ADVERTISEMENT

ಸತ್ತ ಭ್ರೂಣದೊಂದಿಗೆ ಬೆಳೆದ ಶಿಶು

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 20:25 IST
Last Updated 30 ಜನವರಿ 2015, 20:25 IST

ಬೆಂಗಳೂರು: ಗರ್ಭಾಶಯದಲ್ಲಿದ್ದ ಅವಳಿ ಭ್ರೂಣಗಳ ಪೈಕಿ ಒಂದು ಸಾವನ್ನಪ್ಪಿದರೂ ಮತ್ತೊಂದು ಭ್ರೂಣದ ಮೂಲಕ ಶಿಶು ಬೆಳೆಸಿದ ಅಪರೂಪದ ಸಾಧನೆಯನ್ನು ಬಸವನಗಡಿಯ ಗುಣಶೀಲ ಆಸ್ಪತ್ರೆ ವೈದ್ಯರು ಮಾಡಿದ್ದಾರೆ.

ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಅಪರೂಪದ ಸಾಧನೆ ಎಂದೇ ಬಣ್ಣಿಸಲಾಗಿದೆ. ಅವಳಿ ಭ್ರೂಣಗಳು ಗರ್ಭಾಶಯದಲ್ಲಿ ಬೆಳೆದು ಒಂದು ಭ್ರೂಣ ಅಲ್ಲೇ ಸಾವನ್ನಪ್ಪಿದ ಕಾರಣ ಸಂಕೀರ್ಣ ಸಮಸ್ಯೆ ಉಂಟಾಗಿತ್ತು. ಜೀವಂತವಾ­ಗಿದ್ದ ಇನ್ನೊಂದು ಭ್ರೂಣವನ್ನು ಉಳಿಸಲು ತೀರಿ­ಹೋದ ಭ್ರೂಣ ತೆಗೆಯುವುದು ಅಪಾಯದ ಹೆಜ್ಜೆಯಾಗಿತ್ತು. ಜೀವಂತ ಶಿಶುವನ್ನು ಕಾಪಾ­ಡಲು ವೈದ್ಯರು ತೀರಿ ಹೋದ ಭ್ರೂಣವನ್ನು ಸತತ ೧೪ ವಾರಗಳ ಕಾಲ ಗರ್ಭದಲ್ಲೇ ಉಳಿಸಿದರು.

೨೦೧೧ರಲ್ಲಿ ಸಂತಾನಭಾಗ್ಯ ಬಯಸಿ ಉನ್ನತ ಚಿಕಿತ್ಸೆಗಾಗಿ ಗುಣಶೀಲ ಫರ್ಟಿಲಿಟಿ ಸೆಂಟರ್‌ಗೆ ಈ ದಂಪತಿ ಬಂದಿದ್ದರು. ಪ್ರನಾಳ ಶಿಶು ಚಿಕಿತ್ಸೆ ಮೂಲಕ ಸಂತಾನಭಾಗ್ಯ ಪಡೆಯಲು ನಿರ್ಧರಿಸಿದರು.

ಈ ದಂಪತಿಯನ್ನು ಐ.ವಿ.ಎಮ್. ಚಿಕಿತ್ಸೆಗೆ ಒಳಪಡಿಸಿ, ೮ ಅಂಡಾಣು ಫಲಿತಗೊಳಿಸಿ, ಅವು­ಗಳಲ್ಲಿ ೨ ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸಲಾ­ಯಿತು. ನಂತರ ಇವರು ಅವಳಿ ಭ್ರೂಣದೊಂದಿಗೆ ಗರ್ಭಿಣಿಯಾದರು. ೨೪ನೆಯ ವಾರ­ದಲ್ಲಿ ಒಂದು ಭ್ರೂಣವು ಗರ್ಭಾಶಯ­ದಲ್ಲಿಯೇ ಸತ್ತಿರುವುದು ಕಂಡುಬಂತು. 24ನೇ ವಾರದಲ್ಲಿಯೇ ಸತ್ತ ಭ್ರೂಣವನ್ನು 36ನೇ ವಾರದ ವರೆಗೆ ಗರ್ಭದಲ್ಲೇ ಉಳಿಸಿಕೊಳ್ಳಲಾಗಿತ್ತು. ಈಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮುಖ್ಯಸ್ಥೆ ಡಾ. ದೇವಿಕಾ ಗುಣಶೀಲ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.