ADVERTISEMENT

ಸಂಭ್ರಮದಲ್ಲಿ ಪದಕ ವಿಜೇತರು

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2015, 20:09 IST
Last Updated 25 ಮಾರ್ಚ್ 2015, 20:09 IST
ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದ ಡಾ. ನಿಖಿತಾ ಕೆ.ಜೈನ್‌, ಡಾ.ವಿಜೇತ ವಿಠಲ್‌ರಾಯ್‌ ರಾಣೆ, ಡಾ.ರೋಜೆರ್‌ ಲು ಸಿ ಲಾಂಗ್, ಡಾ.ಮಂಗಳ ಗೌರಿ ಅವರು ಚಿನ್ನದ ನಗೆ ಬೀರಿದ್ದು ಹೀಗೆ  ಪ್ರಜಾವಾಣಿ ಚಿತ್ರ
ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪಡೆದ ಡಾ. ನಿಖಿತಾ ಕೆ.ಜೈನ್‌, ಡಾ.ವಿಜೇತ ವಿಠಲ್‌ರಾಯ್‌ ರಾಣೆ, ಡಾ.ರೋಜೆರ್‌ ಲು ಸಿ ಲಾಂಗ್, ಡಾ.ಮಂಗಳ ಗೌರಿ ಅವರು ಚಿನ್ನದ ನಗೆ ಬೀರಿದ್ದು ಹೀಗೆ ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಅಪ್ಪ–ಅಮ್ಮನ ಪ್ರೋತ್ಸಾಹ ಮತ್ತು ಅಧ್ಯಾಪಕರ ಬೆಂಬಲದಿಂದಲೇ ಈ ಸಾಧನೆ ಸಾಧ್ಯವಾಯಿತು. ಚಿನ್ನದ ಪದಕಗಳನ್ನು ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಈಗ ಖುಷಿಯಾಗುತ್ತಿದೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ.ಮಂಗಳ ಗೌರಿ ಚಿನ್ನದ ನಗೆ ಬೀರಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಹದಿನೇಳನೆ ಘಟಿಕೋತ್ಸವದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದ ಅವರು ತಮ್ಮ ಸಂತಸ ಹಂಚಿಕೊಂಡರು.

‘ಮೂಲತಃ ಪುತ್ತೂರಿನವರಾದ ನಾವು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ನೆಲೆಸಿದ್ದೇವೆ. ಚಿಪ್ಸ್‌ ಮಾರಾಟವೇ ಉದ್ಯೋಗ. ಅದರಲ್ಲಿ ಬರುವ ಹಣದಿಂದಲೇ ಜೀವನ ಸಾಗಬೇಕು. ಕಷ್ಟದಲ್ಲಿಯೂ  ಮಗಳು ಓದಿ, ಚಿನ್ನದ ಪದಕಗಳನ್ನು ಪಡೆದಿರುವುದು ಖುಷಿ ತಂದಿದೆ’ ಎಂದು ಮಂಗಳಗೌರಿ ತಂದೆ ದಾಮೋದರ ಭಟ್‌ ಅವರು ಮಗಳನ್ನು ಹೆಮ್ಮೆಯಿಂದ ನೋಡಿದರು.

‘ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ, ಇಲ್ಲಿಯ ಅವಲಕ್ಕಿ ಇಷ್ಟ ಆಯಿತು’ ಎಂದು ಮಾತಿಗಿಳಿದ ದಾವಣಗೆರೆ ದಂತ ಕಾಲೇಜಿನ ವಿದ್ಯಾರ್ಥಿ ಡಾ.ರೋಜೆರ್‌ ಲು ಸಿ ಲಾಂಗ್ ಅವರೂ ಸಹ ಐದು ಚಿನ್ನದ ಪದಕ ಪಡೆದಿದ್ದಾರೆ. ಅವರು ಮೂಲತಃ ಮಲೇಷ್ಯಾದವರು.

‘ಮಲೇಷ್ಯಾ ಸರ್ಕಾರದ ವಿದ್ಯಾರ್ಥಿವೇತನದ ಮೇಲೆ ಇಲ್ಲಿ ಅಧ್ಯಯನ ಮಾಡಲು ಬಂದಿರುವೆ. ಮುಂದೆ ನಮ್ಮ ದೇಶಕ್ಕೆ ಮರಳಿ ಹೋಗಿ ಸೇವೆ ಮಾಡಬೇಕು. ಈಗ ಸದ್ಯ ವಿಶೇಷ ಪರಿಣತಿಯನ್ನು ಪಡೆಯಬೇಕಾಗಿದೆ’ ಎಂದು ತಮ್ಮ ಭವಿಷ್ಯದ ಬಗೆಗೆ ಹೇಳಿದರು.

ನಾಲ್ಕು ಚಿನ್ನದ ಪದಕಗಳನ್ನು ಪಡೆದ ಬಾಗಲಕೋಟೆಯ ಎಸ್‌.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ.ವಿಜೇತ ವಿಠಲ್‌ರಾಯ್‌ ರಾಣೆ ‘ಓದಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ನೆನಪಿನಲ್ಲಿರುತ್ತದೆ ಮತ್ತು ಪರೀಕ್ಷೆ ಬರೆಯಲು ಸುಲಭವಾಗುತ್ತದೆ. ಮನೆಯವರ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಯಿತು. ಮುಂದೆ ಶಿಶು ವೈದ್ಯೆಯಾಗಬೇಕೆಂಬ ಆಸೆಯಿದೆ’ ಎಂದು ಹೇಳಿದರು.

ನಾಲ್ಕು ಚಿನ್ನದ ಪದಕ ಪಡೆದ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಕಾಲೇಜಿನ ವಿದ್ಯಾರ್ಥಿನಿ ಡಾ. ನಿಖಿತಾ ಕೆ.ಜೈನ್‌ ‘ಕಾಲೇಜು ಮತ್ತು ಮನೆಯವರಿಂದ ದೊರೆತ ಪ್ರೋತ್ಸಾಹ ಹಾಗೂ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಯಿತು’ ಎಂದು ಹಂಚಿಕೊಂಡರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್‌, ‘ಸುಟ್ಟ ಚರ್ಮದ ಮರು ಬದಲಾವಣೆ, ಹಾನಿಗೊಳಗಾದ ನರದ ಮೇಲಿನ ಪ್ರತಿ ರಚನೆಗಳನ್ನು ಒದಗಿಸಲು ಮತ್ತು ಇತರೆ ಜೀವಕೋಶಗಳ ಪುನರುಜ್ಜೀವನಕ್ಕೆ ನ್ಯಾನೋ ಜೆಲ್‌ನಂತಹ ಪುನರುತ್ಪಾದಕ ಔಷಧಗಳ ತಯಾರಿಕೆಗೆ ಸಂಶೋಧಕರು ನ್ಯಾನೋ ಸಾಮಗ್ರಿಗಳತ್ತ ಗಮನ ಹರಿಸಿರುವುದು ಒಳ್ಳೆಯ ಬದಲಾವಣೆ’ ಎಂದರು.

‘ಕೃತಕ ಅಂಗಗಳ ನಿರ್ಮಾಣಕ್ಕೆ ಮತ್ತು ಅಂಗಾಂಗಗಳ ದಾನದ ಕೊರತೆಯನ್ನು ನಿವಾರಿಸಲು ನ್ಯಾನೋ ಸಾಮಗ್ರಿಗಳು ಹಾಗೂ ನ್ಯಾನೋ ತಂತ್ರಜ್ಞಾನದ ಸಾಧನಗಳು ಜೊತೆಗೂಡಿ ಉತ್ಕೃಷ್ಟವಾದ ಕೊಡುಗೆಗಳನ್ನು ನೀಡಬಹುದು’ ಎಂದು ಸಲಹೆ ನೀಡಿದರು.

ಶಸ್ತ್ರ ಚಿಕಿತ್ಸಕ ಡಾ.ಸಿ.ವಿಠ್ಠಲ್‌, ಹೃದಯ ಶಸ್ತ್ರ ಚಿಕಿತ್ಸಕ ಡಾ.ಎಂ.ಗುರಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಡಾ.ಎನ್‌.ರಾಜೀವ್‌ ಶೆಟ್ಟಿ ಅವರಿಗೆ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿ ಪ್ರದಾನ ಮಾಡಲಾಯಿತು.

ಅಭಿವೃದ್ಧಿಗೊಳ್ಳುತ್ತಿರುವ ನ್ಯಾನೋ ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ (ಅಣು) ನ್ಯಾನೋ ತಂತ್ರಜ್ಞಾನ ಕ್ಷೇತ್ರಗಳು ಭವಿಷ್ಯದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ಮತ್ತು ಔಷಧ ನಿರ್ವಹಣೆಗೆ ಒಳ್ಳೆಯ ಭರವಸೆಯನ್ನು ಮೂಡಿಸಿವೆ.
– ಡಾ.ಕೆ.ರಾಧಾಕೃಷ್ಣನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT