ADVERTISEMENT

ವಿದ್ಯುತ್‌ ಉತ್ಪಾದನೆ: ಸ್ವಾವಲಂಬನೆ ಸಾಧಿಸಲು ಹೆಜ್ಜೆ ಹಾಕಿ– ಸಿ.ಎಂ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 20:17 IST
Last Updated 20 ಜುಲೈ 2017, 20:17 IST
ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ರಮ್ಯಾ ಅವರನ್ನು ಸಿದ್ದರಾಮಯ್ಯ ಪುರಸ್ಕರಿಸಿದರು. ಜಿ. ಕುಮಾರ್‌ ನಾಯಕ್‌, ಡಿ.ಕೆ. ಶಿವಕುಮಾರ್‌ ಇದ್ದರು  –ಪ್ರಜಾವಾಣಿ ಚಿತ್ರ
ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ರಮ್ಯಾ ಅವರನ್ನು ಸಿದ್ದರಾಮಯ್ಯ ಪುರಸ್ಕರಿಸಿದರು. ಜಿ. ಕುಮಾರ್‌ ನಾಯಕ್‌, ಡಿ.ಕೆ. ಶಿವಕುಮಾರ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿದ್ಯುತ್‌ ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡುವ ಹಾಗೂ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ಕರ್ನಾಟಕ ವಿದ್ಯುತ್‌ ನಿಗಮ ಹೆಜ್ಜೆ ಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕರ್ನಾಟಕ ವಿದ್ಯುತ್‌ ನಿಗಮ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘48ನೇ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೊರಗಡೆಯಿಂದ ವಿದ್ಯುತ್‌ ಖರೀದಿಸುವ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಲ್ಲದೆ, ಕೃಷಿ, ಕೈಗಾರಿಕೆಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುವ ಶಕ್ತಿಯನ್ನು ಸಾಧಿಸಬೇಕು’ ಎಂದು ಹೇಳಿದರು.

ADVERTISEMENT

ಇಂಧನ ಸಚಿವ ಡಿ.ಕೆ. ಶಿವಕುಮಾರ್‌, ‘130 ತಾಲ್ಲೂಕುಗಳಲ್ಲಿ 20 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿ, ಅಲ್ಲಿಗೇ ಪೂರೈಸುವ ಯೋಜನೆ 15 ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಪ್ರಾರಂಭವಾಗಲಿದೆ. ಈಗಾಗಲೇ 40 ತಾಲ್ಲೂಕುಗಳಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.

‘ಮುಂದಿನ ದಿನದಲ್ಲಿ ಸೌರ, ಪವನ, ಕಲ್ಲಿದ್ದಲು ಎಲ್ಲಾ ಶಕ್ತಿ ಮೂಲಗಳನ್ನು ಬಳಸಿಕೊಂಡು ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದಿಸುತ್ತೇವೆ’ ಎಂದರು.

‘ಪ್ರತಿವರ್ಷವೂ ಬೆಂಗಳೂರಿನಲ್ಲಿಯೇ ಸಂಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ಬಿಡಬೇಕು. ಸ್ಥಾವರಗಳಲ್ಲಿ ಕೆಲಸ ಮಾಡುವವರು ಪಾಲ್ಗೊಳ್ಳುವಂತೆ ರಾಜ್ಯದ ವಿವಿಧೆಡೆ ಕಾರ್ಯಕ್ರಮ ನಡೆಸಬೇಕು’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ: 25 ವರ್ಷದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿ ಹಾಗೂ ಘಟಕಕ್ಕೆ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ನೇರ ನೇಮಕಾತಿಗೆ ಅಧಿಸೂಚನೆ
‘ನಿಗಮದಲ್ಲಿ ಕಾರ್ಮಿಕರ ಹುದ್ದೆಗಳಿಗೆ 1992ರಿಂದ ನೇರ ನೇಮಕಾತಿ ನಡೆದಿಲ್ಲ. ಪ್ರಸಕ್ತ ಸಾಲಿನಲ್ಲಿ ಒಟ್ಟು 745 ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸುತ್ತೇವೆ’ ಎಂದು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರ್‌ ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.