಂತಿರುಗಿಸುವುದು ಒಳ್ಳೆಯದು.   ಏಕೆಂದರೆ, ಬೇರೆಡೆ ಸೀಟು ಸಿಗದಿದ್ದರೂ  ಕಾಮೆಡ್‌–ಕೆ ಎರಡನೇ ಹಂತದಲ್ಲಿ ಭಾಗವಹಿಸುವ ಅವಕಾಶವಿದೆ’ ಎಂದು ವಿವರಿಸಿದರು.

ಪೋಷಕರಾದ ಎಂ. ಸೂರ್ಯನಾರಾಯಣ, ‘ಕಾಮೆಡ್‌–ಕೆ ಸೀಟು ಆಯ್ಕೆಗೆ ಪಿಯುಸಿ ಅಂಕಗಳನ್ನು ಪರಿಗಣಿಸಲಾಗುತ್ತದೆಯೇ’ ಎಂಬ ಪ್ರಶ್ನೆಗೆ ರಾಮ ರಾವ್‌, ‘ಇಲ್ಲಿ ಕೇವಲ ಕಾಮೆಡ್‌–ಕೆ ರ್‌್ಯಾಂಕಿಂಗ್‌ ಮೇಲೆ ಸೀಟು ನೀಡಲಾಗುತ್ತದೆ’ ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌.ರವಿ, ‘ದಾಖಲೆಗಳ ಪರಿಶೀಲನೆ ಜೂನ್‌ 21ರವರೆಗೆ ನಡೆಯುತ್ತದೆ.

ಪ್ರಮುಖವಾಗಿ ಸಿಇಟಿ ಪರೀಕ್ಷೆ ಪ್ರಮಾಣ ಪತ್ರ, ಪ್ರವೇಶ ಪತ್ರ, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ದ್ವಿತೀಯ ಪಿಯು ತಾತ್ಕಾಲಿಕ ಅಂಕಪಟ್ಟಿ, ರಾಜ್ಯದಲ್ಲಿ ಏಳು ವರ್ಷ ವ್ಯಾಸಂಗ ನಡೆಸಿದ ಕುರಿತು ಬಿಇಒ ಸಹಿ  ಹೊಂದಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಮೀಸಲಾತಿ ಅಡಿ ಸೀಟು ಪಡೆಯುವವರು ಜಾತಿ  ಮತ್ತು ಆದಾಯ ಪ್ರಮಾಣಪತ್ರವನ್ನು ನೀಡಬೇಕು. ದಾಖಲೆ ಪರಿಶೀಲನೆಗೆ ಹೋಗುವ ಮೊದಲು ಎಲ್ಲವನ್ನು ದಾಖಲೆಗಳನ್ನು ಪರೀಕ್ಷಿಸಿಕೊಳ್ಳಬೇಕು’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿ ದೀಪಕ್‌, ‘ಮರು ಮೌಲ್ಯಮಾಪನದ ಫಲಿತಾಂಶದಲ್ಲಿ ಹಿಂದಿನ ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದರೆ, ಸಿಇಟಿ ರ್‌್ಯಾಂಕಿಂಗ್‌ ಕೂಡ ಬದಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರವಿ, ‘ಸಿಇಟಿ ಸೀಟು ಆಯ್ಕೆ ಪ್ರಕ್ರಿಯೆ ಮುಗಿಯುವ ಮುನ್ನವೇ ಮರುಮೌಲ್ಯಮಾಪನದ ಫಲಿತಾಂಶಗಳು ಬರುತ್ತವೆ. ಅದರ ಆಧಾರದಲ್ಲಿ  ರ್‌್ಯಾಂಕಿಂಗ್‌ ಪಟ್ಟಿಯನ್ನು ಪರಿಷ್ಕರಿಸುತ್ತೇವೆ. ಹಾಗಾಗಿ ವಿದ್ಯಾರ್ಥಿಗಳು  ಭಯ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪೋಷಕರಾದ ಚಂದ್ರಶೇಖರ್‌, ‘ವಿದ್ಯಾರ್ಥಿಯ ಪೋಷಕರಲ್ಲಿ ಒಬ್ಬರು ಹೈದರಾಬಾದ್‌ ಕರ್ನಾಟಕದಲ್ಲಿ ಓದಿದ್ದು, ಈಗ ಬೇರೆಡೆ ವಾಸಿಸುತ್ತಿದ್ದರೆ, ಅವರು  ಹೈ–ಕ ಕೋಟಾದಲ್ಲಿ ಮೀಸಲಾತಿ ಪಡೆಯಬಹುದೇ’ ಎಂದು ಪ್ರಶ್ನಿಸಿದರು.

ರವಿ, ‘ಹೈ–ಕ ಕೋಟಾದಲ್ಲಿ ಮೀಸಲಾತಿ ಬೇಕು ಎಂಬ ಬಗ್ಗೆ ಸಿಇಟಿ ಅರ್ಜಿಯಲ್ಲಿ ನಮೂದಿಸಿದ್ದರೆ ಖಂಡಿತವಾಗಿ ಅದರಡಿ ಸೀಟು ಪಡೆಯಬಹುದು.  ಆದರೆ ಅದಕ್ಕೆ ತಕ್ಕ ಪ್ರಮಾಣೀಕರಣ ಪತ್ರ  ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

ಮೀಸಲಾತಿಗೆ ಅನುಗುಣವಾಗಿ ಸಿಇಟಿ ರ್‌್ಯಾಂಕಿಂಗ್‌ ಪ್ರಕಟಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರವಿ, ‘ಸಿಇಟಿ ಅಂಕಗಳ ಆಧಾರದ ಮೇಲೆಯೇ ರ್‌್ಯಾಂಕಿಂಗ್‌ ಪ್ರಕಟಿಸುತ್ತೇವೆ.  ಸೀಟು ಆಯ್ಕೆ ವೇಳೆ ಮಾತ್ರ ಮೀಸಲಾತಿಯನ್ನು ಪರಿಗಣಿಸುತ್ತೇವೆ’ ಎಂದರು.

ಗೋಷ್ಠಿ  ಮುಗಿದ ನಂತವೂ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಪನ್ಮೂಲ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಿ  ಗೊಂದಲಗಳನ್ನು ನಿವಾರಿಸಿಕೊಂಡರು.

**

₹1,500ಕ್ಕೆ ವಿಮಾನ ಸಿದ್ಧ...

ಶೈಕ್ಷಣಿಕ ಮೇಳದಲ್ಲಿ ಮಳಿಗೆ ಹೊಂದಿದ್ದ ಕೆಎನ್‌ಎಸ್‌ ತಾಂತ್ರಿಕ ಕಾಲೇಜು ತಮ್ಮ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದ ಮಾನವರಹಿತ ವಿಮಾನವನ್ನು ಪ್ರದರ್ಶಿಸಿದ್ದು, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.  ₹1500ರಲ್ಲಿ ತಯಾರಿಸಬಹುದಾದ ಈ ವಿಮಾನವನ್ನು ಕಣ್ಗಾವಲು ಹಾಗೂ ಸರಕು ಸಾಗಣೆ ಉದ್ದೇಶಕ್ಕೆ ಬಳಸಬಹುದು.

ಇನಾಯತುಲ್ಲ, ದೇವವ್ರತ ಮೊಂಡಲ್, ಪ್ರೇಮ್‌ಕುಮಾರ್‌ ಸಿಂಗ್‌ ಮತ್ತು ಸೈಯದ್‌ ಜುನೈದ್‌ ಅವರ ತಂಡ  ಇದನ್ನು ಅಭಿವೃದ್ಧಿಪಡಿಸಿದೆ. ‘ಪಾಲಿಮರ್‌ಗಳಿಂದ ಪ್ರಾಯೋಗಿಕವಾಗಿ ರೂಪಿಸಿರುವ ಈ ವಿಮಾನ 350 ಗ್ರಾಂ ಸರಕನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 45 ಕಿ.ಮೀ ವೇಗದಲ್ಲಿ ಸಾಗುತ್ತದೆ’ ಎಂದು ವಿದ್ಯಾರ್ಥಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.