ADVERTISEMENT

‘ವೈಚಾರಿಕತೆಯೇ ಮನುಷ್ಯನ ಅಂತಃಸತ್ವ’

‘ಕವಿ ಬಿ.ಆರ್‌.ಲಕ್ಷ್ಮಣರಾವ್‌– 70 ಅಭಿನಂದನೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2016, 19:30 IST
Last Updated 1 ಅಕ್ಟೋಬರ್ 2016, 19:30 IST
ಬಿ.ಆರ್‌.ಲಕ್ಷ್ಮಣರಾವ್‌ ಹಾಗೂ ಗಿರಿಜಾ ಲಕ್ಷ್ಮಣರಾವ್‌ ದಂಪತಿಯನ್ನು ಕೆ.ಎಸ್‌.ನಿಸಾರ್‌ ಅಹಮದ್‌್  ಸನ್ಮಾನಿಸಿದರು. ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಜಯಂತ ಕಾಯ್ಕಿಣಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಎಚ್‌.ಎಸ್‌.ವೆಂಕಟೇಶಮೂರ್ತಿ, ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ ಇದ್ದಾರೆ   – ಪ್ರಜಾವಾಣಿ ಚಿತ್ರ
ಬಿ.ಆರ್‌.ಲಕ್ಷ್ಮಣರಾವ್‌ ಹಾಗೂ ಗಿರಿಜಾ ಲಕ್ಷ್ಮಣರಾವ್‌ ದಂಪತಿಯನ್ನು ಕೆ.ಎಸ್‌.ನಿಸಾರ್‌ ಅಹಮದ್‌್ ಸನ್ಮಾನಿಸಿದರು. ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ, ಜಯಂತ ಕಾಯ್ಕಿಣಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಎಚ್‌.ಎಸ್‌.ವೆಂಕಟೇಶಮೂರ್ತಿ, ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬುದ್ಧಿಜೀವಿಗಳು, ವೈಚಾರಿಕ ಚಿಂತನೆ ಉಳ್ಳವರನ್ನು ಗೇಲಿ ಮಾಡುವ ಕಾಲದಲ್ಲಿ ನಾವಿದ್ದೇವೆ. ವೈಚಾರಿಕತೆಯೇ ಮನುಷ್ಯನ ಅಂತಃಸತ್ವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಬಿ.ಆರ್‌.ಲಕ್ಷ್ಮಣರಾವ್‌– 70 ಅಭಿನಂದನಾ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕವಿ ಬಿ.ಆರ್‌.ಲಕ್ಷ್ಮಣರಾವ್‌– 70 ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ಬುದ್ಧಿಯ ಹಂಗಿಲ್ಲದ ಸಾಹಿತ್ಯಕ್ಕೆ ಜಾಗವೇ ಇಲ್ಲ. ಆದರೆ, ಇಂದು ಸಂಸ್ಕೃತಿ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಬೇಸರ ತರಿಸುತ್ತದೆ. ಸಂಸ್ಕೃತಿ ಎನ್ನುವುದು ಉದ್ಯಾನವಾಗಬೇಕೇ ಹೊರತು ಸಂಗ್ರಹಾಲಯ ಆಗಬಾರದು. ಪ್ರತಿದಿನ ನೀರು, ಬೆಳಕನ್ನು ಹೀರಿಕೊಂಡು ಕಂಗೊಳಿಸುವ ಮೂಲಕ ಜನರಿಗೆ ಮುದ ನೀಡುವ ಉದ್ಯಾನದಂತೆ ಸಂಸ್ಕೃತಿ ಇರಬೇಕು. ದೂಳು ಹಿಡಿದ, ಕಪಾಟಿನಲ್ಲಿ ಜೋಡಿಸಿಟ್ಟ ವಸ್ತುವಾಗಬಾರದು’ ಎಂದರು.

ಬಿ.ಆರ್‌.ಲಕ್ಷ್ಮಣರಾವ್‌ ಅವರ ಹಾಡುಗಳು ಜನಪ್ರಿಯವಾಗಿವೆ. ಹೀಗಾಗಿ ಅವರನ್ನು ಭಾವುಕ ಕವಿ, ಭಾವನೆಯೇ ಅವರ ಸಾಹಿತ್ಯದ ಜೀವಾಳ ಎಂದು ಒಂದು ಚೌಕಟ್ಟಿನಲ್ಲಿ ಇಟ್ಟು ನೋಡಲಾಗುತ್ತಿದೆ. ಆದರೆ, ಅವರ ಕವಿತೆಗಳನ್ನು ಓದಿದರೆ ನಿಜವಾದ ಅಂತಃಸತ್ವ ತಿಳಿಯುತ್ತದೆ’ ಎಂದು ಹೇಳಿದರು.

ಪುರಾಣಗಳ ಐತಿಹ್ಯಗಳನ್ನು ಆಧುನಿಕವಾಗಿ ಬಳಸಿದ ಕವಿಗಳಲ್ಲಿ ಬಿ.ಆರ್‌.ಎಲ್‌ ಪ್ರಮುಖರು. ಬದುಕಿನ ಬಗ್ಗೆ ಕುತೂಹಲ, ಕಾಳಜಿ ಇರುವುದನ್ನು  ಅವರ ಕವಿತೆಗಳಲ್ಲಿ ಕಾಣಬಹುದು. ಸರಳತೆ, ತೋರಿಕೆ ಇಲ್ಲದ ಪ್ರೀತಿ ಹೊಂದಿರುವ ಅವರ ವ್ಯಕ್ತಿತ್ವ ಘನವಾದದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬದುಕನ್ನು ಅರ್ಥ ಮಾಡಿಕೊಳ್ಳಲಷ್ಟೇ ಕಾವ್ಯವನ್ನು ಒಂದು ಮಾಧ್ಯಮವಾಗಿ ಮಾಡಿಕೊಂಡು ಬಂದ ಗೆಳೆಯ ಲಕ್ಷ್ಮಣ. ಅವರು ಬರೆದ ಹಾಡುಗಳು ಜನಮಾನಸವನ್ನು ಮುಟ್ಟಿವೆ’ ಎಂದು ಹೇಳಿದರು.

ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಮಾತನಾಡಿ, ಲಕ್ಷ್ಮಣ ಪೋಲಿ ಹುಡುಗ. ವಿದ್ಯಾರ್ಥಿಯಾಗಿದ್ದಾಗ ಕವನಗಳನ್ನು ಬರೆದುಕೊಂಡು ಬಂದು ನನಗೆ ತೋರಿಸುತ್ತಿದ್ದ. ಕವಿತೆಗಳು ತುಂಬ ಚೆನ್ನಾಗಿವೆ ಎಂದು ಹೊಗಳಿದ್ದೆ. ಹಾಗೆ ಹೊಗಳಿ ತಪ್ಪು ಮಾಡಿದೆ ಎಂದು ಈಗ ಅನ್ನಿಸುತ್ತಿದೆ. ಆ ಮಟ್ಟಿಗೆ ಕಾವ್ಯ ಕ್ಷೇತ್ರದಲ್ಲಿ ಆತ ಹೆಸರು ಮಾಡಿದ್ದಾನೆ’ ಎಂದು ಹಾಸ್ಯದ ಚಟಾಕಿ ಹಾರಿಸಿದರು.

ಲಕ್ಷ್ಮಣ ತಾತ್ವಿಕ ಹೊಳಹುಗಳುಳ್ಳ, ವಿಚಾರ ಪ್ರಧಾನ ಕವಿತೆಗಳನ್ನು ಬರೆಯಬೇಕು. ಈಗೀಗ ಮಾರ್ಮಿಕವಾದ ಪದ್ಯಗಳನ್ನು ಬರೆಯುತ್ತಿದ್ದಾನೆ. ಇಂತಹ ಮತ್ತಷ್ಟು ಪದ್ಯಗಳನ್ನು ಬರೆಯಲಿ’ ಎಂದು ಆಶಿಸಿದರು.

ಬಿ.ಆರ್‌.ಲಕ್ಷ್ಮಣರಾವ್‌ ಅವರ ಆಯ್ದ ಕವಿತೆಗಳ ಹಿಂದಿ ಅನುವಾದದ ಕೃತಿಯನ್ನು (ಸಂಪಾದಕ ಡಾ.ತಿಪ್ಪೇಸ್ವಾಮಿ) ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.