ADVERTISEMENT

ಸಂಬಂಧಿ ಯುವತಿಯೊಂದಿಗೇ ವಿವಾಹವಾದ ಯುವತಿ?

ಸಹಾಯವಾಣಿ ಅಧಿಕಾರಿಗಳಿಗೆ ತಲೆನೋವಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:43 IST
Last Updated 5 ಜುಲೈ 2017, 19:43 IST

ಬೆಂಗಳೂರು: ಪರಸ್ಪರ ಪ್ರೀತಿಸಿ ಒಂದೂವರೆ ತಿಂಗಳ ಹಿಂದೆ ಮನೆ ಬಿಟ್ಟು ಹೋದ ಯುವತಿಯರಿಬ್ಬರು, ಇದೀಗ ಕೋರಮಂಗಲದ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೇ ವಾಸವಾಗಿದ್ದಾರೆ. ಇದರ ಬೆನ್ನಲ್ಲೇ, ‘ಅವರು ಮದುವೆಯಾಗಿದ್ದಾರೆ’ ಎಂಬ ಮಾತುಗಳನ್ನು ಕೇಳಿ ಪೋಷಕರು ಕಂಗಾಲಾಗಿದ್ದಾರೆ.

ಈ ಮದುವೆ ನಡೆದಿರುವುದು ನಿಜವೇ ಆದರೆ, ನಗರದಲ್ಲಿ ನಡೆದ ಮೊದಲ ‘ಸಲಿಂಗ ವಿವಾಹ’ ಇದಾಗುತ್ತದೆ. ‘ಯುವತಿಯರು ಒಟ್ಟಿಗೇ ವಾಸವಾಗಿದ್ದಾರೆ ಎಂಬುದಷ್ಟೇ ನಮಗೆ ಗೊತ್ತು. ಇನ್ನೂ ಅವರನ್ನು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಮದುವೆ ಸಂಗತಿ ನಮ್ಮ ಅರಿವಿಗೆ ಬಂದಿಲ್ಲ’ ಎಂದು ವನಿತಾ ಸಹಾಯವಾಣಿ ಸಿಬ್ಬಂದಿ ಹೇಳಿದ್ದಾರೆ.

‘ಬಿ.ಕಾಂ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದ 21 ವರ್ಷದ ನನ್ನ ಮಗಳು ಮನೆಗೆ ಹಿಂದಿರುಗಿಲ್ಲ.  25ರ ವಯೋಮಾನದ ಸಂಬಂಧಿ ಯುವತಿ ಜತೆ ಆಕೆ ಹೋಗಿರಬಹುದೆಂಬ ಅನುಮಾನವಿದೆ’ ಎಂದು ಉದ್ಯಮಿಯೊಬ್ಬರು ಮೇ 17ರಂದು ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದರು.

ADVERTISEMENT

ಮದುವೆ ಮಾತು: ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಮೇ 25ರಂದೇ ಆ ಯುವತಿಯರನ್ನು ಪತ್ತೆ ಮಾಡಿದ್ದರು. ಆಗ ಬಿ.ಕಾಂ ವಿದ್ಯಾರ್ಥಿನಿ, ‘ಪೋಷಕರ ಜತೆ ಇರಲು ನನಗೆ ಇಷ್ಟವಿಲ್ಲ. ನಾನು ಗೆಳತಿಯೊಂದಿಗೇ ಇರುತ್ತೇನೆ’ ಎಂದಿದ್ದಳು.

ಆದರೀಗ, ‘ಮಗಳು ಹಾಗೂ ಸಂಬಂಧಿ ಕೋರಮಂಗಲದ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ’ ಎಂಬ ಮಾತು ಪೋಷಕರ ಕಿವಿಗೆ ಬಿದ್ದಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಅವರು ವನಿತಾ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಿದ್ದಾರೆ. ಕೇಂದ್ರದ ಅಧಿಕಾರಿಗಳು ಕೌನ್ಸೆಲಿಂಗ್‌ಗೆ ಬರುವಂತೆ ಇಬ್ಬರಿಗೂ ಸೂಚಿಸಿದ್ದಾರೆ.

‘ಮಗಳು ಒಂದೂವರೆ ತಿಂಗಳಿನಿಂದ ಬಂಧುವಿನ ಜತೆ ನೆಲೆಸಿರುವುದಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ಪ್ರಕರಣ ತುಂಬ ಗೊಂದಲದಿಂದ ಕೂಡಿದೆ. ಯುವತಿಯರ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ರಾಣಿಶೆಟ್ಟಿ ಹೇಳಿದರು.

ಪ್ರೀತಿ ಚಿಗುರಿದ್ದು ಹೀಗೆ:  ಯುವತಿಯರಿಬ್ಬರೂ ಸೋದರ ಸಂಬಂಧಿಗಳು. ಬಾಲ್ಯದಿಂದಲೂ ಒಟ್ಟಿಗೇ ಆಡಿ ಬೆಳೆದ ಅವರಲ್ಲಿ ಕ್ರಮೇಣ ವಿಶೇಷ ಅಕ್ಕರೆ ಬೆಳೆದಿತ್ತು. ಪ್ರೌಢಾವಸ್ಥೆಗೆ ಬಂದ ಬಳಿಕ ಅದು ವ್ಯಾಮೋಹಕ್ಕೆ ತಿರುಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

25 ವರ್ಷದ ಯುವತಿ, ತನಗಿಂತ ಕಿರಿಯವಳಾದ ಸಂಬಂಧಿಗೆ ಪ್ರೇಮ ನಿವೇದನೆ ಮಾಡಲು ನಿರ್ಧರಿಸಿದ್ದಳು. ಆದರೆ, ಒಮ್ಮೆಗೆ  ಪ್ರೀತಿ ವಿಚಾರ ಪ್ರಸ್ತಾಪಿಸಿದರೆ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದಿರುವ ಆಕೆ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ, ಮೊದಲು ತನ್ನ ಮೇಲೆ ಆಕರ್ಷಣೆ ಹುಟ್ಟುವಂತೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದಳು. 

ಅಂತೆಯೇ ‘ಗೆಳತಿ’ಗೆ ಆಧುನಿಕ ಜೀವನ ಶೈಲಿಯನ್ನು ಪರಿಚಯಿಸಿದ ಆಕೆ, ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾರಂಭಿಸಿದಳು. ಆಗಾಗ್ಗೆ ಮಾಲ್‌ಗಳಿಗೂ ಕರೆದೊಯ್ದು ಶಾಪಿಂಗ್ ಮಾಡಿಸುವ ಮೂಲಕ ಒಲಿಸಿಕೊಂಡಳು. ಕ್ರಮೇಣ ಅವರ ನಡುವೆ ಆತ್ಮೀಯತೆ ಗಾಢವಾಯಿತು.

ಅವರಿಬ್ಬರ ವರ್ತನೆಯಿಂದ ಅನುಮಾನಗೊಂಡ ವಿದ್ಯಾರ್ಥಿನಿಯ ಪೋಷಕರು, ಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದರು. ಈ ಹಂತದಲ್ಲಿ ಪ್ರೇಮ ಪ್ರಕರಣ ಬಹಿರಂಗವಾಗಿ ಇಬ್ಬರ ಮನೆಗಳಲ್ಲೂ ರಾದ್ಧಾಂತವಾಗಿತ್ತು. ಆ ನಂತರ ಕೆಲ ದಿನ ಪ್ರತ್ಯೇಕಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಹೀಗಿರುವಾಗ, ಇದೇ ಮೇ ತಿಂಗಳಿನಲ್ಲಿ ಇಬ್ಬರೂ ಮನೆ ತೊರೆದು ಹೆಣ್ಣೂರಿನ ಪೇಯಿಂಗ್ ಗೆಸ್ಟ್‌ ಕಟ್ಟಡ ಸೇರಿದ್ದರು. ಆ ನಂತರ ಕೋರಮಂಗಲದಲ್ಲಿ ಬಾಡಿಗೆ ಮನೆ ಮಾಡಿದ್ದರು.

***

ಮಾನ್ಯತೆ ಇಲ್ಲದ ಮದುವೆ
‘ವಿದ್ಯಾರ್ಥಿನಿಗೆ 21 ವರ್ಷವಾಗಿದ್ದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಆಕೆ ಸ್ವತಂತ್ರಳು. ಹೀಗಾಗಿ, ಹೇಳಿಕೆ ದಾಖಲಿಸಿಕೊಂಡು ನಾಪತ್ತೆ ಪ್ರಕರಣ ಮುಕ್ತಾಯಗೊಳಿಸಿದ್ದೆವು. ಅಲ್ಲದೆ, ಆಕೆಯ ಇಚ್ಛೆಯಂತೆ ಎನ್‌ಜಿಒ ಸದಸ್ಯರ ಜತೆ ಕಳುಹಿಸಿದ್ದೆವು. ಅವರು ಮದುವೆಯಾಗಿರುವ ವಿಚಾರ ನಮಗೂ ಗೊತ್ತಿಲ್ಲ. ಮಹಿಳಾ ಸಲಿಂಗಿಗಳ (ಲೆಸ್ಬಿಯನ್) ಮದುವೆಗೆ ಕಾನೂನಿನಲ್ಲಿ ಮಾನ್ಯತೆಯೂ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.