ADVERTISEMENT

ವಿಶೇಷ ಅಂಚೆ ಚೀಟಿ ಬಿಡುಗಡೆ

ಶ್ರೀರಾಮಸೇವಾ ಮಂಡಳಿ: ರಾಮನವಮಿ ಸಂಗೀತ ಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 20:05 IST
Last Updated 28 ಮಾರ್ಚ್ 2015, 20:05 IST

ಬೆಂಗಳೂರು: ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ ಮೈದಾನದಲ್ಲಿ ಶ್ರೀ ರಾಮಸೇವಾ ಮಂಡಳಿ ಏರ್ಪಡಿಸಿರುವ 77ನೇ ರಾಮನವಮಿ ರಾಷ್ಟ್ರೀಯ ಸಂಗೀತ ಉತ್ಸವ ಕಾರ್ಯಕ್ರಮದ ಅಂಗವಾಗಿ ಭಾರತ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿ ಹೊರತಂದಿದೆ.

ಶನಿವಾರ ಸಂಗೀತ ಉತ್ಸವಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್‌ ಅವರು ₹ 5 ಮೌಲ್ಯದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ವಿಶೇಷ ಅಂಚೆ ಚೀಟಿಯಲ್ಲಿ ಮಂಡಳಿಯ ಸಂಗೀತ ಉತ್ಸವದ ಪೆಂಡಾಲ್‌ ಹಾಗೂ ಆಂಜನೇಯ ದೇವರ ಚಿತ್ರವಿದೆ.

ಕರ್ನಾಟಕ ವೃತ್ತದ ಪ್ರಧಾನ ಅಂಚೆ ಮಹಾ ಪ್ರಬಂಧಕ ಎಂ.ಎಸ್.ರಾಮಾನುಜನ್‌ ಮಾತನಾಡಿ, ‘ಶ್ರೀ ರಾಮಸೇವಾ ಮಂಡಳಿಯ ಉತ್ತಮ ಕೆಲಸವನ್ನು ಗುರುತಿಸಿ ಇಲಾಖೆಯು ಈ ಕಾರ್ಯಕ್ಕೆ ಮುಂದಾ­ಗಿದೆ. ಇದೊಂದು ಸ್ಮರಣೀಯ ಕಾಣಿಕೆ’ ಎಂದರು. ವಿಶೇಷ ಅಂಚೆ ಚೀಟಿಗಳನ್ನು ಸಂಗೀತ ಉತ್ಸವ ನಡೆಯುತ್ತಿರುವ ಸ್ಥಳದಲ್ಲೇ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. 12 ಅಂಚೆ ಚೀಟಿ ಇರುವ ಒಂದು ಹಾಳೆಗೆ ₹300 ನಿಗದಿಪಡಿಸಲಾಗಿದೆ ಎಂದೂ ಅವರು ಹೇಳಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಪ್ರಧಾನ ವ್ಯವಸ್ಥಾಪಕ ದೀಪಾಂಕರ್‌ ಘೋಷ್‌ ಅವರು ಉತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಂಡಳಿ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ ಇದ್ದರು. ಬಾಂಬೆ ಜಯಶ್ರೀ ರಾಮನಾಥನ್‌ ಮತ್ತು ಸಂಗಡಿಗರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಅದಕ್ಕೂ ಮುನ್ನ ಶೇಕ್ ಮೆಹಬೂಬ್ ಸುಬಾನಿ ಮತ್ತು ಕಲೀಷಬಿ ಮೆಹಬೂಬ್ (ನಾದಸ್ವರ) ತಂಡದಿಂದ ಸಂಗೀತ ಕಛೇರಿ ನಡೆಯಿತು.

31 ದಿನಕ್ಕೆ ಸೀಮಿತ: ‘ಪ್ರಾಯೋಜಕರು ಹಾಗೂ ಅನುದಾನದ ಕೊರತೆಯಿಂದಾಗಿ ಈ ಬಾರಿಯ ಉತ್ಸವವನ್ನು  31 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಆದರೂ ಅದ್ಧೂರಿಯಿಂದ ಸಂಗೀತ ಉತ್ಸವ ಆಚರಿಸಲಾಗುವುದು’ ಎಂದು ಶ್ರೀ ರಾಮಸೇವಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್.ಎನ್. ವರದರಾಜ್ ತಿಳಿಸಿದರು.

ಖ್ಯಾತ ಸಂಗೀತಗಾರರ ಕಛೇರಿಗಳು ಈ ಬಾರಿಯ ವಿಶೇಷ. ಇದೇ ಮೊದಲ ಬಾರಿ ಏ.17 ರಿಂದ 19ರವರೆಗೆ ಮೂರು ದಿನ ಕರ್ನಾಟಿಕ್ ಮತ್ತು ಹಿಂದುಸ್ತಾನಿ ಜುಗಲ್ ಬಂದಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ನಿತ್ಯ ಧಾರ್ಮಿಕ ಕಾರ್ಯಕ್ರಮಗಳು, ಉಪನ್ಯಾಸಗಳೂ ನಡೆ­ಯ­ಲಿವೆ. ಪ್ರಶಸ್ತಿ ಪ್ರದಾನ ಸಮಾರಂಭಗಳೂ ನಡೆಯಲಿವೆ ಎಂದರು.

ಹಿಂದೂ  ದೇವರ ಅಂಚೆ ಚೀಟಿ
ಹಿಂದೂ ದೇವರ ಅಂಚೆ ಚೀಟಿ ಹೊರತರುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಾಲೋಚನೆ ನಡೆಸುವುದಾಗಿ ಕೇಂದ್ರ ಸಚಿವ ಅನಂತಕುಮಾರ್‌ ತಿಳಿಸಿದರು. ‘ಬೇರೆ ಬೇರೆ ದೇಶಗಳಲ್ಲಿ ಹಿಂದೂ ದೇವರ ಅಂಚೆ ಚೀಟಿ ಹೊರತರಲಾಗಿದೆ. ಭವ್ಯ ಪರಂಪರೆ ಹಾಗೂ ಸಂಸ್ಕೃತಿ ಹೊಂದಿರುವ ಭಾರತದಲ್ಲೂ ಹಿಂದೂ ದೇವರ ಅಂಚೆ ಚೀಟಿ ಹೊರತರಬೇಕು’ ಎಂದರು.

ಇದಕ್ಕೂ ಮೊದಲು ಮಾತನಾಡಿದ ಕರ್ನಾಟಕ ವೃತ್ತದ ಪ್ರಧಾನ ಅಂಚೆ ಮಹಾ ಪ್ರಬಂಧಕ ಎಂ.ಎಸ್.ರಾಮಾನುಜನ್‌, ಥಾಯ್ಲೆಂಡ್‌ನಲ್ಲಿ ಗಣೇಶನ ಚಿತ್ರ ಇರುವ ಅಂಚೆಚೀಟಿ ಹೊರತಂದಿದ್ದಾರೆ. ಅಮೆರಿಕದಲ್ಲೂ ಹಿಂದೂ ದೇವರ ಅಂಚೆ ಚೀಟಿ ಹೊರ ತಂದಿದ್ದಾರೆ. ಭಾರತದಲ್ಲೂ ಇಂಥ ಕೆಲಸ ನಡೆಯಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.