ADVERTISEMENT

ಸಂಗೀತದೋಕುಳಿಯಲ್ಲಿ ಮಿಂದೆದ್ದ ರವೀಂದ್ರ ಕಲಾಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2017, 20:24 IST
Last Updated 5 ಏಪ್ರಿಲ್ 2017, 20:24 IST
ಕಲಾಕ್ಷೇತ್ರದ ಮುಂಭಾಗ ಬುಧವಾರ  ಸಂಗೀತಗಾರರು ಪುರಂದರದಾಸರ ಕೀರ್ತನೆ ಹಾಡಿದರು.  –ಪ್ರಜಾವಾಣಿ ಚಿತ
ಕಲಾಕ್ಷೇತ್ರದ ಮುಂಭಾಗ ಬುಧವಾರ ಸಂಗೀತಗಾರರು ಪುರಂದರದಾಸರ ಕೀರ್ತನೆ ಹಾಡಿದರು. –ಪ್ರಜಾವಾಣಿ ಚಿತ   

ಬೆಂಗಳೂರು: ಹಿಂದೂಸ್ತಾನಿ ಗಾಯನ, ಹಿಂದೂಸ್ತಾನಿ– ಕರ್ನಾಟಕ ಸಂಗೀತದ ಜುಗಲ್‌ ಬಂದಿ, ಪುರಂದರ ದಾಸರ ಕೀರ್ತನೆಗಳ ಗಾಯನ, ಸುಗಮ ಸಂಗೀತ ಕಾರ್ಯಕ್ರಮಗಳು ಬುಧವಾರ ರವೀಂದ್ರ ಕಲಾಕ್ಷೇತ್ರವನ್ನು ‘ಸಂಗೀತದೋಕುಳಿ’ಯಲ್ಲಿ ಮಿಂದೇಳುವಂತೆ ಮಾಡಿದವು. 

ಕಲಾಕ್ಷೇತ್ರ  50 ವರ್ಷ ಪೂರೈಸಿದ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ‘ನೆನಪಿನೋಕುಳಿ’ ಸರಣಿ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ‘ಸಂಗೀತ ಹಬ್ಬ’ ಈ ಅಪೂರ್ವ ಅವಕಾಶ ಒದಗಿಸಿತು.

ಮುಸ್ಸಂಜೆ ವೇಳೆ ಡಾ.ಪಿ.ರಮಾ ನೇತೃತ್ವದಲ್ಲಿ 100 ಕಲಾವಿದರು ಕಲಾಕ್ಷೇತ್ರದ ಎದುರಿನ ಮೆಟ್ಟಿಲುಗಳಲ್ಲಿ ಕುಳಿತು ಪುರಂದರ ದಾಸರ ನವರತ್ನ ಮಾಲಿಕಾ ಕೃತಿಗಳ ಗಾಯನ ನಡೆಸಿಕೊಟ್ಟರು. ಈ ನಡುವೆ ಮಳೆ ಹನಿಗಳು ಬೀಳಲಾರಂಭಿಸಿದ್ದರಿಂದ ಕಾರ್ಯಕ್ರಮವನ್ನು ಕಲಾಕ್ಷೇತ್ರದ ಒಳಗೆ ಸ್ಥಳಾಂತರಿಸಲಾಯಿತು.

ಪಂಡಿತ ವಿನಾಯಕ ತೊರ್ವಿ ಮತ್ತು ವಿದ್ವಾನ್‌ ಎಸ್‌.ಶಂಕರ್‌ ಅವರ ತಂಡ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್‌ ಬಂದಿ ಪ್ರಸ್ತುತ ಪಡಿಸಿತು. ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರ ತಂಡ ಹಿಂದೂಸ್ತಾನಿ ಗಾಯನ ನಡೆಸಿಕೊಟ್ಟಿತು.

ಶಿವಮೊಗ್ಗ ಸುಬ್ಬಣ್ಣ, ಗರ್ತಿಕೆರೆ ರಾಘಣ್ಣ, ಬಿ.ಕೆ.ಸುಮಿತ್ರಾ, ಎಂ.ಕೆ.ಜಯಶ್ರೀ, ರತ್ನಮಾಲಾ ಪ್ರಕಾಶ್‌, ಕಸ್ತೂರಿ ಶಂಕರ್‌ ಹಾಗೂ ಪುತ್ತೂರು ನರಸಿಂಹ ನಾಯಕ್‌ ಅವರು ಸುಗಮ ಸಂಗೀತ  ಕಾರ್ಯಕ್ರಮ ನಡೆಸಿಕೊಟ್ಟರು.

ಪಂಡಿತ ವಿನಾಯಕ ತೊರ್ವಿ ಮತ್ತು ವಿದ್ವಾನ್‌ ಎಸ್‌.ಶಂಕರ್‌, ಗರ್ತಿಕೆರೆ ರಾಘಣ್ಣ ಹಾಗೂ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರನ್ನು  ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.