ADVERTISEMENT

ಸಂಶೋಧನೆಯತ್ತ ಆರೋಗ್ಯ ವಿ.ವಿ ಚಿತ್ತ

ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ವೃದ್ಧಿಗೆ ವಿವಿಧ ಸಂಸ್ಥೆಗಳೊಂದಿಗೆ ಆರ್‌ಜಿಯುಎಚ್‌ಎಸ್‌ ಒಪ್ಪಂದ

ನವೀನ್ ಕುಮಾರ್‌ ಎನ್.
Published 28 ಜೂನ್ 2017, 20:25 IST
Last Updated 28 ಜೂನ್ 2017, 20:25 IST
ಸಂಶೋಧನೆಯತ್ತ ಆರೋಗ್ಯ ವಿ.ವಿ ಚಿತ್ತ
ಸಂಶೋಧನೆಯತ್ತ ಆರೋಗ್ಯ ವಿ.ವಿ ಚಿತ್ತ   

ಬೆಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್‌) ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಅಧ್ಯಯನದ ದೃಷ್ಟಿಯಿಂದ ಮೂಲ, ಸಹಭಾಗಿತ್ವ ಹಾಗೂ ಸಮನ್ವಿತ ಸಂಶೋಧನೆ ಎಂಬುದಾಗಿ ವಿಂಗಡಿಸಲಾಗಿದೆ. ಅದರ ಆಧಾರದ ಮೇಲೆ ಸಂಸ್ಥೆಗಳ ಸಹಯೋಗ ಪಡೆಯಲಾಗಿದೆ.

ಸಹಭಾಗಿತ್ವ ಸಂಶೋಧನೆ: ‘ಸಹಭಾಗಿತ್ವ ಸಂಶೋಧನೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟೆಮ್‌ಸೆಲ್‌ ಬಯಾಲಜಿ ಅಂಡ್‌ ರೀಜನರೇಟಿವ್‌ ಮೆಡಿಸಿನ್ಸ್‌ (ಇನ್‌ಸ್ಟೆಮ್‌), ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌), ಮಾನವ ತಳಿಶಾಸ್ತ್ರ ಕೇಂದ್ರ (ಸಿಎಚ್‌ಜಿ), ಸೇಂಟ್‌ ಜಾನ್ಸ್‌ ರಿಸರ್ಚ್‌ ಅಕಾಡೆಮಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್‌. ರವೀಂದ್ರನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಸಂಸ್ಥೆಗಳಲ್ಲಿ ಹಿರಿಯ ವಿಜ್ಞಾನಿಗಳು ಹಾಗೂ ಅತ್ಯಾಧುನಿಕ ಉಪಕರಣಗಳು ಇವೆ. ನಮ್ಮಲ್ಲಿ ಕ್ಲಿನಿಕಲ್‌ ಸಂಶೋಧಕರು ಇದ್ದಾರೆ. ಅವರಿಗೆ ರೋಗಿ ಹಾಗೂ ರೋಗಗಳ ಬಗ್ಗೆ ಮಾಹಿತಿ ಇರುತ್ತದೆ. ಅವರು ನೀಡುವ ಪರಿಕಲ್ಪನೆಯ ಆಧಾರದ ಮೇಲೆ ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡುತ್ತಾರೆ’ ಎಂದರು.

‘ಐಐಎಸ್‌ಸಿ ಜತೆ 9, ಇನ್‌ಸ್ಟೆಮ್ ಜತೆ 4 ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅದರ ಸಂಶೋಧನೆ ಪ್ರಗತಿಯಲ್ಲಿದೆ’ ಎಂದು ಹೇಳಿದರು.
ಸಮಗ್ರ ಸಂಶೋಧನೆ: ‘ಅಲೋಪಥಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಾದ ಆಯುರ್ವೇದ, ಹೋಮಿಯೋಪಥಿ, ಯುನಾನಿ ಚಿಕಿತ್ಸೆ ನೀಡಲು ಸಾಧ್ಯವೇ? ಅದರಿಂದ ರೋಗಿ ಗುಣಮುಖರಾಗುತ್ತಾರೆಯೇ ಎಂಬುದರ ಬಗ್ಗೆ ಸಮಗ್ರ  ಸಂಶೋಧನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಅಲೋಪಥಿ ಚಿಕಿತ್ಸೆ ಪಡೆಯುತ್ತಿರುವ 100 ರೋಗಿಗಳು ಹಾಗೂ ಅಲೋಪಥಿಯೊಂದಿಗೆ ಸಾಂಪ್ರದಾಯಿಕ ಚಿಕಿತ್ಸೆ ಪಡೆಯುತ್ತಿರುವ 100 ರೋಗಿಗಳನ್ನು ಸಂಶೋಧನೆಗೆ ಒಳಪಡಿಸಲಾಗುತ್ತಿದೆ’ ಎಂದರು.

‘ಕೆಲ ಕ್ಷಯರೋಗಿಗಳಿಗೆ ಔಷಧ ನೀಡಿದರೂ ರೋಗ ನಿರೋಧಕ ಶಕ್ತಿ ಹೆಚ್ಚುವುದಿಲ್ಲ. ಆಯುರ್ವೇದದಲ್ಲಿ ಅಶ್ವಗಂಧ ಔಷಧ ಇದೆ. ಅದನ್ನು ನೀಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ. ಅದನ್ನು ಸಂಶೋಧನೆ ಮೂಲಕ ಸಾಬೀತು ಪಡಿಸುವುದು ನಮ್ಮ ಉದ್ದೇಶ’ ಎಂದು ವಿವರಿಸಿದರು.

ಮೂಲ ಸಂಶೋಧನೆಗೂ ಒತ್ತು: ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ 200 ಸಂಶೋಧಕರು ಮೂಲ ಸಂಶೋಧನೆಯಲ್ಲಿ ತೊಡಗಿದ್ದಾರೆ.

‘ವಿಶ್ವವಿದ್ಯಾಲಯ ವ್ಯಾಪ್ತಿಯ 650ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳ ಉಪನ್ಯಾಸಕರು, ಸಹಾಯಕ ಹಾಗೂ ಸಹ ಪ್ರಾಧ್ಯಾಪಕರು,  ಪ್ರಾಧ್ಯಾಪಕರು ಮೂಲ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬಹುದು’ ಎಂದು ರವೀಂದ್ರನಾಥ್‌ ತಿಳಿಸಿದರು.

‘2014–15ನೇ ಸಾಲಿನಲ್ಲಿ 50, 2015–16ನೇ ಸಾಲಿನಲ್ಲಿ 150 ಸಂಶೋಧಕರನ್ನು ಆಯ್ಕೆ ಮಾಡಿದ್ದು, ಅವರು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. 2014–15ನೇ ಸಾಲಿನ ಸಂಶೋಧನೆಯ ಪ್ರಬಂಧಗಳು ಈ ವರ್ಷ  ಮಂಡನೆಯಾಗಲಿವೆ’ ಎಂದರು

‘ಪ್ರಸಕ್ತ ಸಾಲಿನಲ್ಲಿ 85 ಸಂಶೋಧಕರಿಗೆ ಅವಕಾಶ ನೀಡುತ್ತಿದ್ದೇವೆ. ಆಯ್ಕೆ ಆದವರಿಗೆ ವಿಷಯದ ಆಧಾರದ ಮೇಲೆ ₹1 ಲಕ್ಷದಿಂದ ₹25 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ’ ಎಂದು ತಿಳಿಸಿದರು.

ಅರ್ಜಿ ಸಲ್ಲಿಕೆ
ಮೂಲ ಸಂಶೋಧನೆಗೆ ಅರ್ಜಿ ಸಲ್ಲಿಸಲು ಜುಲೈ 15 ಹಾಗೂ ಸಹಭಾಗಿತ್ವ ಸಂಶೋಧನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ.

ಆಯ್ಕೆ ಪ್ರಕ್ರಿಯೆ ಹೇಗೆ?
‘ವೈದ್ಯಕೀಯ, ದಂತ, ಆಯುರ್ವೇದ, ನರ್ಸಿಂಗ್‌ ಹಾಗೂ ಫಾರ್ಮಸಿ ಕಾಲೇಜುಗಳ ಬೋಧಕ ವರ್ಗದವರು ಸಂಶೋಧನೆ ನಡೆಸುವ ವಿಷಯ ಹಾಗೂ ಹೊಸ ಆವಿಷ್ಕಾರದ ಕುರಿತು ಪ್ರಸ್ತಾವ ನೀಡಬೇಕು. ಅದನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕೆ 80 ಅಂಕ ಹಾಗೂ ಸಂದರ್ಶನಕ್ಕೆ 20 ಅಂಕ ನಿಗದಿಪಡಿಸಲಾಗಿದೆ. 70ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ಉನ್ನತ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್‌. ವೆಂಕಟೇಶ್‌ ತಿಳಿಸಿದರು.

₹3.53 ಕೋಟಿ
2014–15ರಲ್ಲಿ ಸಂಶೋಧನೆಗೆ ನೀಡಿದ ಅನುದಾನ

₹6.24 ಕೋಟಿ
2015–16ರಲ್ಲಿ ಸಂಶೋಧನೆಗೆ ನೀಡಿದ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.