ADVERTISEMENT

ವಿಭಜನೆಗೆ ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 20:16 IST
Last Updated 17 ಏಪ್ರಿಲ್ 2015, 20:16 IST

ಬೆಂಗಳೂರು: ಬಿಬಿಎಂಪಿ ವಿಭಜನೆ ಖಂಡಿಸಿ ಬಿಜೆಪಿ ಸದಸ್ಯರು ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರನ್ನು ಒಡೆಯುವ ಕೆಲಸ ಮಾಡು­ತ್ತಿದ್ದಾರೆ. ಬಿಬಿಎಂಪಿ ವಿಭಜನೆ ಹಿಂದೆ ಚುನಾವಣೆ ಮುಂದೂಡುವ ಹುನ್ನಾರ ಇದೆ’ ಎಂದು ಆರೋಪಿಸಿದರು.
‘ಬಿಬಿಎಂಪಿಯನ್ನು ಮೂರು ಭಾಗ­ಗಳಾಗಿ ವಿಭಜನೆ ಮಾಡಿದರೆ ಬೆಂಗಳೂ­ರಿನ ಅಭಿವೃದ್ಧಿ ಸಾಧ್ಯವಿಲ್ಲ. ಬೆಂಗಳೂ­ರನ್ನು ಅಭಿವೃದ್ಧಿ ಮಾಡುವ ಉದ್ದೇಶ ಮುಖ್ಯಮಂತ್ರಿಗಳಿಗೆ ಇದ್ದಿದ್ದರೆ ಬಿಬಿಎಂಪಿ ವಿಭಜನೆಗೆ ಕೈ ಹಾಕುತ್ತಿರಲಿಲ್ಲ’ ಎಂದರು.

ಬಿಬಿಎಂಪಿ ಚುನಾವಣೆ ನಡೆಸುವಂತೆ  ಹೈಕೋರ್ಟ್‌ ಆದೇಶ ನೀಡಿದೆ. ರಾಜ್ಯ ಸರ್ಕಾರ ಹೈಕೋರ್ಟ್‌ ಆದೇಶಕ್ಕೂ ಗೌರವ ಕೊಡುತ್ತಿಲ್ಲ. ಸಿದ್ದರಾಮಯ್ಯ ಅವರದು ಎಡಬಿಡಂಗಿ ಸರ್ಕಾರ ಎಂದು ಗೇಲಿ ಮಾಡಿದರು. ಶಾಸಕ ಆರ್‌.ಅಶೋಕ ಮಾತನಾಡಿ, ‘ಸ್ವಾತಂತ್ರ್ಯ ನಂತರದ  ಇಷ್ಟು ವರ್ಷಗಳಲ್ಲಿ ಕಾವೇರಿ ನೀರಿನ ವಿಷಯವಾಗಿ ಚರ್ಚಿಸಲು ರಾಜ್ಯದಲ್ಲಿ ಒಂದು ಬಾರಿ ವಿಶೇಷ ಅಧಿವೇಶನ ಕರೆಯಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಕಾಲಿಕ ಮಳೆಯಿಂದಾಗಿ ಸಾವಿರಾರು ಕೋಟಿ ಬೆಳೆ ನಾಶವಾಗಿದೆ. ಅದರ ಬಗ್ಗೆ ಚರ್ಚಿಸುವುದು ಬಿಟ್ಟು ಬಿಬಿಎಂಪಿ ವಿಭಜನೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆದಿರುವುದರ ಹಿಂದಿನ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಒಂದು ಕಡೆ ಜಾತಿ ಗಣತಿ ಮೂಲಕ ಸಮಾಜ ಒಡೆಯುವ ಕೆಲಸ ಆರಂಭಿಸಿದ್ದಾರೆ. ಇನ್ನೊಂದು ಕಡೆ ಬಿಬಿಎಂಪಿಯನ್ನು ವಿಭಜನೆ ಮಾಡುವ ಬೆಂಗಳೂರನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಕಟ್ಟುವ ಸಿದ್ದರಾಮಯ್ಯ ಅಲ್ಲ. ಒಡೆಯುವ ಸಿದ್ದರಾಮಯ್ಯ’ ಎಂದು ಟೀಕಿಸಿದರು.


ಒಡೆದು ಆಳುವುದೇ ಕಾಂಗ್ರೆಸ್‌ ಬಂಡವಾಳ: ರಮೇಶ್‌ ಆಕ್ರೋಶ
ಬೆಂಗಳೂರು: ‘ಕಾಂಗ್ರೆಸ್‌ ಪಕ್ಷಕ್ಕೆ ಒಡೆದು ಆಳುವ ನೀತಿಯೇ ಬಂಡವಾಳ. ಸ್ವಾತಂತ್ರ್ಯ ಸಿಗುವಾಗ ದೇಶವನ್ನೇ ಒಡೆದ ಆ ಪಕ್ಷ, ಬಳಿಕ ರಾಜ್ಯಗಳನ್ನೂ ಒಡೆದಿದೆ. ಈಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಒಡೆಯಲು ಮುಂದಾಗಿದೆ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬೆಂಗಳೂರಿನ ಜನರ ಭಾವನೆಗಳಿಗೆ ವಿರುದ್ಧವಾಗಿ ಬಿಬಿಎಂಪಿಯನ್ನು ಒಡೆದರೆ, ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ತಾನೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.
‘ಸರ್ಕಾರ ಸದ್ಯ ಹಾಕಿಕೊಂಡ ಯೋಜ­ನೆ­ಯಂತೆ 3 ಪಾಲಿಕೆ ಮಾಡಿದರೆ ಪೂರ್ವ ಪಾಲಿಕೆ ಶ್ರೀಮಂತ­ವಾಗಲಿದ್ದು, ಪಶ್ಚಿಮ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸಲಿದೆ’ ಎಂದು ತಿಳಿಸಿದರು.

‘ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪ್ರತಿಯೊಂದು ವಲಯಕ್ಕೆ ಒಬ್ಬ ಐಎಎಸ್‌ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡಬೇಕು’ ಎಂದ ಅವರು, ‘ಮೇಯರ್‌ ಹುದ್ದೆಗೆ ಜನರಿಂದಲೇ ನೇರವಾಗಿ ಆಯ್ಕೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಪಾಲಿಕೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಮಾರಾಟ ಮಾಡಿದ್ದು, ಹೆಚ್ಚಿನ ಸಾಲದ ಹೊರೆ ಹೊರೆಸಿದ್ದು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲೇ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ಸಿಗದಿದ್ದರೂ ನಗರದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ₹ 10 ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT