ADVERTISEMENT

ವೊಡಾಫೋನ್‌ ಹೊರಹಾಕಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಬೆಂಗಳೂರು: ಕಡ್ಡಾಯ ಕನ್ನಡ ನಾಮಫಲಕ ಕುರಿತ ಕಾಯ್ದೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಕನ್ನಡಿಗರಿಗೆ ಅವಮಾನ ಮಾಡಿರುವ ‘ವೊಡಾಫೋನ್‌’ ಕಂಪೆನಿಯನ್ನು ರಾಜ್ಯ ಸರ್ಕಾರ ರಾಜ್ಯದಿಂದ ಹೊರ ಹಾಕಬೇಕು ಎಂದು ಒತ್ತಾಯಿಸಿ ಕನ್ನಡ ಅನುಷ್ಠಾನ ಮಂಡಳಿಯ ಸದಸ್ಯರು ಶೇಷಾದ್ರಿಪುರ ದಲ್ಲಿರುವ ವೊಡಾಫೋನ್‌ ಮಳಿಗೆಯ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಆರ್‌.ಎ.ಪ್ರಸಾದ್‌, ‘ರಾಜ್ಯ ಸರ್ಕಾರ ಎಲ್ಲ ವಾಣಿಜ್ಯ ಮಳಿಗೆಗಳಿಗೆ ಅನ್ವಯಿಸುವಂತೆ ರಾಜ್ಯ ವಾಣಿಜ್ಯ ಮತ್ತು ಅಂಗಡಿ ಮುಂಗಟ್ಟುಗಳ ಕಾಯ್ದೆಯನ್ನು ಜಾರಿಗೆ ತಂದಿದೆ. ಕಾಯ್ದೆಯ ಪ್ರಕಾರ ಎಲ್ಲ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು.

ಆದರೆ, ವೊಡಾಫೋನ್‌ ಕಂಪೆನಿ ಇತ್ತೀಚೆಗೆ ಈ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ರಾಜ್ಯದಲ್ಲಿದ್ದು ಕನ್ನಡ ನಾಮಫಲಕ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಈ ಕಂಪೆನಿಯನ್ನು ರಾಜ್ಯದಿಂದ ಹೊರ ಹಾಕಬೇಕು’ ಎಂದು ಒತ್ತಾಯಿಸಿದರು. ಲೇಖಕರಾದ ಡಾ.ನಾ.ಗೀತಾಚಾರ್ಯ, ಕೆ.ಸಿ.ಜಗನ್ನಾಥ ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.