ADVERTISEMENT

ವೃದ್ಧರ ರಕ್ಷಣೆ: ಪೊಲೀಸರಿಗೆ ಪಾಠ

ಹಿರಿಯರ ಸಹಾಯವಾಣಿಗೆ 1.26 ಲಕ್ಷ ದೂರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 20:08 IST
Last Updated 28 ಮಾರ್ಚ್ 2015, 20:08 IST

ಬೆಂಗಳೂರು: ಹಿರಿಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಉದ್ದೇಶದಿಂದ ನೈಟಿಂಗೇಲ್ಸ್‌ ಮೆಡಿಕಲ್‌ ಸಂಸ್ಥೆಯು ನಗರದ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಏರ್ಪಡಿಸಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ಹಿರಿಯ ನಾಗರಿಕರು, ಕುಟುಂಬ ಸದಸ್ಯರಿಂದ ತಾವು ಎದುರಿಸುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಗಳ ಬಗ್ಗೆ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರ ಬಳಿ ಅಳಲು ತೋಡಿಕೊಂಡರು. ಅವರ ದೂರುಗಳನ್ನು ಆಲಿಸಿದ ರೆಡ್ಡಿ, ‘ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ಧವಿದೆ’ ಎಂದು ಅಭಯ ನೀಡಿದರು.

‘ಕಷ್ಟ ಪಟ್ಟು ಮಗನಿಗೆ ಎಂಎಸ್ಸಿ ಓದಿಸಿದೆ. ಈಗ ಉತ್ತಮ ಕೆಲಸದಲ್ಲಿರುವ ಆತ, ಮಾಸಿಕ ₹25 ಸಾವಿರ ವೇತನ ಪಡೆಯುತ್ತಾನೆ. ಶಿಕ್ಷಕ ವೃತ್ತಿಯಿಂದ ಇತ್ತೀಚೆಗೆ ನಿವೃತ್ತಿ ಪಡೆದೆ. ಮಗ ತುತ್ತು ಕೂಳು ಹಾಕಲು ಯೋಚನೆ ಮಾಡುತ್ತಿದ್ದಾನೆ. ನೀನು ಮನೆಯಲ್ಲಿರುವುದು ವ್ಯರ್ಥವೆಂದು ನಿಂದಿಸುತ್ತಾನೆ’ ಎಂದು ಹಿರಿಯ ನಾಗರಿಕರೊಬ್ಬರು ದುಃಖತಪ್ತರಾದರು.

‘ಹಿರಿಯರು ಮಕ್ಕಳಿದ್ದಂತೆ.  ಅವ­ರನ್ನು ಮಕ್ಕಳಂತೆಯೇ ನೋಡಿಕೊಳ್ಳಬೇಕು. ಆದರೆ, ಆಸ್ತಿ ಆಸೆಗೆ ಕುಟುಂಬದ ಹಿರಿಯರನ್ನು ಮನೆಯಿಂದ ಹೊರದೂಡುವ ಕೆಲಸ ನಡೆಯುತ್ತಿದೆ. ದಿಕ್ಕು ಕಾಣದೆ ಅವರು ಠಾಣೆ ಮೆಟ್ಟಿಲೇರಿದರೆ, ಅಲ್ಲಿ ಕನಿಷ್ಠ ಸಾಂತ್ವನವೂ ಸಿಗುತ್ತಿಲ್ಲ. ಅವರ ಸಮಸ್ಯೆಗಳನ್ನು ಕೇಳುವ ತಾಳ್ಮೆ ಪೊಲೀಸರಿಗೆ ಇಲ್ಲ’  ಎಂದು ಸಹಾಯವಾಣಿ ಪರ ಕೆಲಸ ಮಾಡುವ ವಕೀಲ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಂ.ಎನ್‌.ರೆಡ್ಡಿ, ‘ಪೋಷಕರನ್ನು ಪೂಜಿಸುವ ಸಂಸ್ಕೃತಿ ಕಣ್ಮರೆಯಾಗಿದೆ. ಮಕ್ಕಳು ಎಷ್ಟೇ ಕಿರುಕುಳ ನೀಡಿದರೂ ಪೋಷಕರು ಅವರ ರಕ್ಷಣೆಯನ್ನೇ ಬಯಸುತ್ತಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.

4 ಸಾವಿರ ಪ್ರಕರಣಇತ್ಯರ್ಥ
2002ರಲ್ಲಿ ಹಿರಿಯರ ಸಹಾಯವಾಣಿ (1090) ಆರಂಭವಾಗಿದ್ದು, ಇಲ್ಲಿಯವರೆಗೆ 1.26 ಲಕ್ಷ ಕರೆಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 7,862 ದೂರುಗಳನ್ನು ದಾಖಲಿಸಿಕೊಂಡು, 3,978 ಪ್ರಕರಣ­ಗಳನ್ನು ಇತ್ಯರ್ಥಪಡಿಸಲಾಗಿದೆ.
– ಸಹಾಯವಾಣಿ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.