ADVERTISEMENT

ವೈಟ್‌ಫೀಲ್ಡ್‌: 120 ಮರಗಳ ಸ್ಥಳಾಂತರಕ್ಕೆ ಸಿದ್ಧತೆ

‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ಕಡಿಯಬೇಕಾಗಿರುವ ಮರಗಳನ್ನು ಉಳಿಸಿಕೊಳ್ಳಲು ಯುವಕರ ಪಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 20:34 IST
Last Updated 1 ಡಿಸೆಂಬರ್ 2017, 20:34 IST
ಸ್ಥಳಾಂತರ ಮಾಡುವ ಮರಗಳಿಗೆ ರಾಮ್‌ ಹಾಗೂ ವಿಜಯ್‌ ನಿಶಾಂತ್‌ ಅವರು ಗುರುತು ಮಾಡಿದರು
ಸ್ಥಳಾಂತರ ಮಾಡುವ ಮರಗಳಿಗೆ ರಾಮ್‌ ಹಾಗೂ ವಿಜಯ್‌ ನಿಶಾಂತ್‌ ಅವರು ಗುರುತು ಮಾಡಿದರು   

ಬೆಂಗಳೂರು: ವೈಟ್‌ಫೀಲ್ಡ್‌ನ ಹೋಪ್‌ಫಾರ್ಮ್‌ ಬಳಿ ‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ಕಡಿಯಬೇಕಿದ್ದ ಸುಮಾರು 120 ಮರಗಳು ಪರಿಸರ ಕಾರ್ಯಕರ್ತರ ಪರಿಶ್ರಮದಿಂದಾಗಿ ಸ್ಥಳಾಂತರಗೊಳ್ಳಲಿವೆ.

‘ನಮ್ಮ ಮೆಟ್ರೊ’ ದ್ವಿತೀಯ ಹಂತದ ಯೋಜನೆಯಲ್ಲಿ ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಎತ್ತರಿಸಿದ ಮಾರ್ಗಕ್ಕಾಗಿ ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ಈ ಮರಗಳನ್ನು ಕಡಿಯುವ ಬದಲು ಮರುನಾಟಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಥವಾ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಗ್ಗೆ ಆಸಕ್ತಿ ತೋರಿರಲಿಲ್ಲ. ಆ ಬಳಿಕ ಪ್ರತಿಭಟನೆ ನಡೆಸಿದವರೂ ಸುಮ್ಮನಾಗಿದ್ದರು.

ADVERTISEMENT

ಆದರೆ, ಸ್ಥಳೀಯ ಕೆಲವು ಯುವಕರು ಈ ವಿಚಾರವನ್ನು ಇಲ್ಲಿಗೇ ಬಿಡಲು ಸಿದ್ಧರಿರಲಿಲ್ಲ. ಕೆಲವು ಮರಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬ ಅವರ ಹಂಬಲ ಈಡೇರುವ ಕಾಲ ಸನ್ನಿಹಿತವಾಗಿದೆ. ಶ್ರೀ ಸತ್ಯಸಾಯಿ ಆಸ್ಪತ್ರೆಯವರು ಮರಗಳ ಮರುನಾಟಿಗೆ ಜಾಗ ನೀಡಲು ಮುಂದೆಬಂದಿದ್ದಾರೆ.

‘ಸರ್ಕಾರಿ ಸಂಸ್ಥೆಗಳು ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಹಾಗಾಗಿ ಜನರೇ ಸೇರಿ ಮರಗಳನ್ನು ಸ್ಥಳಾಂತರ ಮಾಡಲು ಮುಂದಾದೆವು. ಆದರೆ ಅವುಗಳ ಮರುನಾಟಿಗೆ ಸಮೀಪದಲ್ಲಿ ಸ್ಥಳಾವಕಾಶ ಇರಲಿಲ್ಲ. ಸ್ಥಳಾವಕಾಶ ಕಲ್ಪಿಸುವಂತೆ ಆಸುಪಾಸಿನ ಅನೇಕ ಕಂಪೆನಿಗಳನ್ನು ಕೋರಿದ್ದೆವು. ಕೊನೆಗೆ ಇಲ್ಲಿನ ಶ್ರೀ ಸತ್ಯಸಾಯಿ ಆಸ್ಪತ್ರೆಯವರು ಜಾಗ ಒದಗಿಸಲು ಒಪ್ಪಿದರು’ ಎಂದು ಅವರು ತಿಳಿಸಿದರು.

‘ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ಅವರು ಮರಗಳ ಸ್ಥಳಾಂತರಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸ್ಥಳಾಂತರ ಮಾಡಬಹುದಾದ 120 ಮರಗಳನ್ನು ನಾವು ಗುರುತುಮಾಡಿದ್ದೇವೆ’ ಎಂದರು.

‘ಸ್ಥಳೀಯರೇ ಮರಗಳ ಸ್ಥಳಾಂತರಕ್ಕೆ ಉತ್ಸಾಹ ತೋರಿದ್ದಾರೆ. ಹಾಗಾಗಿ ಅದಕ್ಕೆ ಅಗತ್ಯವಿರುವ ಜೆಸಿಬಿಗಳನ್ನು ಹಾಗೂ ಕಾರ್ಮಿಕರನ್ನು ನಾವು ಒದಗಿಸುತ್ತೇವೆ’ ಎಂದು ಇಲ್ಲಿನ ಮೆಟ್ರೊ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಂಗೆ, ಬಾದಾಮಿ, ಆಲ, ಸಿಂಗಪುರ ಚೆರ್ರಿ, ಬೆಹಂದಿ ಮರಗಳನ್ನು ಸ್ಥಳಾಂತರ ಮಾಡುತ್ತೇವೆ. ಇವುಗಳು 12 ಅಡಿಗಳಿಂದ 16 ಅಡಿಗಳಷ್ಟು ಎತ್ತರ ಇವೆ. ಕಾಂಡದ ಸುತ್ತಳತೆಯೂ ಕಡಿಮೆ ಇದೆ. ಇವುಗಳನ್ನು ಬೇರೆ ಕಡೆ ಮರುನಾಟಿ ಮಾಡುವುದು ಕಷ್ಟವೇನಲ್ಲ. ಸರ್ಜಾಪುರ ರಸ್ತೆಯಲ್ಲಿ ಆರು ತಿಂಗಳ ಹಿಂದೆ ನಾವು ಮರು ನಾಟಿ ಮಾಡಿದ್ದ ದೊಡ್ಡ ಗಾತ್ರದ ಮರಗಳು ಚಿಗುರೊಡೆದಿವೆ. ಹಾಗಾಗಿ ಈ ಮರಗಳೂ ಬದುಕುಳಿಯುವ ಬಗ್ಗೆ ಸಂದೇಹ ಬೇಕಿಲ್ಲ’ ಎಂದು ವಿಜಯ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಮ್‌, ಸಿದ್ಧಾರ್ಥ ನಾಗ್‌, ಮುರಳಿ, ಉಲ್ಲಾಸ್‌, ಅಕ್ಷಯ್‌ ಹೆಬ್ಳಿಕರ್‌ ಅವರಂತಹ ಉತ್ಸಾಹಿ ತರುಣರು ನಗರದ ಹಸಿರನ್ನು ಉಳಿಸುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಇವರ ಈ ಪ್ರಯತ್ನ ನಗರದ ಯುವಜನತೆಗೆ ಪ್ರೇರಣೆ ಆಗಬೇಕು. ವೈಟ್‌ಪೀಲ್ಡ್‌ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳು ನೆಲೆಸಿದ್ದಾರೆ. ಅವರೆಲ್ಲರೂ ಕೈಜೋಡಿಸುತ್ತಿದ್ದರೆ ಇನ್ನಷ್ಟು ಮರಗಳನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಅವರು ಹೇಳಿದರು.
*
ಬೆಂಗಳೂರಿನ ಹಸಿರು ಕವಚ ದಿನೇ ದಿನೇ ಕ್ಷೀಣಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಇಲ್ಲೂ ನಿರ್ಮಾಣವಾಗಬಹುದು.
– ರಾಮ್‌,
ಐಬಿಎಂ ಉದ್ಯೋಗಿ
*
ವೈಟ್‌ಫೀಲ್ಡ್‌ನಲ್ಲಿ ಅನೇಕ ಐಟಿ ಕಂಪೆನಿಗಳಿವೆ. ಇಲ್ಲಿನ ನೆಲ–ಜಲ ಬಳಸಿಕೊಳ್ಳುತ್ತಿರುವ ಈ ಕಂಪೆನಿಗಳು ಹಸಿರು ಸಂರಕ್ಷಣೆ ವಿಚಾರದಲ್ಲಿ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿವೆ.
–ವಿಜಯ ನಿಶಾಂತ್‌,
ಸಸ್ಯ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.