ADVERTISEMENT

ಶಿಕ್ಷಕರ ಕರಡು: 1,000ಕ್ಕೂ ಅಧಿಕ ಆಕ್ಷೇಪಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:23 IST
Last Updated 21 ಸೆಪ್ಟೆಂಬರ್ 2017, 19:23 IST

ಬೆಂಗಳೂರು: ಶಿಕ್ಷಕರ ವರ್ಗಾವಣೆಯ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಅವಧಿ ಗುರುವಾರ ಪೂರ್ಣಗೊಂಡಿದ್ದು, ಇದುವರೆಗೆ 1,000ಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಕಾಯ್ದೆಗೆ ರೂಪಿಸಿರುವ ಕರಡು ನಿಯಮಾವಳಿಗಳನ್ನು ಇದೇ ತಿಂಗಳ 7ರಂದು ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ಸೇಟ್ ಅವರ ಕಚೇರಿಗೆ ಇ–ಮೇಲ್, ಅಂಚೆ ಮೂಲಕ ಆಕ್ಷೇಪಣೆಗಳು ಬಂದಿವೆ. ಇದಲ್ಲದೆ, ಶಿಕ್ಷಕರ ಸಂಘಟನೆಗಳೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿವೆ.

ADVERTISEMENT

ಮುಖ್ಯವಾಗಿ, ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಶೆ 15ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳಿದ್ದರೆ ವರ್ಗಾವಣೆಗೆ ಅವಕಾಶ ಇಲ್ಲ ಎಂಬ ಅಂಶವನ್ನು ಕೈಬಿಡಬೇಕು ಎಂದು ಹೆಚ್ಚು ಆಕ್ಷೇಪಣೆ ಸಲ್ಲಿಕೆ ಆಗಿವೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಗದಿಪಡಿಸದೆ ವಿಷಯವಾರು ಶಿಕ್ಷಕರನ್ನು ನಿಯುಕ್ತಿಗೊಳಿಸಬೇಕು, ನಿವೃತ್ತಿಗೆ ಮೂರು ವರ್ಷಕ್ಕಿಂತ ಕಡಿಮೆ ಅವಧಿ ಇದ್ದರೂ ಪರಸ್ಪರ ವರ್ಗಾವಣೆಗೆ ಅವಕಾಶ ನೀಡಬೇಕು.

‘ಎ’ ವಲಯದಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಪರಸ್ಪರ ವರ್ಗಾವಣೆಗೆ ಅವಕಾಶ ಇಲ್ಲ ಎಂಬ ಅಂಶವನ್ನು ಕೈಬಿಡಬೇಕು, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನೇಮಕವಾದ ಶಿಕ್ಷಕರಿಗೂ ವರ್ಗಾವಣೆ ಕಲ್ಪಿಸುವಂತೆ ಮನವಿಗಳು ಸಲ್ಲಿಕೆಯಾಗಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.