ADVERTISEMENT

ಸಮ್ಮಿಶ್ರ ತಳಿ ಕಾರ್ಫ್‌ಮೀನು ಸಾಕಣೆಯಲ್ಲಿ ಯಶಸ್ಸು

ಮುತ್ತಾನಲ್ಲೂರಿನ ಮೀನುಗಾರ ಶ್ರೀನಿವಾಸ್ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:49 IST
Last Updated 4 ಡಿಸೆಂಬರ್ 2016, 20:49 IST

ಆನೇಕಲ್‌: ಮೀನು ಸಾಕಣೆದಾರರಿಗೆ ಅಧಿಕ ಲಾಭ ತಂದು ಕೊಡುವ ಬ್ರಿಗೇಡ್ ಕಾರ್ಫ್ ಎಂಬ ಸಮ್ಮಿಶ್ರ (ಹೈಬ್ರಿಡ್‌) ತಳಿಯ ಮೀನು ಸಾಕಣಿಕೆ ಪ್ರಾಯೋಗಿಕ ಪರೀಕ್ಷೆ ಸಫಲಗೊಂಡಿದ್ದು, ತಾಲ್ಲೂಕಿನ ರೈತರು ಇನ್ನು ಮುಂದೆ ಈ ತಳಿಯ ಮೀನು ಸಾಕುವ ಮೂಲಕ ಒಳ್ಳೆಯ ಲಾಭ ಗಳಿಸಬಹುದು.

ಮೀನುಗಾರಿಕೆ ಇಲಾಖೆ ಕೈಗೊಂಡಿದ್ದ ಈ ಯೋಜನೆಯಲ್ಲಿ ತಾಲ್ಲೂಕಿನ ಮುತ್ತಾನಲ್ಲೂರಿನ ಶ್ರೀನಿವಾಸ್ ಎಂಬ ಮೀನುಗಾರ ಯಶಸ್ವಿಯಾಗಿದ್ದಾರೆ.
ಸತತ 4 ವರ್ಷಗಳ ಕಾಲ ಈ ತಳಿಯ ಮೀನುಗಳನ್ನು ಸಾಕಿದ್ದು, ತಲಾ 28ರಿಂದ 30 ಕೆಜಿಯಷ್ಟು ತೂಕ ಇವೆ. ಸಮುದ್ರದಲ್ಲಿನ ಮೀನುಗಳ ಹೊರತಾಗಿ ಬೇರೆಡೆ ಇಷ್ಟು ತೂಕದ ಮೀನುಗಳನ್ನು ನೋಡಲು ಸಾಧ್ಯವಿಲ್ಲ. ಸಗಣಿ ಹೊರತಾಗಿ ಯಾವುದೇ ರೀತಿಯ ಆಹಾರ ಬಳಸದೇ ಸಾಕಿರುವ ಈ ಮೀನುಗಳಿಂದ ಅಧಿಕ ಆದಾಯ ಬರಲಿದೆ.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಒಂದು ಕೆಜಿ ತೂಕ ಬೆಳೆಯುವ ಕಟ್ಲ, ಸಾಮಾನ್ಯಗೆಂಡೆ, ಮುಕ್ಕಾಲು ಕೆಜಿ ತೂಕ ಬರುವ ರೋಹು, ಮೃಗಾಲ್, ಎರಡು ಕೆಜಿ ತೂಕ ಬರುವ ಬೆಳ್ಳಿಗೆಂಡೆ (ಸಿಲ್ವರ್ ಕಾರ್ಫ್) ಹಾಗೂ ಹುಲ್ಲುಗೆಂಡೆಯನ್ನು ಸಾಕಲಾಗುತ್ತದೆ. ಇವುಗಳಲ್ಲಿ ಬೆಳ್ಳಿಗೆಂಡೆ ಆಕರ್ಷಣೀಯವಾದ ಮೀನು. ಆದರೆ ಇದನ್ನು ನೀರಿನಿಂದ ಹೊರತೆಗೆದ ಸ್ವಲ್ಪ ಸಮಯದಲ್ಲೇ ಮೆತ್ತಗಾಗುವುದರಿಂದ ಹೆಚ್ಚು ಕಾಲ ಸಂಗ್ರಹಿಸಲು ಅಸಾಧ್ಯ. ಕಟ್ಲ ತಳಿ ಗಡುಸಾಗಿದ್ದು ದೀರ್ಘಕಾಲ ಸಂಗ್ರಹಿಸಬಹುದು. ಇದನ್ನರಿತ ಕೊಲ್ಕತ್ತದ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಿಲ್ವರ್ ಕಾರ್ಫ್(ಬೆಳ್ಳಿಗೆಂಡೆ) ಹಾಗೂ ಕಟ್ಲ ತಳಿಗಳ ಸಮ್ಮಿಶ್ರದಿಂದ ಈ ಬ್ರಿಗೇಡ್ ಕಾರ್ಫ್ ತಳಿಯನ್ನು ಅಭಿವೃದ್ಧಿ ಪಡಿಸಿದೆ. ಇದು ನೋಡಲು ಆಕರ್ಷಣೀಯ ಹಾಗೂ ಸಾಕಷ್ಟು ಸಮಯ ಸಂಗ್ರಹಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

ನಾಲ್ಕು ವರ್ಷಗಳ ಹಿಂದೆ ಕೊಲ್ಕತ್ತದಿಂದ ಪ್ರಾಯೋಗಿಕ ಪರೀಕ್ಷೆಗೆಂದು ಒಂದು ಸಾವಿರ ಬ್ರಿಗೇಡ್ ಕಾರ್ಫ್ ಮರಿಗಳನ್ನು ತರಿಸಲಾಗಿತ್ತು. ಮುತ್ತಾನಲ್ಲೂರಿನ ಚಿಕ್ಕಕೆರೆಯನ್ನು ಮೀನು ಸಾಕಲು ಗುತ್ತಿಗೆಗೆ ಪಡೆದಿದ್ದ ಶ್ರೀನಿವಾಸ್‌ಗೆ ನೀಡಲಾಗಿತ್ತು. ಇವುಗಳ ಜತೆ ಬೇರೆ ತಳಿಯ 2 ಸಾವಿರ ಮರಿಗಳನ್ನು ನೀರಿಗೆ ಬಿಡಲಾಗಿತ್ತು. ಈ ಕೆರೆಯಲ್ಲಿ ಇರುವ ಗುಂಡಿಗಳಲ್ಲಿ ಸದಾ ನೀರು ಇರುವುದರಿಂದ ಈ ಕೆರೆಯನ್ನು ಆಯ್ಕೆ ಮಾಡಲಾಗಿತ್ತು.

ಈಗ ಮೀನುಗಳನ್ನು ಹಿಡಿಯಲು ಆರಂಭಿಸಿದ್ದಾರೆ. ಸಮುದ್ರದಲ್ಲಿ ಸಿಗುವ ಮೀನುಗಳಷ್ಟೇ ದೊಡ್ಡ ಗಾತ್ರದ ಮೀನುಗಳು ಕೆರೆಯಲ್ಲಿ ದೊರೆತಿವೆ. ಈ ತಳಿ ದಕ್ಷಿಣ ಭಾರತದಲ್ಲಿ ಸಾಕುವುದು ಅತಿ ಅಪರೂಪ, ಜತೆಗೆ ಇಷ್ಟು ಭಾರದ ಮೀನುಗಳು ದೊರೆಯುವುದು ವಿರಳ. ಈ ತಳಿಯ ಮೀನು ಸಾಕಲು ಸಣ್ಣ ಪ್ರಮಾಣ ಹೂಡಿಕೆ ಸಾಕು ಎಂದು ಶ್ರೀನಿವಾಸ್‌ ಹೇಳುತ್ತಾರೆ.

ಮೀನುಗಾರಿಕೆ ಇಲಾಖೆ ನಾಲ್ಕು ವರ್ಷಗಳ ಹಿಂದೆ ಈ ಜಾತಿಯ ಮರಿಗಳನ್ನು ತರಿಸಿತ್ತು. ನಂತರದ ದಿನಗಳಲ್ಲಿ ಮಳೆ ಅಭಾವದಿಂದ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. ಜತೆಗೆ ಈ ತಳಿಯ ಪ್ರಾಯೋಗಿಕ ಪರೀಕ್ಷೆಯೂ ಮುಗಿದಿರಲಿಲ್ಲ. ಈಗ ಪರೀಕ್ಷೆ ಯಶಸ್ವಿಯಾಗಿದ್ದು, ಬೇರೆ ರೈತರು ಈ ತಳಿಯನ್ನು ಸಾಕಬಹುದು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಕೆರೆಯಲ್ಲೇ ದೊರೆಯುತ್ತಿದ್ದ ನೈಸರ್ಗಿಕ ಆಹಾರವನ್ನು ತಿಂದು ಮೀನುಗಳು ದಪ್ಪನಾಗಿವೆ. ಈ ತಳಿಯ ಬಗ್ಗೆ ನನಗೆ ಸಾಕಷ್ಟು ಮಾಹಿತಿಯಿರಲಿಲ್ಲ. 4 ವರ್ಷಗಳ ಹಿಂದೆ 3 ಸಾವಿರ ಮರಿ ಬಿಡಲಾಗಿತ್ತು, ಅರ್ಧದಷ್ಟು ಮೀನುಗಳನ್ನು 2 ವರ್ಷಗಳ ಹಿಂದೆ ಹಿಡಿದು ಮಾರಾಟ ಮಾಡಿದ್ದೆ. ಈಗ ಉಳಿದ ಮೀನುಗಳು 28ರಿಂದ 30 ಕೆಜಿ ಭಾರ ಇವೆ’ ಎನ್ನುತ್ತಾರೆ.

ಕೆಜಿಗೆ ₹200 ರಂತೆ ಮಾರಾಟ ಮಾಡುತ್ತೇನೆ, 30 ಕೆಜಿ ತೂಕದ ಒಂದು ಮೀನು 6 ಸಾವಿರ ಬೆಲೆ ಬಾಳುತ್ತದೆ. ಸರಾಸರಿ 25 ಕೆಜಿ ತೂಕ ಎಂದರೂ ಒಂದು ಸಾವಿರ ಮೀನುಗಳಿಗೆ 50 ಲಕ್ಷ ಆದಾಯ ಬರುತ್ತದೆ. ಈ ತಳಿ ಸಾಕಣೆಯಲ್ಲಿ ಒಳ್ಳೆಯ ಲಾಭವಿದೆ ಎಂದು ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.