ADVERTISEMENT

ಶಾಸಕ ಮುನಿರತ್ನ ಆಪ್ತರ ಕಚೇರಿ, ಮನೆ ಮೇಲೆ ದಾಳಿ

ಪಾಲಿಕೆ ಕಾಮಗಾರಿಗಳ ಮಹತ್ವದ ದಾಖಲೆಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು: ಶಾಸಕ ಮುನಿರತ್ನ ಅವರ ಆಪ್ತ ಎಂ.ಆರ್‌.ಜಯರಾಂ, ಬಿಬಿಎಂಪಿ ಮೂವರು ಎಂಜಿನಿಯರ್‌ಗಳ ಕಚೇರಿ ಮತ್ತು ಮನೆಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ನಡೆಸಿ ಪಾಲಿಕೆ ಕಾಮಗಾರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು    ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಲತೇಶ್‌, ಎಂ.ಕೆಂಪೇಗೌಡ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಐ.ಕೆ.ವಿಶ್ವಾಸ್‌ ಅವರ ಕಚೇರಿ, ಮನೆ ಮೇಲೆ ದಾಳಿ ನಡೆದಿದೆ.

ಮುನಿರತ್ನ ಅವರ ಆಪ್ತ   ಎಂ.ಆರ್‌.ಜಯರಾಂ ಅವರ ಹೆಸರಘಟ್ಟ ಬಡಾವಣೆ ಮನೆ ಮತ್ತು ವೆಂಕಟೇಶಮೂರ್ತಿ ಅವರ “ಸಪ್ತಗಿರಿ ಆಸ್ಪಾಲ್ಟ್‌’ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜಯರಾಂ “ವೃಷಬಾದ್ರಿ ಕನ್‌ಸ್ಟ್ರಕ್ಷನ್‌’ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾಜಕಾರಣಿಯೊಬ್ಬರ ಪತ್ನಿ”ಿ  ಒಡೆತನದಲ್ಲಿ ಈ ಸಂಸ್ಥೆ ಇದೆ ಎಂದೂ ಮೂಲಗಳು ತಿಳಿಸಿವೆ.

‘ಮಾಲತೇಶ್‌ ಮನೆಯಲ್ಲಿ ₹ 3.5 ಲಕ್ಷ ಹಾಗೂ ₹ 2.5 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ದೊರೆತಿವೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಾಗುತ್ತಿದೆ. ದಾಳಿಯಲ್ಲಿ ವಶಪಡಿಸಿಕೊಂಡಿರುವ ನೂರಾರು ದಾಖಲೆಗಳನ್ನು  ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಲೋಕಾಯುಕ್ತ ಎಸ್ಪಿ ಅಬ್ದುಲ್‌ ಅಹದ್‌ ‘ಪ್ರಜಾವಾಣಿ’ಗೆ ಹೇಳಿದರು.

2014ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಬಿಎಂಪಿ ಟೆಂಡರ್ ಕರೆದಿತ್ತು. ರಾಜರಾಜೇಶ್ವರಿನಗರ ವಿಭಾಗದಲ್ಲಿ ರಸ್ತೆ ಕಾಮಗಾರಿ ನಿರ್ವಹಿಸದಿದ್ದರೂ, ಎಂಜಿನಿಯರ್‌ಗಳು ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಿಲ್‌ ಪಾವತಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು.

ಇದಕ್ಕೆ ಸಂಬಂಧಿಸಿದಂತೆ 2014ರ ಡಿಸೆಂಬರ್ 27ರಂದು ಲೋಕಾಯುಕ್ತ ಪೊಲೀಸರು ಮುನಿರತ್ನ ಅವರ ಪತ್ನಿ ಮಂಜುಳಾ ಹೆಸರಿನಲ್ಲಿರುವ ವೈಯಾಲಿಕಾವಲ್‌ನ ಮನೆ ಮೇಲೆ ದಾಳಿ ನಡೆಸಿ ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ 900 ಕಡತ ಹಾಗೂ ಇತರೆ ದಾಖಲೆ ವಶಕ್ಕೆ ಪಡೆದಿದ್ದರು.

ಅಬ್ದುಲ್‌ ಅಹದ್‌ ನೇತೃತ್ವದಲ್ಲಿ 20 ಅಧಿಕಾರಿಗಳು, 35 ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.