ADVERTISEMENT

ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರ

ಶುದ್ದ ಕುಡಿಯುವ ನೀರಿಗೆ ಬಾಲಕಿಯರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:18 IST
Last Updated 4 ಡಿಸೆಂಬರ್ 2016, 20:18 IST
ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರ
ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರ   

ಬೆಂಗಳೂರು: ಮಹದೇಪವುರ ಕ್ಷೇತ್ರದ ಅವಲಹಳ್ಳಿಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶುದ್ಧ ಕುಡಿಯುವ ನೀರು  ಪೂರೈಸುತ್ತಿಲ್ಲ ಹಾಗೂ ಊಟವನ್ನು ಸರ್ಕಾರಿ ಮಾರ್ಗಸೂಚಿ ಪ್ರಕಾರ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಈ ಬಗ್ಗೆ  ದೂರು ಬಂದಿದ್ದರಿಂದ  ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಕೆಂಪರಾಜ್  ಅವರು ಶನಿವಾರ   ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗಲೂ ಕೆಲವು ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಂಡರು.  

‘ಒಂದು ಕೊಠಡಿಯಲ್ಲಿ 8 ವಿದ್ಯಾರ್ಥಿನಿಯರು ಉಳಿದುಕೊಳ್ಳುತ್ತಿದ್ದೇವೆ. ಆರೇಳು ತಿಂಗಳಿಂದ ಕುಡಿಯಲು ಶುದ್ಧ ನೀರಿಲ್ಲ. ಫೀಲ್ಡರ್ ಯಂತ್ರ ಹಾಗೂ ಕುಡಿಯುವ ನೀರಿನ ತೊಟ್ಟಿ ಕೆಟ್ಟು ಹೋಗಿ ತುಕ್ಕು ಹಿಡಿದಿವೆ. ಹಾಗಾಗಿ ಅನಿವಾರ್ಯವಾಗಿ ಸ್ವಂತ ಖರ್ಚಿನಿಂದ ಹೊರಗಿನಿಂದ ಕುಡಿಯುವ ನೀರನ್ನು ಕೊಂಡುಕೊಳ್ಳುವಂತಾಗಿದೆ’ ಎಂದು  ವಿದ್ಯಾರ್ಥಿನಿಯೊಬ್ಬರು ಹೇಳಿದರು.

‘ದಿನವೂ ತಣ್ಣೀರನ್ನು ಸ್ನಾನಕ್ಕೆ ಬಳಸಲಾಗುತ್ತಿದೆ. ಬಿಸಿನೀರಿನ ವ್ಯವಸ್ಥೆ ಇಲ್ಲ. ಪ್ರತಿಯೊಬ್ಬರಿಗೆ 150 ಗ್ರಾಮ ಅಕ್ಕಿಯ ಅನ್ನವನ್ನು ನೀಡಬೇಕು. ಆದರೆ ಕೇವಲ 100 ಗ್ರಾಮ ಅಕ್ಕಿಯ ಅನ್ನವನ್ನು ನೀಡಲಾಗುತ್ತಿದೆ. ಇಂತಿಷ್ಟು ಬಗೆಯ ತಿನಿಸುಗಳನ್ನು ನೀಡಬೇಕೆಂದು ಇಲಾಖೆಯ ಸೂಚನೆ ಇದೆ. ಆದರೂ  ಅದರ ಪ್ರಕಾರ ಅಡುಗೆ ಮಾಡುವುದಿಲ್ಲ. ಈ ಬಗ್ಗೆ ಆಕ್ಷೇಪಿಸಿದರೆ  ಹಾಕುವುದನ್ನು ತಿನ್ನಿ ಎಂದು ಮೇಲ್ವಿಚಾರಕರು  ಬೈಯುತ್ತಾರೆ’ ಎಂದು  ಇನ್ನೊಬ್ಬ ವಿದ್ಯಾರ್ಥಿನಿ ಬೇಸರದಿಂದ ನುಡಿದರು.

‘ಎಲ್ಲೂ ಕಸದ ತೊಟ್ಟಿಯನ್ನು ಇಟ್ಟಿಲ್ಲ. ಅಲ್ಲದೆ ಅಡುಗೆ ಕೊಠಡಿಯನ್ನು ಸ್ವಚ್ಛವಾಗಿ ಇಟ್ಟಿಲ್ಲ. ಕಸದ ರಾಶಿ ತುಂಬಿರುತ್ತದೆ. ತರಕಾರಿ ಕೊಳೆತು ನಾರುತ್ತಿರುತ್ತವೆ.  ತಿಂಗಳಿಗೊಮ್ಮೆ ಮಾತ್ರ ಕೋಳಿ ಸಾರು ಮಾಡಲಾಗುತ್ತದೆ. ಅದನ್ನೂ ಸರಿಯಾಗಿ ಬೇಯಿಸಿರುವುದಿಲ್ಲ. ಆ ಬಗ್ಗೆ ಪ್ರಶ್ನಿಸಿದರೆ,  ಮುಂದಿನ ತಿಂಗಳಿಂದ ಅದನ್ನೂ  ನೀಡುವುದಿಲ್ಲ’ ಎಂದು ಅಡುಗೆಯವರು ದಬಾಯಿಸುತ್ತಾರೆ ಎಂದು ವಿದ್ಯಾರ್ಥಿನಿಯೊಬ್ಬರು ದೂರಿದರು. ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ ಕೆಂಪರಾಜ್‌ ವಿದ್ಯಾರ್ಥಿನಿಲಯದ ಸಮಸ್ಯೆ ಬಗೆಹರಿಸುವಂತೆ  ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.