ADVERTISEMENT

ವಿದ್ಯುತ್‌ ಕ್ಷಮತೆ ಹೆಚ್ಚಳಕ್ಕೆ ಸ್ಮಾರ್ಟ್‌ ಗ್ರಿಡ್‌

ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುಂಪು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ಬೆಂಗಳೂರು: ‘ವಿದ್ಯುತ್‌ ಪ್ರಸರಣ ಸಾಮರ್ಥ್ಯ ಹೆಚ್ಚಿಸಲು ಹೆಚ್ಚಿನ ಬಂಡವಾಳ ಹೂಡಬೇಕಾದ ಹಾಗೂ ವಿದ್ಯುತ್‌ ಕ್ಷಮತೆ ಹೆಚ್ಚಿಸಲು ದೇಶದಾದ್ಯಂತ ಸ್ಮಾರ್ಟ್‌ ಗ್ರಿಡ್‌ಗಳನ್ನು ಸ್ಥಾಪಿಸಬೇಕಾದ  ಅಗತ್ಯ ಇದೆ’ ಎಂದು ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆಯ (ಟೆರಿ)  ಸುಸ್ಥಿರ ಅಭಿವೃದ್ಧಿ ಗುಂಪು ಸಲಹೆ ನೀಡಿದೆ.  

ಇಂಧನ ಕ್ಷೇತ್ರದಲ್ಲಿ ಆಗುತ್ತಿರುವ ಭಾರಿ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿ ಗುಂಪು ಇದೇ 27ರಂದು ನಡೆದ ಮೊದಲ ಸಭೆಯಲ್ಲಿ ಇಂಧನ ತಜ್ಞರಾದ ಕೆ.ರಾಮನಾಥನ್‌, ಹರಿಪ್ರಕಾಶ್‌ ಹೆಗ್ಡೆ ಹಾಗೂ ಎಂ.ಆರ್‌.ಶ್ರೀನಿವಾಸ ಮೂರ್ತಿ ದೇಶದಲ್ಲಿ ವಿದ್ಯುತ್ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ  ಕೆಲವು ಸಲಹೆ ನೀಡಿದ್ದಾರೆ.

‘ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ನೀಗಿಸಲು  ನವೀಕರಿಸಬಲ್ಲ ಇಂಧನ ಮೂಲದಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಾಗಬೇಕು. ಇದರ ನಿರ್ವಹಣೆಗೆ ಸ್ಮಾರ್ಟ್‌ ಗ್ರಿಡ್‌ನ ಅಗತ್ಯ ಇದೆ.  ನವೀಕರಿಸುವ ಇಂಧನ ಮೂಲದಿಂದ ವಿದ್ಯುತ್‌ ಯಾವಾಗ ಲಭಿಸುತ್ತದೆ ಎಂಬುದನ್ನು ಮುಂಚಿತವಾಗಿ ಹಾಗೂ ನಿಖರವಾಗಿ ಗ್ರಹಿಸುವ ವ್ಯವಸ್ಥೆ ಬರಬೇಕು. ವಿದ್ಯುತ್‌ ಸಂಗ್ರಹ, ಪೂರೈಕೆಗೆ ಇನ್ನಷ್ಟು ಚತುರ ತಂತ್ರಜ್ಞಾನಗಳನ್ನು ಬಳಸಬೇಕು’ ಎಂದು ತಜ್ಞರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬ್ಯಾಂಕ್‌ಗಳು ದೇಶದಲ್ಲಿ ವಿದ್ಯುತ್‌ ಪೂರೈಕೆ ಮೂಲಸೌಕರ್ಯಗಳಿಗೆ ನೀಡಿದ ಸಾಲದ ಪೈಕಿ  ₹ 5.8 ಲಕ್ಷ ಕೋಟಿ  ಪಾವತಿ ಬಾಕಿ ಇದೆ.   ತಾಂತ್ರಿಕ ಮತ್ತು ವಾಣಿಜ್ಯ ನಷ್ಟದ ಪ್ರಮಾಣ  ಶೇಕಡಾ 22.7ರಷ್ಟು ಇದೆ. ಅನ್ಯ ದೇಶಗಳಿಗೆ ಹೋಲಿಸಿದರೆ ಇದು ತುಂಬಾ ಜಾಸ್ತಿ. ಪ್ರಸರಣ ಮತ್ತು ಪೂರೈಕೆ ಸಾಮರ್ಥ್ಯ ಹೆಚ್ಚಿಸುವ ಮೂಲಸೌಕರ್ಯ ಹೆಚ್ಚಳ ಮಾಡಲು ಸಾಕಷ್ಟು ಬಂಡವಾಳ ಹೂಡದಿರುವುದು ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. 

ಕೃಷಿಗೆ ಉಚಿತ ವಿದ್ಯುತ್‌– ಆಕ್ಷೇಪ: ಅನೇಕ ರಾಜ್ಯಗಳು ಕೃಷಿಗೆ ಉಚಿತ ವಿದ್ಯುತ್‌ ಕೊಡುತ್ತಿವೆ. ರೈತರು ಮಣ್ಣಿನ ಗುಣಕ್ಕೆ ಹೊಂದಿಕೊಳ್ಳದ ಬೆಳೆಯನ್ನು  ಬೆಳೆಯುವುದಕ್ಕೆ, ತನ್ಮೂಲಕ ಮಣ್ಣಿನ ಫಲವತ್ತತೆ ನಾಶಕ್ಕೆ ಇದು ಕಾರಣವಾಗುತ್ತಿದೆ. ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿಯುತ್ತಿದೆ.  

ಇದನ್ನು ತಪ್ಪಿಸಲು ಹಸಿರು ನ್ಯಾಯಮಂಡಳಿಯ  ಮೊರೆ ಹೋಗಬೇಕು ಎಂಬ ಸಲಹೆಯೂ ಸಭೆಯಲ್ಲಿ ವ್ಯಕ್ತವಾಯಿತು.  ನೀರಾವರಿ ಪಂಪ್‌ಸೆಟ್‌ಗಳಿಗೆ  ಗುಣಮಟ್ಟವನ್ನು ನಿಗದಿಪಡಿಸಬೇಕಾದ ಅಗತ್ಯವಿದೆ.  ವಿದ್ಯುತ್‌ ಕಳ್ಳತನಕ್ಕೆ ಭಾರಿ ಪ್ರಮಾಣದ ದಂಡ ವಿಧಿಸಬೇಕು ಎಂದು ತಜ್ಞರು ಸಲಹೆ ನೀಡಿದರು.  

ವಿದ್ಯುತ್ ಪೂರೈಕೆಯ ಉಸ್ತುವಾರಿಯನ್ನು ಸಾಮಾನ್ಯ ಆಡಳಿತಾಧಿಕಾರಿಗಳ ಬದಲು  ವೃತ್ತಿಪರರು ನೋಡಿಕೊಳ್ಳಬೇಕು. ನಿವೃತ್ತ ಅಧಿಕಾರಿಗಳನ್ನು ವಿದ್ಯುತ್‌ ನಿಯಂತ್ರಕರನ್ನಾಗಿ ನೇಮಿಸುವ   ಪರಿಪಾಠ ಬದಲಾಗಬೇಕು. ವಿದ್ಯುತ್‌ ನಿಯಂತ್ರಕರನ್ನು ಆಯ್ಕೆ ಮಾಡಲು  ಸಮಿತಿಯನ್ನು ರಚಿಸಬೇಕು  ಎಂಬ ಸಲಹೆಯೂ ವ್ಯಕ್ತವಾಯಿತು.

*
ಏನಿದು ಸುಸ್ಥಿರ ಅಭಿವೃದ್ಧಿ ಗುಂಪು

ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ  (ಟೆರಿ) ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ಸಲುವಾಗಿ  ಬೆಂಗಳೂರು ಸುಸ್ಥಿರ ಅಭಿವೃದ್ಧಿ ಗುಂಪನ್ನು ಇತ್ತೀಚೆಗೆ ಸ್ಥಾಪಿಸಿದೆ. ವಿವಿಧ ಕ್ಷೇತ್ರಗಳ ತಜ್ಞರು ಈ ಗುಂಪಿನ ಸದಸ್ಯರಾಗಿದ್ದಾರೆ.

ಸಂಸ್ಥೆಯು ಅಕ್ಟೋಬರ್‌ 5ರಿಂದ 8ರವರೆಗೆ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ದೆಹಲಿಯಲ್ಲಿ ಆಯೋಜಿಸಲು ಉದ್ದೇಶಿಸಿದೆ. ಈ ಕುರಿತು ಸಮಾನ ಮನಸ್ಕ ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಲು ಬೆಂಗಳೂರಿನಲ್ಲಿ ಗುಂಪನ್ನು ರಚಿಸಲು ನಿರ್ಧರಿಸಲಾಯಿತು. ಇದನ್ನು ಶಾಶ್ವತವಾಗಿ ಮುಂದುವರಿಸಲು ತೀರ್ಮಾನಿಸಿದೆವು’  ಎನ್ನುತ್ತಾರೆ ಟೆರಿಯ ಹಿರಿಯ ನಿರ್ದೇಶಕ ಪಿ.ಆರ್‌.ದಾಸ್‌ಗುಪ್ತ.

‘ಸುಸ್ಥಿರ ಅಭಿವೃದ್ಧಿ ಎಂದರೆ, ಅದು ಕೇವಲ ಪರಿಸರ ಸಂಬಂಧಿ ವಿಚಾರಕ್ಕೆ ಸೀಮಿತ ಅಲ್ಲ. ಇಂಧನ, ನೀರು ಮತ್ತು ನೈರ್ಮಲ್ಯ, ಕೃಷಿ, ಸಾಮಾಜಿಕ ನಡವಳಿಕೆ, ಹವಾಮಾನ ವೈಪರಿತ್ಯದಂತಹ  ವಿಚಾರಗಳ ಬಗ್ಗೆಯೂ ಚರ್ಚಿಸುತ್ತೇವೆ. ಬೆಂಗಳೂರಿನಲ್ಲಿರುವ ವಿಷಯ ತಜ್ಞರ ಜ್ಞಾನವನ್ನು ಬಳಸಿ ಸುಸ್ಥಿರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸುತ್ತೇವೆ.  ಅನುಷ್ಠಾನಕ್ಕೆ ಸರ್ಕಾರ ಅಥವಾ ಕಾರ್ಪೋರೇಟ್‌ ಸಂಸ್ಥೆಗಳು  ಕೈಜೋಡಿಸಲಿವೆ’ ಎಂದರು.

‘ಈ ಗುಂಪು ಟೆರಿಯ ಗೌರವ ಸದಸ್ಯ ಪ್ರೊ.ಎಸ್‌.ಎಲ್‌.ರಾವ್‌ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.  ಪ್ರತಿ ತಿಂಗಳ ಕೊನೆಯ ಶನಿವಾರ ಸಭೆ ಸೇರಲಿದೆ.  ಸುಸ್ಥಿರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT